ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಪತ್ರಕ್ಕಾಗಿ ಅರಣ್ಯ ಕಚೇರಿ ಕಟ್ಟಡ ಏರಿದ ಗ್ರಾ.ಪಂ ಉಪಾಧ್ಯಕ್ಷ

ಡಿಎಫ್‍ಒ ಮೋಹನಕುಮಾರ್ ದೌಡು: ಅರಣ್ಯ ಮತ್ತು ಕಂದಾಯ ಜಂಟಿ ಸರ್ವೆ ಕಾರ್ಯ ಚುರುಕು ಭರವಸೆ
Last Updated 4 ಡಿಸೆಂಬರ್ 2019, 14:17 IST
ಅಕ್ಷರ ಗಾತ್ರ

ಹೊಸನಗರ: ಮನೆಯ ಹಕ್ಕುಪತ್ರ ಪಡೆಯಲು ಅರಣ್ಯ ಇಲಾಖೆ ಎನ್‍ಒಸಿ ನೀಡುತ್ತಿಲ್ಲ ಎಂದು ಆರೋಪಿಸಿ ಮೂಡುಗೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಬುಧವಾರ ನಗರ ಚಿಕ್ಕಪೇಟೆಯಲ್ಲಿರುವ ವಲಯ ಅರಣ್ಯಾಧಿಕಾರಿ ಕಚೇರಿ ಕಟ್ಟಡ ಏರಿ ಪ್ರತಿಭಟನೆ ನಡೆಸಿದರು.

ಮೂಡುಗೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ 220ರಲ್ಲಿ ಸುಮಾರು 128 ಕುಟುಂಬಗಳಿಗೆ ವಾಸದ ಮನೆಯ ಹಕ್ಕುಪತ್ರ ಪಡೆಯುವಲ್ಲಿ ಅರಣ್ಯ ಇಲಾಖೆ ಎನ್‍ಒಸಿ ನೀಡುತ್ತಿಲ್ಲ. ಈ ಬಗ್ಗೆ ನಿರಂತರ ಹೋರಾಟ, ಪ್ರತಿಭಟನೆಗಳು ನಡೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದರು.‌

ವಲಯ ಅರಣ್ಯಾಧಿಕಾರಿ ಆದರ್ಶ ಅವರು ಕಟ್ಟಡದಿಂದ ಇಳಿಯುವಂತೆ ಮನವಿ ಮಾಡಿದರೂ, ಸ್ಥಳಕ್ಕೆ ಡಿಎಫ್‍ಒ ಮತ್ತು ತಹಶೀಲ್ದಾರ್ ಬರಬೇಕು ಎಂದು ಪಟ್ಟು ಹಿಡಿದರು.

ಪ್ರತಿಭಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಡಿಎಫ್‍ಒ ಮೋಹನಕುಮಾರ್, ಎಸಿಎಫ್ ವಿಜಯಕುಮಾರ್ ಅವರು ಆರ್‌ಎಫ್‍ಒ ಆದರ್ಶ ಅವರಿಂದ ಸರ್ವೆ ಕಾರ್ಯದ ಮಾಹಿತಿ ಪಡೆದರು.

‘ನಮ್ಮ ಕಡೆಯಿಂದ ಸರ್ವೆ ಪ್ರಗತಿಯಲ್ಲಿದೆ. ಆದರೆ ಕಂದಾಯ ಇಲಾಖೆಯಿಂದ ವಿಳಂಬವಾಗಿದೆ’ ಎಂದು ಆದರ್ಶ ತಿಳಿಸಿದರು. ನಂತರ ಡಿಎಫ್‍ಒ ಮೋಹನ್ ಕುಮಾರ್ ಕಟ್ಟಡವೇರಿದ್ದ ಕರುಣಾಕರ ಶೆಟ್ಟಿಯವರ ಮನವೊಲಿಸಿ ಮಾತುಕತೆಗೆ ಆಹ್ವಾನಿಸಿದರು.

ತುರ್ತು ಸರ್ವೆ ಭರವಸೆ: ಈಗಾಗಲೇ ಜಂಟಿ ಸರ್ವೆ ಕಾರ್ಯ ಪ್ರಗತಿಯಲ್ಲಿದ್ದು ಕೂಡಲೇ ಸರ್ಕಾರಕ್ಕೆ ಸಲ್ಲಿಸಲಾಗುವುದು. ನಮ್ಮ ಇಲಾಖೆ ಕಡೆಯಿಂದ ಯಾವುದೇ ವಿಳಂಬ ಮಾಡದೇ ಕಾರ್ಯ ನಿರ್ವಹಿಸಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಕಂದಾಯ ಅಧಿಕಾರಿ ತಹಶೀಲ್ದಾರ್ ಅವರನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದರು. ಬಳಿಕ ತಹಶೀಲ್ದಾರ್ ಶ್ರೀಧರಮೂರ್ತಿ ಕೂಡ ಬಂದರು.

ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ ಕಾರ್ಯ ಚುರುಕುಗೊಳಿಸಿ ಸಮಸ್ಯೆ ಇತ್ಯರ್ಥಕ್ಕೆ ವಿಳಂಬ ಅಥವಾ ಲೋಪವಾಗದಂತೆ ನಡೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ಕರುಣಾಕರ ಶೆಟ್ಟಿ ಪ್ರತಿಭಟನೆ ಹಿಂಪಡೆದರು.

ಸಿಪಿಐ ಗುರಣ್ಣ ಹೆಬ್ಬಾಳ್, ಎಸ್‍ಐ ಸಿ.ಆರ್.ಕೊಪ್ಪದ್, ಎಸಿಎಫ್ ವಿಜಯ ಕುಮಾರ್, ಕರಿಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಲಸಿನಹಳ್ಳಿ ರಮೇಶ್, ಸದಸ್ಯರಾದ ಸತೀಶ್ ಪಟೇಲ್, ಹಿಲ್ಕುಂಜಿ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT