ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನರಗುತ್ತಿ: ಸರ್ವದೋಷ ಪ್ರಾಯಶ್ಚಿತ ಆರಾಧನೆ

24 ತೀರ್ಥಂಕರರಿಗೆ ಕಲ್ಪಧ್ರುಮ ಅಭಿಷೇಕ
Last Updated 5 ಏಪ್ರಿಲ್ 2021, 2:48 IST
ಅಕ್ಷರ ಗಾತ್ರ

ಹಳೇಬೀಡು: ಪಂಚಕಲ್ಯಾಣ ಮಹೋತ್ಸವದ 48 ದಿನದ ಮಂಡಲಪೂಜೆ ಪ್ರಯುಕ್ತ ಭಾನುವಾರ ಅಡಗೂರು ಜೈನರಗುತ್ತಿಯಲ್ಲಿ ಸರ್ವದೋಷ ಪ್ರಾಯಶ್ಚಿತ ಆರಾಧನೆ ಶ್ರದ್ದಾ ಭಕ್ತಿಯಿಂದ ನೆರವೇರಿಸಲಾಯಿತು.

ಜೈನಮುನಿ ವೀರಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಇಲ್ಲಿಯ ಜಿನಮಂದಿರದಲ್ಲಿ ಮಂತ್ರಘೋಷ ದೊಂದಿಗೆ ವಿವಿಧ ಪೂಜಾ ವಿಧಾನಗಳು ನಡೆದವು. ಶ್ವೇತ ಉಡುಪು ಧರಿಸಿದ್ದ ಮಹಿಳೆಯರು ಹಾಗೂ ಪುರುಷರು ಆರಾಧನೆಯಲ್ಲಿ ಭಾಗವಹಿಸಿ ಅರ್ಘ್ಯ ಸಮರ್ಪಿಸಿ ಜಗತ್ತಿನಲ್ಲಿ ಶಾಂತಿ ನೆಲೆಸಲಿ. ಸರ್ವರಿಗೂ ಆರೋಗ್ಯ ವೃದ್ಧಿಸಲಿ ಎಂದು ಪ್ರಾರ್ಥಿಸಿದರು.

ಮಹಿಳೆಯರು ಜಿನಭಜನೆ ಮಾಡಿದರು. ಪುರುಷರು ಸಹ ಗಂಟೆನಾದ ಹಾಗೂ ಚಪ್ಪಾಳೆಯೊಂದಿಗೆ ಭಜನೆಗೆ ಸಾಥ್‌ ನೀಡಿದರು.

24 ತೀರ್ಥಂಕರರಿಗೆ ಏಕಕಾಲದಲ್ಲಿ ಕಲ್ಪಧ್ರುಮ ಪಂಚಾಮೃತ ಅಭಿಷೇಕ, ಜಲ, ಗಂಧ, ಎಳನೀರು, ಕಬ್ಬಿನ ಹಾಲು, ಕಷಾಯ, ಅರಿಸಿನ, ಗಂಧ ಹಾಗೂ ಚಂದನದಿಂದ ಅಭಿಷೇಕ ನಡೆಸಲಾಯಿತು. ನಂತರ ತೀರ್ಥಂಕರರ ಮೂರ್ತಿಗಳಿಗೆ ಪುಷ್ಪವೃಷ್ಟಿ ನೆರವೇರಿತು. ಮಹಾಶಾಂತಿ ಮಂತ್ರದೊಂದಿಗೆ ಅಭಿಷೇಕ ಪೂರ್ಣಗೊಂಡಿತು. ಮಹಾಮಂಗಳಾರತಿಯ ನಂತರ ಭಕ್ತರು ಗಂಧೋದಕ ಸ್ವೀಕರಿಸಿದರು.

ಪ್ರತಿಷ್ಠಾಚಾರ್ಯರಾದ ಪವನ್ ಪಂಡಿತ್, ಪ್ರವೀಣ್ ಪಂಡಿತ್, ಅರ್ಚಕರಾದ ಬಾಲ್‌ರಾಜ್, ಶೀತಲ್‌ಕುಮಾರ್ ಪೂಜಾ ವಿಧಾನಗಳನ್ನು ನೆರವೇರಿಸಿದರು.

‘ಪಂಚಕಲ್ಯಾಣದ ನಂತರ ಲೋಕಕಲ್ಯಾಣಾರ್ಥ 48 ದಿನ ಇಲ್ಲಿ ವಿವಿಧ ಆರಾಧನೆ ನಡೆಸಲಾಗಿದೆ. ಜಿನ ಭಕ್ತರ ಸಹಕಾರದೊಂದಿಗೆ ಜೈನರಗುತ್ತಿ ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ’ ಎಂದು ವೀರಸಾಗರ ಮುನಿ ಮಹಾರಾಜರು ತಿಳಿಸಿದರು.

ಜೈನರಗುತ್ತಿ ಟ್ರಸ್ಟ್ ಅಧ್ಯಕ್ಷ ಹೊಂಗೇರಿ ದೇವೇಂದ್ರ, ಖಜಾಂಚಿ ಸುನಿಲ್ ಕುಮಾರ್, ಮುಖಂಡರಾದ ಧವನ್ ಜೈನ್, ವಿಜಯ್‌ಕುಮಾರ್ ದಿನಕರ್, ಎ.ಬಿ.ಕಾಂತರಾಜು, ಕೀರ್ತಿಕುಮಾರ್, ರವಿಕುಮಾರ್, ಎ.ಎಂ.ಶೈಲಜಾ, ವಸಂತ ಕಾಂತರಾಜು, ಪುಷ್ಪಾ ರತ್ನರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT