ಶುಕ್ರವಾರ, ಸೆಪ್ಟೆಂಬರ್ 17, 2021
31 °C
ರಸ್ತೆ ತುಂಬ ಗುಂಡಿ, ಹಲವು ರಸ್ತೆಗಳು ಕೆಸರುಮಯ, ವಾಹನ ಸವಾರರು ಹೈರಾಣು

ಮಳೆಗಾಲಕ್ಕೆ ಇನ್ನೂ ಸಜ್ಜಾಗದ ಹಾಸನ ನಗರಸಭೆ

ಜೆ.ಎಸ್‌.ಮಹೇಶ್‌ Updated:

ಅಕ್ಷರ ಗಾತ್ರ : | |

Prajavani

ಹಾಸನ: ಮಳೆಗಾಲ ಆರಂಭವಾಗಿದ್ದರೂ ನಗರದ ರಸ್ತೆಗಳನ್ನು ದುರಸ್ತಿ ಮಾಡಲು ನಗರಸಭೆ ಗಮನಹರಿಸಿಲ್ಲ. ಸಂಚಾರ ಸಮಸ್ಯೆ ಕೇಳುವವರಿಲ್ಲ ಎನ್ನುವಂತಾಗಿದೆ.

ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಉಂಟಾಗಿರುವ ಅಳೆತ್ತರದ ಗುಂಡಿಗಳಲ್ಲಿ ನೀರು ತುಂಬಿಕೊಂಡು ಅಪಾಯಕ್ಕೆ ಆಹ್ವಾನಿಸುತ್ತಿವೆ. ಹೊಂಡಗಳು ತುಂಬಿರುವ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ನಿತ್ಯ ಕೆಸರಿನ ಅಭಿಷೇಕ
ವಾಗುತ್ತಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿಕೊಂಡು ರಸ್ತೆಯಲ್ಲಿ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಇಂದು ಒಂದೆರಡು ದಿನದ ಸಮಸ್ಯೆಯಲ್ಲ. ಹಲವು ವರ್ಷಗಳಿಂದ ಸಮಸ್ಯೆ ಇದೆ.

ಒಳಚರಂಡಿ ಕಾಮಗಾರಿ, ಅಮೃತ್‌ ಯೋಜನೆ ಪೈಪ್‌ ಲೈನ್‌ ಅಳವಡಿಕೆಗಳಿಂದಾಗಿ ನಗರದ ಬಹುತೇಕ ರಸ್ತೆಗಳನ್ನು ಅಗೆಯಲಾಗಿದ್ದು, ಗುಂಡಿಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ ಆಗಿದೆ. ಮಳೆ ನೀರಿನಿಂದ ಹಲವು ರಸ್ತೆಗಳು ಕೆಸರುಮಯವಾಗಿದ್ದು, ಜನ ಕಾಲ್ನಡಿಗೆಯಲ್ಲಿ ಸಾಗಲು ಕಷ್ಟ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಬಿರುಸಿನ ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತು ಡಾಂಬರ್‌ ಕಿತ್ತು ಹೋಗಿ ಗುಂಡಿಗಳಾಗಿದ್ದು, ವಾಹನ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ನಗರದ ಬಹುತೇಕ ಕಡೆ ರಸ್ತೆಗಳು ಸುಸ್ಥಿತಿಯಲ್ಲಿ ಇಲ್ಲ. ಕಾಮಗಾರಿ ನೆಪದಲ್ಲಿ ರಸ್ತೆ ಅಗೆದು ಬಿಡಲಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕವೂ ಸರಿಯಾಗಿ ಮಣ್ಣು ಮುಚ್ಚಿಲ್ಲ. ಕೆಲವೆಡೆ ರಸ್ತೆಯ ಎರಡೂ ಬದಿಗೆ ಹಾಕಿದ್ದ ಮಣ್ಣಿನ ರಾಶಿಯನ್ನು ತೆರವು ಮಾಡಿಲ್ಲ.

ನಗರದ ಕಸ್ತೂರ ಬಾ ರಸ್ತೆ, ಸಾಲಗಾಮೆ ರಸ್ತೆ, ಹೊಸ ಬಸ್‌ ನಿಲ್ದಾಣ ರಸ್ತೆ, ಪಾರ್ಕ್‌ ರಸ್ತೆ, ವ್ಯಾನ್‌ ನಿಲ್ದಾಣದ
ರಸ್ತೆ, ಎಂ.ಜಿ.ರಸ್ತೆ, ಕೆ.ಆರ್‌.ಪುರಂ ಸೇರಿದಂತೆ ಹಲವು ಕಡೆ ರಸ್ತೆಗಳು ಗುಂಡಿಮಯವಾಗಿವೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಒಳಚರಂಡಿ ನಿರ್ಮಾಣ ಕಾರ್ಯಕ್ಕೆ ಸಾಲಗಾಮೆ ರಸ್ತೆ ಹಾಗೂ ಕಸ್ತೂರ ಬಾ ರಸ್ತೆಯಲ್ಲಿ ಗುಂಡಿಗಳನ್ನು ತೆಗೆಯಲಾಗಿತ್ತು. ಈ ಗುಂಡಿಗಳಿಗೆ ಮಣ್ಣು ಮುಚ್ಚಿದ್ದು, ರಸ್ತೆ ನಡುವೆ ಅಲ್ಲಲ್ಲಿ ದಿಬ್ಬಗಳ ರೀತಿ ಆಗಿದೆ. ಈ ರಸ್ತೆಗಳಲ್ಲಿ ವಾಹನ ಸಂಚಾರ ಪ್ರಯಾಸವಾಗಿದೆ.

ಹೊಸ ಬಸ್‌ ನಿಲ್ದಾಣ ಸಮೀಪ ನಿರ್ಮಿಸುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಆಮೆ ವೇಗದಲ್ಲಿ ನಡೆಯು
ತ್ತಿದೆ. ಕಾಮಗಾರಿ ನಡೆಯುತ್ತಿರುವುದರಿಂದ ಬದಲಿ ರಸ್ತೆ ವ್ಯವಸ್ಥೆ ಮಾಡಲಾಗಿದ್ದು, ರೈಲ್ವೆ ಗೇಟ್‌ ಬಳಿ ರಸ್ತೆಯಲ್ಲಿ ದೊಡ್ಡ ಗುಂಡಿ ಬಿದ್ದಿವೆ. ಮಳೆಯಲ್ಲಿ ಈ ಗುಂಡಿಗಳಿಗೆ ನೀರು ತುಂಬಿಕೊಂಡು ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಜೋರು ಮಳೆ ಬಂದರೆ ಮಹಾವೀರ ವೃತ್ತದಲ್ಲಿ ನೀರು ನಿಲ್ಲುತ್ತದೆ. ವಾಹನಗಳು ವೇಗವಾಗಿ ಹೋದಾಗ ರಸ್ತೆ ಬದಿ ವಾಪಾರಿಗಳ ಮೇಲೆ ಕೆಸರು ನೀರು ಹಾರುತ್ತದೆ. ಹಲವು ಕಡೆ ಚರಂಡಿ ಹೂಳು ತೆಗೆಯದ ಕಾರಣ ಗಲೀಜು ನೀರು ರಸ್ತೆ ಮೇಲೆ ಹರಿಯುತ್ತದೆ.

‘ನಗರಸಭೆ ಅಧಿಕಾರಿಗಳು, ಎಂಜಿನಿಯರ್‌ಗಳು ಪ್ರತಿ ವಾರ್ಡ್‌‌ಗಳಿಗೆ ಆಯಾ ವಾರ್ಡ್‌ ಸದಸ್ಯರ ಜೊತೆ ಭೇಟಿ ನೀಡಿ ರಸ್ತೆ, ಚರಂಡಿ, ಕುಡಿಯುವ ನೀರು ಇತರೆ ಮೂಲ ಸೌಕರ್ಯ, ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಬೇಕು. ಮಳೆಗಾಲಕ್ಕೂ ಮೊದಲೂ ಸಿದ್ಧತೆ ಕೈಗೊಳ್ಳಬೇಕು. ಯಾವ ಅಧಿಕಾರಿಗಳು, ಎಂಜಿನಿಯರ್‌ಗಳು ನಗರದಲ್ಲಿ ಸಂಚಾರ ಮಾಡಿ ಸಮಸ್ಯೆಗಳ ಕುರಿತು ಅವಲೋಕನ ಮಾಡಿದ್ದಾರೆ ಎಂಬುದನ್ನು ತಿಳಿಸಲಿ’ ಎಂದು ಆಡುವಳ್ಳಿಯ ಸುನಿಲ್‌ ಆರೋಪಿಸಿದರು.

ನಗರದ ಸ್ವಚ್ಛತೆಗೆ ಶ್ರಮಿಸುವ ಪೌರಕಾರ್ಮಿಕರು ವಾಸಿಸುವ ನಿರ್ಮಲಾ ನಗರದಲ್ಲಿ ಒಳಚರಂಡಿ ಸಮಸ್ಯೆ ಇದೆ. ಈ ಬಗ್ಗೆ ಆಯುಕ್ತರ ಗಮನಕ್ಕೆ ವಾರ್ಡ್‌ ಸದಸ್ಯ ಅಕ್ಬರ್‌ ತಂದರೂ ಪರಿಹರಿಸಿಲ್ಲ. ಮಳೆಗಾಲದಲ್ಲಿ ಅಲ್ಲಿನ ಚರಂಡಿ ನೀರು ಉಕ್ಕಿ ರಸ್ತೆ ಮತ್ತು ಮನೆಗೆ ನುಗ್ಗುತ್ತವೆ. ಸೌಲಭ್ಯ ವಂಚಿತರಾಗಿ ನಿವಾಸಿಗಳುಬದುಕು ನಡೆಸುವಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು