ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ಜಾನುವಾರು ಮಾರಾಟ

ಮೇವಿನ ಸಮಸ್ಯೆ: ಅನ್ನದಾತನ ಅನಿವಾರ್ಯತೆ, ಭಾರ ಮನಸ್ಸಿನಿಂದ ದುಡಿಮೆಯ ಸಂಗಾತಿಗೆ ವಿದಾಯ
Last Updated 20 ಫೆಬ್ರುವರಿ 2017, 6:20 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ಮೇವಿನ ಕೊರತೆ ಜತೆಗೆ ಲಭ್ಯ ಇರುವ ಗುಣಮಟ್ಟದ ಮೇವು ತುಂಬಾ ದುಬಾರಿ ಆಗಿರುವುದರಿಂದ ರೈತರು ಅನಿವಾರ್ಯವಾಗಿ ಪ್ರೀತಿಯಿಂದ ಸಾಕಿದ ಜಾನುವಾರುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಗದುಗಿನ ಎಪಿಎಂಸಿ ಆವರಣ ದಲ್ಲಿ ಪ್ರತಿ ಶನಿವಾರ ನಡೆಯುವ ಜಾನುವಾರು ಸಂತೆಗೆ ಎತ್ತುಗಳನ್ನು ಮಾರಾಟ ಮಾಡಲು ತರುತ್ತಿ ರುವ ರೈತರ ಸಂಖ್ಯೆ ಪ್ರತಿ ವಾರ ಏರಿಕೆಯಾಗುತ್ತಿದೆ.

ಜಲ್ಲಾಡಳಿತ ಜಿಲ್ಲೆಯಲ್ಲಿ 5 ಕಡೆ ಗೋಶಾಲೆ ತೆರೆ ದಿದೆ. ಹಾಗೂ 6 ಕಡೆ ಮೇವು ಬ್ಯಾಂಕ್‌ಗಳನ್ನು ಪ್ರಾರಂಭಿಸಿದೆ. ಆದರೆ, ಮೇವು ಬ್ಯಾಂಕ್‌ಗಳಲ್ಲಿ ಸಿಗುವ ಮೇವು ತುಂಬಾ ಹಳೆಯದು ಮತ್ತು ಕಳಪೆ ಗುಣಮಟ್ಟದ್ದು. ಟೆಂಡರ್‌ ಮೂಲಕ ಜಿಲ್ಲಾಡಳಿತ ಈ ಮೇವನ್ನು ಖಾಸಗಿ ಪೂರೈಕೆದಾರರಿಂದ ಖರೀದಿ ಸಿದೆ. ಒಂದೆರಡು ವರ್ಷ ಹಳೆಯದಾದ ಈ ಮೇವು ಜಾನುವಾರುಗಳಿಗೆ ತಿನ್ನಲು ಯೋಗ್ಯವಾಗಿಲ್ಲ.

ಪುಡಿ ಪುಡಿಯಾಗಿರುವ ಹೊಟ್ಟು ಮೇವನ್ನು ತಿಂದರೆ ಎತ್ತುಗಳ ನಾಲಗೆ ಊದಿಕೊಳ್ಳುತ್ತದೆ. ಸರಿಯಾಗಿ ಜೀರ್ಣವಾಗುವುದಿಲ್ಲ. ಜತೆಗೆ ಶೇಖರಿಸಿ ಇಟ್ಟಿರುವ ಮೇವಿನಲ್ಲಿ ಸರಿಯಾಗಿ ಗಾಳಿಯಾಡದೆ ಕಮಟು ವಾಸನೆ ಬರುತ್ತಿದೆ. ಹೀಗಾಗಿ ಇಂತಹ ಮೇವನ್ನು ತಿನ್ನಲು ಎತ್ತುಗಳು ಇಷ್ಟಪಡುವುದಿಲ್ಲ. ಜತಗೆ ಕುಡಿ ಯುವ ನೀರಿನ ಅಭಾವ ತೀವ್ರವಾಗಿದೆ. ಹೀಗಾಗಿ, ಪ್ರೀತಿಯಿಂದ ಸಾಕಿದ  ಜಾನುವಾರು ಗಳನ್ನು ಅನಿವಾರ್ಯವಾಗಿ ಮಾರಾಲು ತಂದಿದ್ದೇವೆ ಎಂದು ತಮ್ಮ ನೋವು ತೋಡಿಕೊಂಡರು ಕಣವಿ ಗ್ರಾಮದ ರೈತ ರಾಚಯ್ಯ.

ಮೇವಿನ ದರ ಗಗನಕ್ಕೆ: ಈ ಬಾರಿ ಮುಂಗಾರು ಮತ್ತು ಹಿಂಗಾರು ಬೆಳೆ ಜಿಲ್ಲೆಯಲ್ಲಿ ಕೈಕೊಟ್ಟಿದೆ. ಹೀಗಾಗಿ, ಮೇವಿಗೆ ತೀವ್ರ ಕೊರತೆ ಉಂಟಾಗಿದೆ. ಜತೆ ಮೇವಿನ ದರವೂ ಕಳೆದ ವರ್ಷಕ್ಕೆ ಹೋಲಿಸಿ ದರೆ ದುಪ್ಪಟ್ಟಾಗಿದೆ. ಒಂದು ಟ್ರ್ಯಾಕ್ಟರ್ ಬಿಳಿ ಜೋಳದ ದಂಟಿನ ಮೇವಿಗೆ ₹ 6ರಿಂದ ₹ 8 ಸಾವಿರ ಬೆಲೆ ಇದೆ. ಕಳೆದ ವರ್ಷ ಇದು ₹ 4ರಿಂದ ₹ 5 ಸಾವಿರ ಆಸುಪಾಸಿನಲ್ಲಿತ್ತು. ಹೊಟ್ಟು ಮೇವಿನ ಬೆಲೆ ₹ 4ರಿಂದ ₹ 5 ಸಾವಿರದವರೆಗೆ ಇದೆ. ಜಿಲ್ಲೆಯಲ್ಲಿ ಎಲ್ಲೂ ಹಸಿ ಮೇವು ಲಭ್ಯವಿಲ್ಲ. ಶೇಂಗಾ ಹೊಟ್ಟು ಜಾನುವಾರುಗಳು ತಿನ್ನುತ್ತವೆ. ಅನಿವಾರ್ಯವಾಗಿ ಬಿಳಿಜೋಳದ ದಂಟು ಕೊಡುತ್ತಿದ್ದೇವೆ.

ಜಿಲ್ಲಾಡಳಿತ ಮೇವು ಬ್ಯಾಂಕ್‌ ಮೂಲಕ ಸಬ್ಸಿಡಿ ದರದಲ್ಲಿ ಮೇವು ಮಾರಾಟ ಮಾಡುತ್ತಿದೆ. ಆದರೆ, ಇಲ್ಲಿ ಕೆ.ಜಿಗೆ ₹ 3  ನೀಡಿ ಮೇವು ಖರೀದಿಸಬೇಕು. ಪ್ರತಿ ದಿನ ಎತ್ತಿನ ಜೋಡಿಯೊಂದಕ್ಕೆ ಸರಾಸರಿ 15 ಕೆ.ಜಿ ಮೇವು ಬೇಕು. ಕೆಲವರ ಬಳಿ ಎರಡಕ್ಕಿಂತ ಹೆಚ್ಚಿನ ಎತ್ತುಗಳಿರುತ್ತವೆ. ಬರದ ಬವಣೆಯಿಂದ ತತ್ತರಿಸಿರುವ ರೈತರಿಗೆ ಪ್ರತಿ ನಿತ್ಯ ಮೇವಿಗಾಗಿ ಮತ್ತೆ ₹ 50ರಿಂದ ₹ 100 ಖರ್ಚು ಮಾಡುವುದು ಕಷ್ಟ ಎಂಬುದು  ಎರೆಹಂಚಿನಾಳ ಗ್ರಾಮದ ರೈತ ರಾಮ ರಡ್ಡಿ ಅಬ್ಬಿಗೇರಿ ಅವರ ಅನಿಸಿಕೆ.

ಬಂಧುಗಳಿಗೆ ಎತ್ತು, ಎಮ್ಮೆ ದಾನ
ಜಾನುವಾರುಗಳನ್ನು ಸಾಕಲು ಸಾಧ್ಯವಾಗದ ರೈತರು ಅದನ್ನು ನೀರಾವರಿ ಸೌಲಭ್ಯ ಹೊಂದಿರುವ ಜಮೀನು ಹೊಂದಿರುವ ತಮ್ಮ ಬಂಧುಗಳಿಗೆ ದಾನವಾಗಿ ನೀಡುತ್ತಿದ್ದಾರೆ. ಕೆಲವರು ಮೇವು ಹಾಗೂ ನೀರು ಲಭ್ಯವಿರುವ ಗ್ರಾಮಗಳ ಪರಿಚಯಸ್ಥರಿಗೆ, ಬಂಧುಗಳಿಗೆ ಎತ್ತು, ಹಸು, ಎಮ್ಮೆ ಸಾಕಲು ನೀಡುತ್ತಿದ್ದಾರೆ. ನೀರಾವರಿ ಇರುವ ಪ್ರದೇಶದಲ್ಲಾದರೂ ದೊರೆಯುವ ಅಷ್ಟಿಷ್ಟು ಮೇವು ತಿಂದು ಮೂಕ ಪ್ರಾಣಿಗಳು ಬದುಕಲಿ, ಕಟುಕರಿಗೆ ಮಾರಾಟ ಮಾಡುವುದು ಬೇಡ ಎಂದು ಹೀಗೆ ಮಾಡುತ್ತಿದ್ದಾರೆ ಎಂದು ರೈತ ರಾಚಯ್ಯ ಮೇವಿನ ಸಮಸ್ಯೆಯ ಗಂಭೀರತೆ ತೆರೆದಿಟ್ಟರು.
ಬೆಲೆಯೂ ಕುಸಿತ: ಮುಂಗಾರು ಆರಂಭದಲ್ಲಿ ಕಟ್ಟು ಮಸ್ತಾದ ಜೋಡಿ ಎತ್ತಿಗೆ ಸರಾಸರಿ ₹ 80 ಸಾವಿರದಿಂದ ₹ 1 ಲಕ್ಷ ದರ ಇತ್ತು. ಆದರೆ, ಈಗ ಬರದ ಪರಿಣಾಮ ಬೆಲೆ ಅರ್ಧದಷ್ಟು ಇಳಿದಿದೆ.  ರೈತರು ಸಹ ಚೌಕಾಸಿಗೆ ಇಳಿಯದೇ, ಕೇಳಿದ ದರಕ್ಕೆ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಗದುಗಿನ ಎಪಿಎಂಸಿ ಆವರಣದಲ್ಲಿ ಶನಿವಾರ ನಡೆದ ಜಾನುವಾರು ಸಂತೆಯಲ್ಲಿ ಜೋಡಿ ಎತ್ತುಗಳು ಸರಾಸರಿ ₹ 30 ಸಾವಿರದಿಂದ ₹ 40 ಸಾವಿರಕ್ಕೆ ಮಾರಾಟವಾದವು.

- ಹುಚ್ಚೇಶ್ವರ ಅಣ್ಣಿಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT