ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪದ ಅತಿಥಿಯ ಆಗಮನ

Last Updated 28 ಸೆಪ್ಟೆಂಬರ್ 2011, 7:00 IST
ಅಕ್ಷರ ಗಾತ್ರ

ಗದಗ: ಮುದ್ರಣಕಾಶಿ ಗದಗ-ಬೆಟಗೇರಿ ಅವಳಿ ನಗರಕ್ಕೆ ಅಪರೂಪದ ಅತಿಥಿಗಳ ಆಗಮನವಾಗಿದೆ. ಬಂದಿರುವ ಅತಿಥಿಗಳು ನೆಂಟರಂತೆ ರಾಜಾಥಿತ್ಯ ಬಯಸುವವರಲ್ಲ. ಬದಲಾಗಿ ಕತ್ತಲೆ ತುಂಬಿದ ಬದುಕು-ದಾರಿಗೊಂದು ಕಿರು ಬೆಳಕು ನೀಡುವ ಕೆಲಸ ಮಾಡುತ್ತಿದ್ದಾರೆ.

ಅವಳಿ ನಗರದ ಪಾಲಾ-ಬದಾಮಿ ರಸ್ತೆಯ ಭೂಮರಡ್ಡಿ ವೃತ್ತದ ಬಳಿ ಇರುವ  ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಪುತ್ಥಳಿ ಹತ್ತಿರ ಈ ಅತಿಥಿಗಳು ಬೀಡು ಬಿಟ್ಟಿದ್ದಾರೆ. ತಮ್ಮ ಜೊತೆಗೆ ತರ-ತರಹದ ದೀಪಗಳನ್ನು ತಗೆದುಕೊಂಡು ಬಂದಿದ್ದಾರೆ. ರಸ್ತೆ ಬದಿಯಲ್ಲಿ ಈ ದೀಪಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ.

ಈ ಅತಿಥಿಗಳು ನಮ್ಮೂರಿನ ಅಕ್ಕಪಕ್ಕದವರಲ್ಲ. ಬಲು ದೂರದ ರಾಜಸ್ಥಾನದಿಂದ ಬಂದಿದ್ದಾರೆ. ಅಲ್ಲಿನ ಜೋಧಪುರ ಜಿಲ್ಲೆಯ ಪಿಪಾಡಿ ಗ್ರಾಮದವರಂತೆ. ಅಲ್ಲಿಂದ ಇಲ್ಲಿಗೆ ಅತಿಥಿಗಳು ದೀಪಾವಳಿ ಬರುವ ತಿಂಗಳ ಮೊದಲೇ ರೈಲು ಹತ್ತಿ ಆಗಮಿಸಿದ್ದಾರೆ. ತಮ್ಮೂರಿನ ಕೆಂಪು ಮಣ್ಣಿನಿಂದಲೇ ತಯಾರು ಮಾಡಿರುವ ವಿವಿಧ ತರಹದ ಹಣತೆಗಳನ್ನು ತಗೆದುಕೊಂಡು ಬಂದಿದ್ದಾರೆ.

ಜೂಮರ್ ಹಣತೆ, ಗಣೇಶ ಹಣತೆ, ಶಿವಪಾರ್ವತಿ ಹಣತೆ, ದಿಲ್ ಹಣತೆ, ರೋಜ್ ಹಣತೆ, ಶಂಖ ಹಣತೆ, ಕ್ಯಾರಿ ಹಣತೆ, ತುಳಸಿಕಟ್ಟೆ ಮಾದರಿಯ ಹಣತೆ ಸೇರಿದಂತೆ ವಿವಿಧ ನಮೂನೆಯ ಹಣತೆಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಇದರೊಂದಿಗೆ ಅಲಂಕಾರಿಕ ವಸ್ತುಗಳನ್ನು ಸಹ ಇಟ್ಟಿದ್ದಾರೆ.

ಅಂದ-ಚೆಂದವಾದ ಚಿಕ್ಕ ಚಿಕ್ಕ ಹಣತೆಗಳಿವೆ. ಅವುಗಳ ಅಂದಕ್ಕೆ ಅನುಗುಣವಾಗಿಯೇ ಅವುಗಳ ಬೆಲೆಯೂ ಇದೆ.
ಕಾರ್ತಿಕ ಮಾಸದಲ್ಲಿ ಮನೆಯ ಮುಂದೆ ದೀಪ ಬೆಳಗಲು ಇಡುವ ಚಿಕ್ಕ ಹಣತೆಯ ಜೋಡಿಗೆ 10 ರೂಪಾಯಿ ಬೆಲೆ. ಐದು, ಒಂಭತ್ತು, ಹದಿನೈದು, ಇಪ್ಪತ್ತೊಂದು ಹಣತೆಗಳನ್ನು ಒಟ್ಟಾಗಿ ಜೋಡಿಸಿರುವ ಗಜ ಹಣತೆ, ನವೀನ ವಿನ್ಯಾಸದ ಆರತಿ ತಟ್ಟೆ ಹಣತೆಗಳು ಜನರನ್ನು ಆಕರ್ಷಿಸುತ್ತಿವೆ.
 
ಈ ಹಣತೆಗಳ ಬೆಲೆ 80 ರೂಪಾಯಿಯಿಂದ ಪ್ರಾರಂಭವಾಗಿ 350 ರೂಪಾಯಿವರೆಗೆ ಇದೆ. “ಪ್ರತಿ ದಿನ ಹಣತೆಗಳ ಮಾರಾಟದಿಂದ ನಾಲ್ಕೂವರೆ ಸಾವಿರ ರೂಪಾಯಿಯಿಂದ ಐದು ಸಾವಿರ ರೂಪಾಯಿವರೆಗೆ ಗಳಿಕೆ ಇದೆ” ಎಂದು `ಅತಿಥಿ~ಗಳಾದ ಮುನಿಮ್ ಮತ್ತು ಗೋಪಾಲ್ ತಿಳಿಸಿದರು.

“ನಮ್ಮೂರಿನಲ್ಲಿ ಗುಡಿ ಕೈಗಾರಿಕೆಯನ್ನು ಪ್ರಾರಂಭಿಸಿದ್ದೇವೆ. ಅ್ಲ್ಲಲಿಯೇ ವಿವಿಧ ವಿನ್ಯಾಸದ ಹಣತೆ ತಯಾರು ಮಾಡುತ್ತೇವೆ. ಪ್ರತಿ ವರ್ಷ ದೀಪಾವಳಿಗೆ ಇಲ್ಲಿಗೆ ಆಗಮಿಸುತ್ತೇವೆ. ಗದುಗಿಗೆ ಬರುವುದಕ್ಕೆ ಪ್ರಾರಂಭಿಸಿ ಮೂರು ವರ್ಷವಾಯಿತು. ದೀಪಾವಳಿ ಮಾರಾಟ ಮುಗಿಸಿಕೊಂಡು ಊರಿಗೆ ಹೋಗುತ್ತೇವೆ. ಮತ್ತೆ ಬೇಸಿಗೆ ಕಾಲಕ್ಕೆ ಬರುತ್ತೇವೆ. ಆಗ ಕೆಂಪು ಮಣ್ಣಿನಿಂದ ಮಾಡಿದ ಮಡಿಕೆ, ಕುಡಿಕೆ ಹಾಗೂ ನೀರು ಸಂಗ್ರಹಿಸಿ ಇಡುವ ಚಿಕ್ಕಟ್ಯಾಂಕ್‌ಗಳನ್ನು ಮಾರಾಟ ಮಾಡುತ್ತೇವೆ” ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT