ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಟುಕಲ್ಲಿನ ಮೇಲೆ ಬಣವೆ ಮಾಡಿ!

Last Updated 3 ಏಪ್ರಿಲ್ 2017, 7:35 IST
ಅಕ್ಷರ ಗಾತ್ರ

ಗಜೇಂದ್ರಗಡ: ಜಾನುವಾರುಗಳಿಗೆ ಬೇಸಿಗೆ ಬೇಗೆಯಲ್ಲಿ ನೀರು ಸಿಗುತ್ತಿಲ್ಲ. ಕಷ್ಟ ಕಾಲಕ್ಕೆ ಸಂಗ್ರಹ ಮಾಡಿ ಇಟ್ಟು­ಕೊಂಡಿರುವ ಮೇವನ್ನು  ಸಂರಕ್ಷಿಸಿ­ಕೊಳ್ಳುವುದು ರೈತರಿಗೆ ದುಸ್ತರವಾಗಿದೆ.

ಬೆಂಕಿ ಅನಾಹುತ ಒಂದೆಡೆಯಾದರೆ, ಕಳ್ಳಕಾಕರ ಕಾಟ ಮತ್ತೊಂದೆಡೆ. ಬೇರೆಯವರ ಜಾನುವಾರುಗಳು ತಿಂದು ಹಾಕುತ್ತವೆ ಎಂಬ ಭಯ  ಇನ್ನೊಂದೆಡೆ. ಹೀಗಾಗಿ ಇರುವ ಮೇವನ್ನು ರಕ್ಷಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ. ಆದರೆ ಇಲ್ಲೊಬ್ಬ ರೈತ ಕಲ್ಲಿನ ತುದಿಯಲ್ಲಿ ಹುಲ್ಲು ಮತ್ತು ಮೇವನ್ನು ಒಟ್ಟಿದ್ದು ಯಾರ ಗಮನಕ್ಕೂ ಬಂದಂತಿಲ್ಲ. ಜೊತೆಗೆ ಬೆಂಕಿ ಅನಾ­ಹುತದಿಂದಲೂ ಸಿಲುಕುವ ಯಾವುದೇ ಅಪಾಯ ಇಲ್ಲ.

ಪಟ್ಟಣದ  ಕಾಲಕಾಲೇಶ್ವರ ದೇವ­ಸ್ಥಾನದ ಬೆಟ್ಟದ ನೆತ್ತಿಯ ಮೇಲಿರುವ ಭೈರಾಪುರ ಗ್ರಾಮ ಕೆಲವು ವರ್ಷಗಳಿಂದ ನಾಗರೀಕ ಜಗತ್ತಿನಿಂದ ದೂರವಿದ್ದು ಈಗೀಗ ಸಂಪರ್ಕ ಪಡೆದುಕೊಳ್ಳುತ್ತಿದೆ. ಲಂಬಾಣಿಗರೇ ವಾಸಿಸುವ ಬೈರಾಪುರ ತಾಂಡಾ ನಿಸರ್ಗ ರಮಣೀಯವಾದ ಸ್ಥಳ.

ಈ ತಾಂಡಾ  ಸನಿಹದಲ್ಲೇ ಟಾಕರೆಪ್ಪ ಸೋಮಲೆಪ್ಪ ರಾಠೋಡ ಎಂಬುವವರು  ಎತ್ತರದ ಗೋಟು ಕಲ್ಲಿನಲ್ಲಿ ಸುಮಾರು 2 ಚಕ್ಕಡಿ ಮೇವು ಮತ್ತು ಭತ್ತದ ಹುಲ್ಲು ಸೇರಿಸಿ ಬಣವೆ ಒಟ್ಟಿದ್ದಾರೆ. ಹೀಗಾಗಿ ಇಲ್ಲಿ ಜಾನುವಾರುಗಳಲ್ಲ, ಮನುಷ್ಯರೇ ಇದನ್ನು ಏರಲು ಹರಸಾಹಸ ಪಡಬೇಕಾಗುತ್ತದೆ.

‘ಇಲ್ಲಿ ನೀರು ಅರಸಿ ಬರುವ ದನಗಳ ಕಾಟದಿಂದ ಸಾಕಾಗಿ  ಈ ಎತ್ತರದ ಕಲ್ಲಿನ ಮೇಲೆ ಬಣವೆ ಒಟ್ಟುತ್ತಾ ಬಂದಿದ್ದೇನೆ.  ನಾನು ಮೇವನ್ನು ತೆಗೆದುಕೊಳ್ಳಲು ಕಲ್ಲನ್ನು ಹಿಡಿದು ಮೇಲೇರಿ ಮೇವು ತೆಗೆದು ಕೆಳಗೆ ಹಾಕುತ್ತೇನೆ. ಕಲ್ಲಿನ ಮೇಲೆ ಬಣವೆ ಒಟ್ಟಿದ ಪರಿಣಾಮ ನನಗೆ ದನಗಳ ಕಾಟವಿಲ್ಲ, ಕಳ್ಳಕಾಕರ ಭಯ­ವೂ ಇಲ್ಲ’ಎನ್ನುತ್ತಾರೆ ಟಾಕರೆಪ್ಪ ರಾಠೋಡ.

ಬಣವೆಗೆ ನೀರು ಇಳಿಯ­ದಂತೆ ಪ್ಲಾಸ್ಟಿಕ್‌ ಬ್ಯಾನರ್‌ ಹೊದಿಸಿ, ಅದು ಗಾಳಿಗೆ ಹಾರದಂತೆ ಸುತ್ತಲು ಸಣ್ಣ  ಕಲ್ಲುಗಳನ್ನು ಇಟ್ಟು ಸಾಕಷ್ಟು ಜಾಗೃತಿ ವಹಿಸಿದ್ದಾರೆ. ಮಳೆಗಾಲದಲ್ಲಿ ಈ ಗೋಟುಗಲ್ಲಿನ ಸುತ್ತಲು ನೀರು ನಿಲ್ಲುತ್ತದೆ, ಆದರೆ ಮೇವು ಮಾತ್ರ ಹಾನಿಯಾಗುವುದಿಲ್ಲ. ಇದು ಟಾಕರೆಪ್ಪ ಅವರ ದೂರದೃಷ್ಟಿ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT