ಬುಧವಾರ, ಮಾರ್ಚ್ 29, 2023
23 °C
ರಾಜ್ಯ-ರಾಷ್ಟ್ರೀಯ ಕ್ರೀಡಾಪಟುಗಳಿಗೆ ದೊರಕದ ಅಭ್ಯಾಸ ಭಾಗ್ಯ

ಸಿಂಥೆಟಿಕ್ ಟ್ರ್ಯಾಕ್‌ಗೆ ಕೋಟಿ ವ್ಯಯಿಸಿದರೂ ಸಿಗದ ಸೌಲಭ್ಯ

ಸಂತೋಷ್ ಸಿ.ಬಿ. Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಿಲ್ಲೆಯ ಅಥ್ಲೆಟಿಕ್ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ₹8 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸುವ ಕಾಮಗಾರಿ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳದೇ ಅಭ್ಯಾಸಕ್ಕೆ ಅಡ್ಡಿಯಾಗಿದೆ ಎನ್ನುವ ಅಸಮಾಧಾನ ಕ್ರೀಡಾಪಟುಗಳಿಂದ ಕೇಳಿಬಂದಿದೆ.

ಜಿಲ್ಲಾ ಕ್ರೀಡಾಂಗಣದ ಒಳಗೆ ಓಟದ ಸ್ಪರ್ಧೆ, ಭರ್ಚಿ, ಗುಂಡು ಎಸೆತ, ಉದ್ದ ಜಿಗಿತ, ಎತ್ತರ ಜಿಗಿತ ಸೇರಿದಂತೆ ಇತರೆ ಕ್ರೀಡಾಪಟುಗಳು ಅಭ್ಯಾಸ ಮಾಡಲು ಸಿಂಥೆಟಿಕ್ ಟ್ರ್ಯಾಕ್ ಅನ್ನು ಅಳವಡಿಸಲಾಗುತ್ತಿದೆ. ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಗೆ ಅಂದಾಜು ಪಟ್ಟಿ ಸಲ್ಲಿಸಿ, ಈ ಇಲಾಖೆಯ ಮೂಲಕ 2018–19 ಸಾಲಿನಿಂದ ಕಾಮಗಾರಿ ಪ್ರಗತಿಯಲ್ಲಿದೆ.

ಈಗಾಗಲೇ ಶೇ 70ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಸಿಂಥೆಟಿಕ್ ಟ್ರ್ಯಾಕ್ ಸುತ್ತ ಕೇಜ್ ನಿರ್ಮಾಣ ಸೇರಿದಂತೆ ಇತರೆ ಕಾಮಗಾರಿಗಳು ಆಗಬೇಕಿದೆ.

ಇದುವರೆಗೆ‌ ಸರ್ಕಾರದಿಂದ ಕೇವಲ ₹ 3 ಕೋಟಿ ಬಿಡುಗಡೆ ಮಾಡಲಾಗಿದ್ದು, ಉಳಿದ ₹ 5 ಕೋಟಿ ಹಣ ಬಿಡುಗಡೆ ಆಗಬೇಕಿದೆ. ಅನುದಾನ ಬಿಡುಗಡೆ ಆಗದೇ ಲೋಕೋಪಯೋಗಿ ಇಲಾಖೆ ಎಲ್ಲ ಕಾಮಗಾರಿ ಮುಗಿಸಲು ಸಾಧ್ಯವಾಗುತ್ತಿಲ್ಲ.

‘ಕಾಮಗಾರಿ ಮುಗಿದ ಬಳಿಕ ಅಥ್ಲೆಟಿಕ್ ಅಸೋಸಿಯೇಷನ್ ಪರಿಶೀಲನೆ ತಂಡ ಸಿಂಥೆಟಿಕ್ ಟ್ರ್ಯಾಕ್ ಗುಣಮಟ್ಟ ಪರಿಶೀಲನೆ ಮಾಡಿ, ವರದಿ ನೀಡಿದ ಬಳಿಕ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಕ್ರೀಡಾಪಟುಗಳು ಮತ್ತು ಇತರರಿಗೆ ಟ್ರ್ಯಾಕ್ ಉಪಯೋಗಿಸಲು ಶುಲ್ಕ ನಿಗದಿ ಮಾಡುತ್ತಾರೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕ್ರೀಡಾಪಟುಗಳಿಗೆ ತೊಂದರೆ: ₹8 ಕೋಟಿ ಗಳನ್ನು ವೆಚ್ಚ ಮಾಡಿರುವ ಸಿಂಥೆಟಿಕ್ ಟ್ರ್ಯಾಕ್ ಸಮಯಕ್ಕೆ ಸರಿಯಾಗಿ ಕ್ರೀಡಾಪಟುಗಳಿಗೆ ಉಪಯೋಗವಾಗದಿದ್ದರೆ ಏನು ಪ್ರಯೋಜನ ಎನ್ನುವ ಪ್ರಶ್ನೆ ಕ್ರೀಡಾಪಟುಗಳದ್ದು.

ಹಲವು ವರ್ಷದಿಂದ ಮಣ್ಣಿನ ಅಂಕಣದಲ್ಲಿ ಅಭ್ಯಾಸ ಮಾಡಿ, ರಾಷ್ಟ್ರೀಯ ಮಟ್ಟದಲ್ಲಿನ ಹಲವಾರು ಕ್ರೀಡೆಯಲ್ಲಿ ಪದಕ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ- ರಾಷ್ಟ್ರೀಯ ಕ್ರೀಡಾಕೂಟದ ನಾನಾ ಸ್ಪರ್ಧೆಯಲ್ಲಿ ಭಾಗವಹಿಸುವವರು ಇದ್ದಾರೆ.

‘ಕ್ರೀಡೆಗೆ ಭಾಗವಹಿಸುವ ಕೆಲ ದಿನಗಳಲ್ಲಿ ಪಡೆಯುವ ಉತ್ತಮ ತರಬೇತಿ ಮತ್ತು ಅಭ್ಯಾಸ ಉತ್ತಮ ಫಲಿತಾಂಶ ನೀಡಲಿದೆ. ಸಿಂಥೆಟಿಕ್ ಟ್ರ್ಯಾಕ್ ಬಳಕೆಗೆ ಅವಕಾಶ ನೀಡಿದರೆ ಹೆಚ್ಚು ಅನುಕೂಲ ವಾಗಲಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಹಾಗೂ ಸ್ಥಳೀಯ ಶಾಸಕರು ಗಮನಹರಿಸಬೇಕಿದೆ’ ಎನ್ನುತ್ತಾರೆ ಕ್ರೀಡಾಪಟುಗಳು.

ಮುಂದಿನ ರಾಷ್ಟೀಯ ಕ್ರೀಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ನಿತ್ಯ ಇಂತಿಷ್ಟು ಸಮಯ ಕೇವಲ ಕ್ರೀಡಾಪಟುಗಳಿಗಾದರೂ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಅಭ್ಯಾಸ ಮಾಡಲು ಅವಕಾಶ ದೊರೆತರೆ ಹೆಚ್ಚಿನ ಸಾಧನೆ ಮಾಡಬಹುದು ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ರಾಷ್ಟ್ರೀಯ ಕ್ರೀಡಾಪಟು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು