ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜು

Last Updated 13 ಡಿಸೆಂಬರ್ 2011, 6:40 IST
ಅಕ್ಷರ ಗಾತ್ರ

ಗದಗ: ಜಿಲ್ಲಾ ಪಂಚಾಯಿತಿ ಆಡಳಿತ ಚುಕ್ಕಾಣಿಯನ್ನು ಇದೇ ಮೊದಲ ಬಾರಿಗೆ ಹಿಡಿದುಕೊಂಡಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಹತ್ತು ತಿಂಗಳ ಆಡಳಿತವನ್ನು ನಿರಾತಂಕವಾಗಿ ಮುಗಿಸಿದೆ.

ಈಗಾಗಲೇ ಪಕ್ಷದ ಆಂತರಿಕ ವಲಯದಲ್ಲಿ ಆಗಿರುವ ಒಪ್ಪಂದದ ಪ್ರಕಾರ ಮೊದಲ ಅವಧಿಯಲ್ಲಿ 10 ತಿಂಗಳ ಕಾಲ ಅಧಿಕಾರ ನಡೆಸಿದವರು ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷ- ಉಪಾಧ್ಯಕ್ಷರ ಸ್ಥಾನಕ್ಕೆ ಇದೇ16ರಂದು ಚುನಾವಣೆ ನಡೆಸಲು ಮುಹೂರ್ತ ನಿಗದಿಯಾಗಿದೆ. ಇದರಿಂದಾಗಿ ಗದ್ದುಗೆ ಹಿಡಿಯಲು ಬಿಜೆಪಿಯಲ್ಲಿಯೇ ಹಲವಾರು ಮಂದಿ ಪ್ರಯತ್ನಿಸುತ್ತಿದ್ದಾರೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಬಿಜೆಪಿಯಿಂದ ಗೆದ್ದಿರುವ ಮಹಿಳಾ ಸದಸ್ಯರೆಲ್ಲರೂ ಸ್ಪರ್ಧಾ ಆಕಾಂಕ್ಷಿಗಳಾಗಿದ್ದರೂ ಎಲ್ಲರಿಗೂ ಈ ಬಾರಿಯ ಅಧ್ಯಕ್ಷ ಸ್ಥಾನ `ನೀರಿನಲ್ಲಿ ಕಾಣುವ ಚಂದ್ರನ ಬಿಂಬ~ದಂತೆ.
 
ಏಕೆಂದರೆ ಮೊದಲ ಅವಧಿಗೆ ಶಾಸಕ ಕಳಕಪ್ಪ ಬಂಡಿ ಪ್ರತಿನಿಧಿಸುವ ರೋಣ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಸೂಡಿಯ ಬಸವರಾಜೇಶ್ವರಿ ಪಾಟೀಲ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎನ್ನುವ ಪ್ರಬಲ ಕೂಗು ಇತ್ತು. ಆದರೆ ನಂತರ ದಿನಗಳಲ್ಲಿ ನಡೆದ `ಕೃಷ್ಣ ಸಂಧಾನ~ದ ಫಲವಾಗಿ ಸಚಿವ ಸಿ.ಸಿ. ಪಾಟೀಲ ಪ್ರತಿನಿಧಿಸುವ ನರಗುಂದ ಕ್ಷೇತ್ರ ವ್ಯಾಪ್ತಿಗೆ ಬರುವ ಲಕ್ಕುಂಡಿಯ ಚಂಬವ್ವ ಪಾಟೀಲ ಅಧ್ಯಕ್ಷೆಯಾದರು. ಇದರಿಂದ ಕೊಟ್ಟ ಮಾತಿನಂತೆ ಈ ಸಲ ಬಸವ ರಾಜೇಶ್ವರಿ ಪಾಟೀಲ ಅವರು ಅಧ್ಯಕ್ಷೆಯಾಗುವುದು ಖಚಿತ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

 ಹತ್ತು ತಿಂಗಳಲ್ಲಿ ಗದುಗಿನ ರಾಜಕಾರಣದಲ್ಲಿ ಸಾಕಷ್ಟು ನೀರು ಹರಿದಾಡಿದೆ. ಸ್ಪಷ್ಟ ಬಹುಮತವಿದ್ದರೂ (11) ಬಿಜೆಪಿಯ ಪಾಳೆಯದಲ್ಲಿ ಆತಂಕವೂ ಇದೆ. ಕಳೆದ ಬಾರಿ ಪಕ್ಷದ  ಸದಸ್ಯೆಯೊಬ್ಬರು ಬಂಡಾಯದ ಬಾವುಟ ಹಾರಿಸಿ, ಕೆಲವು ದಿನಗಳ ಕಾಲ ಭೂಗತರಾಗಿ, ಅಲ್ಲಿಂದಲೇ ಕುರ್ಚಿ ಹಿಡಿಯಲು ಬೇಕಾದ ಸಂಪನ್ಮೂಲಗಳನ್ನು ಕ್ರೋಡೀಕರಿಸುವ ಕೆಲಸದಲ್ಲಿ ತೊಡಗಿದ್ದು, ಅವರನ್ನು ಮಾಜಿ ಸಚಿವ ಬಿ.ಶ್ರೀರಾಮುಲು ಸಮಾಧಾನಗೊಳಿಸಿದ್ದು ಎಲ್ಲವನ್ನು ಬಿಜೆಪಿಯ ಜಿಲ್ಲಾ ನಾಯಕರು ಇನ್ನು ಮರೆತಿಲ್ಲ.

ಅಲ್ಲದೇ ಈಗ ಶ್ರೀರಾಮುಲು ಬಿಜೆಪಿಯಲ್ಲಿ ಇಲ್ಲ. ಇದು ಸಹ ಪಕ್ಷಕ್ಕೆ ಪ್ರಬಲ ಹಿನ್ನೆಡೆಯಾಗಿದೆ. ಪಕ್ಷದ ಚಿಹ್ನೆಯಡಿ ಗೆದ್ದಿದ್ದರೂ ಆಂತರಿಕವಾಗಿ ಕೆಲವು ಸದಸ್ಯರು ಶ್ರೀರಾಮುಲು ಪರವಾಗಿ ಇದ್ದಾರೆ. ಈ `ಜ್ವಾಲಾಮುಖಿ~ ಯಾವಾಗ ಸ್ಫೋಟಗೊಳ್ಳುತ್ತದೋ ಎನ್ನುವ ದುಗುಡವೂ ಬಿಜೆಪಿಯಲ್ಲಿ ಇದೆ.

ಉಪಾಧ್ಯಕ್ಷ ಸ್ಥಾನಕ್ಕೆ ಅಷ್ಟಾಗಿ ಪೈಪೋಟಿ ಇಲ್ಲ. ಬಿಸಿಎಂ (ಎ)ಗೆ ಮೀಸಲಾಗಿರುವ ಸ್ಥಾನವನ್ನು ಇಲ್ಲಿವರೆಗೆ ಡಂಬಳ ಕ್ಷೇತ್ರದ ಬೀರಪ್ಪ ಬಂಡಿ ಅಲಂಕರಿಸಿದ್ದರು. ಈಗ ಶಾಂತ ದಂಡಿನ ಹಾಗೂ ಕಮಲವ್ವ ಸಜ್ಜನರ ಅವರ ಹೆಸರುಗಳು ಕೇಳಿ ಬರುತ್ತಿವೆಯಾದರೂ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದವರು ಎಂಬ `ನಾಮ~ವು ಶಾಂತ ದಂಡಿನ ಅವರ ಕಡೆಗೆ ಒಂದು ಗುಲಗಂಜಿ ತೂಕದಷ್ಟು ತಕ್ಕಡಿ ವಾಲುವಂತೆ ಮಾಡಿದೆ.

ಪ್ರವಾಸ ಶುರು: ಪಕ್ಷದ ಹಿಡಿತದಲ್ಲಿರುವ ಅಧಿಕಾರ ಕೈ ತಪ್ಪಬಾರದು ಎನ್ನುವ ಉದ್ದೇಶದಿಂದ ಬಿಜೆಪಿಯ ಎಲ್ಲ 11 ಜನ ಸದಸ್ಯರನ್ನು ಸೋಮವಾರ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗಿದೆ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಡಿ.16 ರಂದು ವಾಪಸ್ ಗದುಗಿಗೆ ಆಗಮಿಸಿ ನಿಗದಿಪಡಿಸಿರುವವರು ನಾಮಪತ್ರ ಸಲ್ಲಿಸುವಂತೆ ಮಾಡುವುದೇ ಈ ಪ್ರವಾಸದ ತಂತ್ರವಾಗಿದೆ.

ಸದಸ್ಯರಲ್ಲಿ ಬಹುತೇಕ ಮಂದಿ ತಮ್ಮ ಕುಟುಂಬದವರನ್ನು ಕರೆದುಕೊಂಡು ಹೋಗಿದ್ದಾರೆ. ಎಲ್ಲರೂ ದಕ್ಷಿಣ ಕರ್ನಾಟಕದ ಪ್ರಸಿದ್ಧ ಯಾತ್ರಸ್ಥಳಗಳು ಹಾಗೂ ರಾಜಧಾನಿ ಬೆಂಗಳೂರು, ಅರಮನೆ ನಗರಿ ಮೈಸೂರನ್ನು ನೋಡಿಕೊಂಡು ಬರುತ್ತಾರೆ ಎಂದು ಪಕ್ಷದ ವಿಶ್ವಾಸನೀಯ ಮೂಲಗಳು `ಪ್ರಜಾವಾಣಿ~ಗೆ ದೃಢಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT