ಹಳೇಬೀಡು: ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಾಧು ಸದ್ಧರ್ಮ ಪೀಠವನ್ನು ಬಂಡವಾಳಶಾಹಿಗಳು ಅವಹೇಳನ ಮಾಡಿರುವುದು ಖಂಡನೀಯ ಎಂದು ಬೇಲೂರು ತಾಲ್ಲೂಕಿನ ಸದ್ಧರ್ಮ ಪೀಠದ ಭಕ್ತರು ಶನಿವಾರ ಯಲಹಂಕ ಮಠದಲ್ಲಿ ನಡೆದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
‘ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶೈಕ್ಷಣಿಕವಾಗಿ ಕ್ರಾಂತಿ ಮಾಡಿದ್ದಾರೆ. ಪೂರ್ವ ಪ್ರಾಥಮಿಕ ಶಾಲೆಯಲ್ಲಿ ವೈದ್ಯಕೀಯ ಶಿಕ್ಷಣದಂತಹ ಉನ್ನತ ಶಿಕ್ಷಣ ಕಾಲೇಜುಗಳನ್ನು ಹುಟ್ಟು ಹಾಕಿ ವಿದ್ಯಾವಂತ ಸಮಾಜ ನಿರ್ಮಾಣದತ್ತ ಹೆಜ್ಜೆ ಇಟ್ಟಿದ್ದಾರೆ. ಸ್ವಾಮೀಜಿಗಳ ಶೈಕ್ಷಣಿಕ ಸೇವೆ ಒಂದು ಸಮಾಜಕ್ಕೆ ಸಿಮೀತವಾಗಿಲ್ಲ. ಶ್ರೀಗಳ ಶೈಕ್ಷಣಿಕ ಸಂಸ್ಥೆಯಿಂದ ಬಡ ಮಕ್ಕಳು ವಿದ್ಯಾವಂತರಾಗಿದ್ದಾರೆ, ಉನ್ನತ ಸ್ಥಾನಮಾನವನ್ನು ಪಡೆದಿದ್ದಾರೆ. ಜಾತಿ ಧರ್ಮದ ಚೌಕಟ್ಟು ಮೀರಿದ ಶೈಕ್ಷಣಿಕ ಸೇವೆ ಅವರದ್ದಾಗಿದೆ. ಇಂತಹ ಮಹಾನ್ ಚೇತನದ ವಿರುದ್ಧ ಅವಹೇಳನ ಸಲ್ಲದು. ಸಾಧು ಸದ್ಧರ್ಮ ಪೀಠ ಹಾಗೂ ಶ್ರೀಗಳಿಗೆ ಪರವಾಗಿ ಹೋರಾಟ ಮಾಡಲು ಬೇಲೂರು ತಾಲ್ಲೂಕು ಭಕ್ತರು ಸಿದ್ದರಿದ್ದೇವೆ’ ಎಂದು ಸಭೆಯಲ್ಲಿ ನಿರ್ಣಯ ಕೈಗೊಂಡರು.
‘ಸ್ವಾಮೀಜಿಯವರು ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ. ಸ್ವಾಮೀಜಿಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂಬುದಕ್ಕೆ ಇಂದಿನ ಸಭೆಯಲ್ಲಿ ಸೇರಿರುವ ಭಕ್ತರು ಸಾಕ್ಷಿಯಾಗಿದ್ದಾರೆ’ ಎಂದು ಅಧ್ಯಕ್ಷತೆ ವಹಿಸಿದ್ದ ಸಾಧು ಸದ್ಧರ್ಮ ಪೀಠದ ಬೇಲೂರು ತಾಲ್ಲೂಕು ಭಕ್ತರ ಸಂಘದ ಅಧ್ಯಕ್ಷ ಎಚ್.ಆರ್.ಕಾಂತರಾಜು ತಿಳಿಸಿದರು.