ಸಮರ್ಪಕ ಬರ ನಿರ್ವಹಣೆ, 20 ಹಳ್ಳಿಗಳಿಗೆ ಟ್ಯಾಂಕರ್‌ ನೀರು: ಜಿಲ್ಲಾಧಿಕಾರಿ

ಶುಕ್ರವಾರ, ಮೇ 24, 2019
28 °C
ನೀರು ಪೂರೈಕೆಗೆ ಕ್ರಮ: ಡಿಸಿ ಸಮರ್ಥನೆ

ಸಮರ್ಪಕ ಬರ ನಿರ್ವಹಣೆ, 20 ಹಳ್ಳಿಗಳಿಗೆ ಟ್ಯಾಂಕರ್‌ ನೀರು: ಜಿಲ್ಲಾಧಿಕಾರಿ

Published:
Updated:
Prajavani

ಹಾಸನ: ಜಿಲ್ಲೆಯಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಂಡಿದ್ದು, ಯಾವುದೇ ಗ್ರಾಮದಲ್ಲಿ ನೀರಿನ ತೊಂದರೆ ಆಗದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಹೇಳಿದರು.

ಸಚಿವ ರೇವಣ್ಣ ಆರೋಪ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸಮಸ್ಯಾತ್ಮಕ ಗ್ರಾಮಗಳಿಗೆ ವಿವಿಧ ಜಲ ಮೂಲಗಳಿಂದ ನೀರು ಪೂರೈಸಲಾಗುತ್ತಿದೆ. ಜಿಲ್ಲೆಯಲ್ಲಿ 20 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಅರಸೀಕೆರೆ ತಾಲ್ಲೂಕಿನ 19 ಹಾಗೂ ಬೇಲೂರಿನ ಒಂದು ಹಳ್ಳಿಗೆ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ. ಅಲ್ಲದೇ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಅರಸೀಕೆರೆಗೆ 28 ಮತ್ತು ಬೇಲೂರು ತಾಲ್ಲೂಕಿಗೆ ಆರು ಕೊಳವೆ ಬಾವಿಗಳ ಮೂಲಕ ನೀರು ನೀಡಲಾಗುತ್ತಿದೆ ಎಂದು ವಿವರಿಸಿದರು.

ನಗರ ಪ್ರದೇಶದಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ಕಂಡು ಬಂದಿಲ್ಲ. ಸಣ್ಣ ಪುಟ್ಟ ಸಮಸ್ಯೆ ಉಂಟಾಗಿ, ದುರಸ್ತಿ ಆಗುವವರೆಗೂ ಮಾತ್ರ ಟ್ಯಾಂಕರ್ ನೀರು ಕೊಡಲಾಗುತ್ತಿದೆ. ಅದು ಬಿಟ್ಟರೆ ಟ್ಯಾಂಕರ್‌ ನೀರು ಇಲ್ಲ ಎಂದು ಸ್ಪಷ್ಟ ಪಡಿಸಿದರು.

ಅರಸೀಕೆರೆಯ 530 ಹಳ್ಳಿಗಳು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಳಪಟ್ಟಿದ್ದು, ಯೋಜನೆ ಆಗಸ್ಟ್‌ಗೆ ಪೂರ್ಣಗೊಳ್ಳಲಿದೆ. ಅರಸೀಕೆರೆ ತಾಲ್ಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಹಣಕಾಸಿನ ತೊಂದರೆ ಇಲ್ಲ. ಬರ ಪರಿಹಾರ ಹಣವನ್ನು ತಹಶೀಲ್ದಾರ್‌, ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ಬಿಡುಗಡೆ ಮಾಡಲಾಗಿದೆ. ನೀರಿನ ಬಿಲ್‌ಗಳು ಬಾಕಿ ಇಲ್ಲ. ಅರಸೀಕೆರೆಯಿಂದ ₹ 8 ಲಕ್ಷ, ಬೇಲೂರಿನಿಂದ ₹ 5 ಲಕ್ಷ ಹಣ ನೀರಿನ ಬಿಲ್‌ ಬಂದಿದೆ. ಅದನ್ನು ಪರಿಶೀಲಿಸಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.

ಹಿಂದೆ ದೃಢೀಕೃತ ಆಲೂ ಬಿತ್ತನೆ ಬೀಜ ಖರೀದಿ ಮಾಡಲಾಗುತ್ತಿತ್ತು. ಈ ಬಾರಿ ವರ್ತಕರಿಂದಲೇ ಬಿತ್ತನೆ ಬೀಜ ಖರೀದಿಸಲಾಗುವುದು. ಆಲೂಗಡ್ಡೆ ಗೆ ಇನ್‌ಪುಟ್‌ ಸಬ್ಸಿಡಿ ನೀಡಲಾಗುತ್ತದೆ. ಆದರೆ, ಎಷ್ಟು ಎಂಬುದು ತೀರ್ಮಾನ ಆಗಿಲ್ಲ ಎಂದು ಮಾಹಿತಿ ನೀಡಿದರು.

ಸರ್ಕಾರ ಬಿಡುಗಡೆ ಮಾಡಿರುವ ₹ 8 ಕೋಟಿ ಹಾಗೂ ₹ 5 ಕೋಟಿ ಅನುದಾನವನ್ನು ತುರ್ತು ಕುಡಿಯುವ ನೀರಿನ ಪೂರೈಕೆ ಹಾಗೂ ಜಾನುವಾರು ಸಂರಕ್ಷಣೆಗೆ ಬಿಡುಗಡೆ ಮಾಡಲಾಗಿದೆ. ಈಗಾಗಲೇ ತಾಲ್ಲೂಕುವಾರು ಟಾಸ್ಕ್ ಫೋರ್ಸ್‌ ಸಮಿತಿ ರಚಿಸಿ ಜನ, ಜಾನುವಾರುಗಳಿಗೆ ಮುಂದೆ ಎದುರಾಗಬಹುದಾದ ನೀರಿನ ಕೊರತೆ ಅಂದಾಜಿಸಿ ಅದನ್ನು ನಿಭಾಯಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !