ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಭುಲಿಂಗೇಶ್ವರನ ತೇರನೆಳೆಯುತಾರ ತಂಗಿ...

Last Updated 18 ಆಗಸ್ಟ್ 2013, 10:11 IST
ಅಕ್ಷರ ಗಾತ್ರ

ನರಗುಂದ ಎಂದೊಡನೆ ಸ್ವಾತಂತ್ರ್ಯ ಹೋರಾಟ, ರೈತ ಚಳವಳಿ ಎಂದು ನೆನಪಿಗೆ ಬರುವಂತೆ, ಜಾತ್ಯತೀತ, ಪುಣ್ಯಾರಣ್ಯ ಪತ್ರೀವನದ ಸ್ವಾಮಿಗಳು ನೆನಪುಗೆ ಬರುತ್ತಾರೆ. ನರಗುಂದದ ನೆಲಜಲಕೆ, ಜನಜೀವನಕ್ಕೆ ಜೀವನ ತುಂಬಿದ ಅವರ ಜೀವನೋತ್ಸಾಹ ಮಾದರಿಯದಾಗಿದ್ದಿತು. 

ನರಗುಂದದ ಪತ್ರೀವನ ಅದೊಂದು ಸರ್ವೋತ್ತಮತೆಯನ್ನು ಸಾರುವ ಪುಣ್ಯಕ್ಷೇತ್ರ. ಅಲ್ಲಿನ ವೀರಪ್ಪಜ್ಜೇಂದ್ರರು ಸರ್ವರನ್ನೂ ಸನ್ಮಾರ್ಗದತ್ತ ಕೊಂಡೊಯ್ದಿದ್ದರು. ಧರ್ಮದ ಬದುಕಿನಿಂದ ನರಗುಂದದ ನೆಲದ ಮೇಲೆ ಜ್ಞಾನ ಬೆಳಕಿನ ಬೀಜ ಬಿತ್ತಿ-ಬೆಳೆದರು. ಅವರ ಕಾಯಕ ಭೂಮಿಯು ತಪೋವನವಾಗಿ, ಪುಣ್ಯಾರಣ್ಯ ಪತ್ರೀವನವಾಯಿತು.

ಬುದ್ಧ-ಬಸವ- ಗಾಂಧೀಜಿ ಪ್ರಜ್ಞೆಯ ವೀರಪ್ಪಜ್ಜ, ಶಿವಯ್ಯಜ್ಜ ಹಾಗೂ ಶಂಭುಲಿಂಗ ಸ್ವಾಮಿಗಳು ಇಲ್ಲಿ ಲಿಂಗರೂಪಿಯಾಗಿ ನೆಲೆನಿಂತವರು. ಶಿವಕ್ಷೇತ್ರವಾಗಿರುವ ಈ ಪತ್ರೀವನಕ್ಕೆ ಅಜ್ಜಪ್ಪನ ಮಠ ಎಂತಲೂ ಹೆಸರು. ಹುಲಸೇರ ಖಂಡಪ್ಪನೇ ಮೊದಲ ಶಿಷ್ಯ. `ಅಜ್ಜಪ್ಪ'ನೆಂಬ ಸಂತನೇ ಮಠದ ಮೊದಲ ಭಕ್ತ. ಇಲ್ಲಿಯ ಶಂಭುಲಿಂಗ ದೇವಾಲಯವನ್ನು ನಿರ್ಮಿಸಿದವರು ಬ್ರಿಟಿಷ್ ಅಧಿಕಾರಿ ಧೋಂಡಿಬಾ ಬೋಸಲೆ ಜಮಾದಾರರು.

ಇಲ್ಲಿರುವ ಗವಿಯನ್ನು ನಿರ್ಮಿಸಿದವರು ಕಲಿಯುಗದ ಕರ್ಣನೆಂಬ ಅಭಿದಾನ ಹೊತ್ತ ಸಿರಸಂಗಿ ಲಿಂಗರಾಜರು. ವೀರಪ್ಪಜ್ಜನವರಿಗೆ ಗುರುವಾಗಿ ಧರ್ಮೋಪದೇಶ ಮಾಡಿದವರು ಬನಹಟ್ಟಿಯ ರುದ್ರಸ್ವಾಮಿಗಳು.

ಹುಬ್ಬಳ್ಳಿಯ ಸಿದ್ಧಾರೂಢರು, ನವಲಗುಂದದ ನಾಗಲಿಂಗ, ಗರಗದ ಮಡಿವಾಳ, ಸಾವಳಗಿ ಶಿವಲಿಂದ, ಹೊಸಹಳ್ಳಿಯ ಬೂದಿಸ್ವಾಮಿ, ಶಿಶುನಾಳ ಶರೀಫರು ಇವರೆಲ್ಲ ಸಮಕಾಲೀನರು, ಸಮಾನಮನಸ್ಕರು. ಸದ್ಯದ ಪೀಠಾಧಿಪತಿಗಳಾದ ಸಿದ್ಧವೀರ ಶಿವಯೋಗಿಗಳು, ಸಾರ್ಥಕ ಸಾಧನೆಗಳಿಂದ, ಮೌಲಿಕ ಸಮಾವೇಶಗಳಿಂದ, ಸಾಹಿತ್ಯ, ಸಂಗೀತ, ಶಿಕ್ಷಣ, ಸಂಸ್ಕೃತಿಗಳಿಂದ ಎಲ್ಲಕ್ಕೂ ಹೆಚ್ಚಾಗಿ ಜಾತ್ಯತೀತ ನಿಲುವುಗಳಿಂದ ಈ ಕ್ಷೇತ್ರವನ್ನು ನಾಡಿನ ಗಮನ ಸೆಳೆಯುವಂತೆ ಮಾಡಿದ್ದಾರೆ.

ಸದಾ ತೆರೆದ ಬಾಗಿಲಿನ ಕೈಲಾಸ ಮಂಟಪ, ಅಮೃತಶಿಲೆಯ ಹಾಸುಗಲ್ಲಿನ ಮೇಲೆ ಪೂರ್ವಾಭಿಮುಖವಾಗಿರುವ ವೀರಪ್ಪಜ್ಜ, ಶಿವಯ್ಯಜ್ಜ ಹಾಗೂ ಶಂಭುಲಿಂಗ ಸ್ವಾಮಿಗಳ ಅಮೃತಶಿಲೆಯ ಮೂರ್ತಿಗಳು, ಗೋಡೆಯ ಮೇಲಿನ ಭಾವಚಿತ್ರ, ಧರ್ಮಸಂದೇಶದ ಸಾಲುಗಳು... ನೋಡುತ್ತ ನಿಂತವರಿಗೆ ತ್ರಿಮೂರ್ತಿಗಳ ಮುಂದೆ ಧ್ಯಾನಸ್ಥರಾಗಿ ಕೂಡುವಂತೆ ವಾತಾವರಣವೇ ಪ್ರೇರಣೆ ನೀಡುತ್ತದೆ.

ಇಂಥ ದೈವೀನೆಲದಲ್ಲಿ ಇದೇ 19ರಂದು ಸೋಮವಾರ ಶಂಭುಲಿಂಗನ ರಥೋತ್ಸವ ನಡೆಯಲಿದೆ. ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಪುರಾಣ, ಪ್ರವಚನ, ಶಿವಭಜನೆ ನಡೆಯುತ್ತವೆ.  `ಶ್ರೀ ಶಂಭುಲಿಂಗ' ಪ್ರಶಸ್ತಿ ನೀಡುವ ಮೂಲಕ ನಾಡಿನ ಗಣ್ಯರನ್ನು ಸನ್ಮಾನಿಸಲಾಗುತ್ತಿದೆ.

ಕುಣಿತ ಹಾಡಿನ ಸಾಮರಸ್ಯದ ಕೋಲಾಟ, ತಾಳ-ಲಯದ ಕರಡಿ ಮಜಲು, ಶಹನಾಯಿಯ ಸುಸ್ವರ, ಶಿವಸ್ತೋತ್ರದ ಆತ್ಮಮುಖಿಯಾದ ಭಜನೆ, ಹೆಜ್ಜೆಯ ಮೇಲೆ ಹೆಜ್ಜೆ ಹಾಕುತ್ತ ಬರುವ ಅಲಾವಿ ಕುಣಿತಗಳು, ಗತ್ತು-ಗಮ್ಮತ್ತಿನ ನಗಾರಿ, ನರ್ತನ, ಐತಿಹಾಸಿಕ, ಸಾಮಾಜಿಕ, ಸಮಕಾಲೀನ ಬದುಕಿನ ವಿವಿಧ ಮಗ್ಗಲುಗಳ ವೇಷಭೂಷಣಗಳು ತೇರಿನ ಮುಂದೆ ಪ್ರದರ್ಶಿತವಾಗುತ್ತವೆ. ಬೆಟಗೇರಿ ಕೃಷ್ಣಶರ್ಮರು `ನಮ್ಮೂರ ಜಾತ್ರೆ ಬಲು ಜೋರ...' ಎಂದು ಇದನ್ನು ನೋಡಿ ಹಾಡಿರಬೇಕು. ಶಿಶುನಾಳ ಶರೀಫರು `ತೇರ ಎಳೆಯುತಾರ ತಂಗಿ...'  ಎಂದು ಬರೆದಿರಬೇಕು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT