ಸೋಮವಾರ, ಆಗಸ್ಟ್ 8, 2022
22 °C
ಹಾಮೂಲ್‌ ಶೇ 60, ಡಿಸಿಸಿ ಬ್ಯಾಂಕ್ ಶೇ 40 ನೆರವು: ರೇವಣ್ಣ

ಕೋವಿಡ್‌ ಮೃತ ಬಡ ಕುಟುಂಬಕ್ಕೆ ₹10 ಸಾವಿರ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೋವಿಡ್‌ನಿಂದ ಮೃತಪಟ್ಟ ಬಡ ಕುಟುಂಬದವರಿಗೆ ತಲಾ ₹10 ಸಾವಿರ ಪರಿಹಾರ ನೀಡಲಾಗುವುದು ಎಂದು ಶಾಸಕ ಎಚ್‌.ಡಿ.ರೇವಣ್ಣ ಹೇಳಿದರು. 

ಹಾಸನ ಹಾಲು ಒಕ್ಕೂಟ (ಹಾಮೂಲ್‌) ಶೇಕಡಾ 60 ಮತ್ತು ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ) ಶೇಕಡಾ 40ರಷ್ಟು ನೆರವು ನೀಡಲಿದೆ. ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆಯಲ್ಲಿ ಮೃತಪಟ್ಟಿರುವ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ
ತಿಳಿಸಿದರು.

ಮನೆಗೆ ಆಸರೆಯಾಗಿದ್ದವರೇ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ. ಹಲವರು ಚಿಕಿತ್ಸಾ ವೆಚ್ಚ ಭರಿಸಲು ಜಮೀನು, ಮನೆ ಮಾರಾಟ ಮಾಡಿದ್ದಾರೆ. ಕೆಲವರು ಚಿಕಿತ್ಸೆ ಪಡೆಯಲು ಆಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಕುಟುಂಬಗಳು ಸಂಕಷ್ಟದಲ್ಲಿವೆ. ಹಾಗಾಗಿ ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಕೋವಿಡ್‌ನಿಂದ ಮೃತಪಟ್ಟ ಕಡು ಬಡ ಕುಟುಂಬದವರಿಗೆ ತಲಾ ₹ 1ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಿಸಿರುವುದು ಸ್ವಾಗತಾರ್ಹ.  ‘ಕೋವಿಡ್ 19 ರಾಷ್ಟ್ರೀಯ ವಿಪತ್ತು’ ಎಂದು
ಘೋಷಿಸಿರುವುದರಿಂದ ಮೃತ ಕುಟುಂಬದವರಿಗೆ ₹ 5 ಲಕ್ಷ ಪರಿಹಾರ ನೀಡುವಂತೆ ಸಿ.ಎಂ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಸೇರಿದಂತೆ ಜೆಡಿಎಸ್ ಶಾಸಕರು ಮನವಿ ಮಾಡಿದ್ದರು. ಹಾಗಾಗಿ ಐದು ಲಕ್ಷ ರೂಪಾಯಿ ನೀಡಬೇಕು ಎಂದು ಆಗ್ರಹಿಸಿದರು.

ಸಿ.ಎಂ ಯಡಿಯೂರಪ್ಪ ಅವರು ನಾಮಕಾವಸ್ತೆಗೆ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ಇದು ಸರಿಯಲ್ಲ. ವಿಮಾನ ನಿಲ್ದಾಣ, ಚನ್ನಪಟ್ಟಣ ಕೆರೆ, ಚಿಕ್ಕಮಗಳೂರು–ಬೇಲೂರು–ಹಾಸನ ರೈಲ್ವೆ ಮಾರ್ಗ, ತೋಟಗಾರಿಕೆ ಕಾಲೇಜು, ಬೇಲೂರು–ಹಾಸನ ಸೇತುವೆ, ಗಂಧದ ಕೋಟಿ ಆವರಣದಲ್ಲಿ ಬಾಲಕಿಯರ ವಸತಿ ನಿಲಯ ನಿರ್ಮಾಣಕ್ಕೆ ತಡೆ ನೀಡಲಾಗಿದೆ. ಈ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಮನವಿ ಮಾಡಿದ್ದೇವೆ. ಒಂದು ವಾರ ನೋಡುತ್ತೇವೆ. ನಂತರ ಏನು ಮಾಡಬೇಕು ಮಾಡುತ್ತೇವೆ ಎಂದರು.

ಖಾಸಗಿ ಆಸ್ಪತ್ರೆಗಳು ಕೋವಿಡ್‌ ಚಿಕಿತ್ಸೆಗೆ ದುಪಟ್ಟು ಹಣ ವಸೂಲಿ ಮಾಡುತ್ತಿವೆ. ಆಸ್ಪತ್ರೆಗಳಲ್ಲಿ ಲೂಟಿ ತಡೆಗೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳದಿದ್ದರೆ ಜನರೇ ನುಗ್ಗಿ ಹೊಡಿರಿ ಎಂದು ಹೇಳಬೇಕಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆ ಬಿಲ್‌ಗಳ ಪರಿಶೀಲನೆ ನಡೆಸಿ, ಹೆಚ್ಚುವರಿ ಹಣ ಪಡೆದಿದ್ದರೆ ಅದನ್ನು ಸಂಬಂಧಪಟ್ಟವರಿಗೆ ವಾಪಸ್ ಕೊಡಿಸಬೇಕು. ಬಡವರ ಸುಲಿಗೆ ಮಾಡುವುದನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಲಸಿಕೆ ಕೊರತೆ ಉಂಟಾಗಿದೆ.  ಪೂರ್ಣ ಪ್ರಮಾಣದಲ್ಲಿ ಲಸಿಕೆ ಸಿಗುತ್ತಿಲ್ಲ. ಬಿಜೆಪಿ ಕ್ಷೇತ್ರದ ಶಾಸಕರಿಗೆ ಹೆಚ್ಚು ಲಸಿಕೆ ನೀಡಲಾಗಿದೆ. ರಾಜ್ಯದ ಜನರು ಸರ್ಕಾರಕ್ಕೆ ತೆರಿಗೆ ನೀಡುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸರ್ಕಾರ ಘೋಷಿಸಿರುವ ಲಾಕ್‌ಡೌನ್ ಪ್ಯಾಕೇಜ್‌ ಅರ್ಹರಿಗೆ ತಲುಪುತ್ತಿಲ್ಲ. ಆನ್‌ಲೈನ್ ಅರ್ಜಿ ಸಲ್ಲಿಸುವುದರಲ್ಲೇ ಸಾಕಾಗಿ ಹೋಗಿದೆ. ಇದನ್ನು ಸಡಿಲಗೊಳಿಸಿ ಅರ್ಹರಿಗೆ ಪರಿಹಾರ ಸಿಗುವಂತೆ ಮಾಡಬೇಕು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು