ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಡಾನೆ ನಿಗಾಕ್ಕೆ ‘ಆನೆ ಎಲ್ಲಿ ಡಾಟ್‌ಕಾಂ’

ಹಾಸನ ಜಿಲ್ಲೆಯಲ್ಲಿ ಪ್ರಾಯೋಗಿಕ ಚಾಲನೆ | ಅರಣ್ಯ ಭವನದಲ್ಲಿ ಕಂಟ್ರೋಲ್ ರೂಂ
Published : 24 ಆಗಸ್ಟ್ 2024, 23:30 IST
Last Updated : 24 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಹಾಸನ: ಕಾಡಾನೆಗಳ ಚಲನವಲನದ ಮೇಲೆ ನಿಗಾ ಇಟ್ಟು, ಮಾಹಿತಿ ಪಡೆಯಲು ಅರಣ್ಯ ಇಲಾಖೆಯು ‘ಆನೆ ಎಲ್ಲಿ ಡಾಟ್ ಕಾಂ’ (aaneelli.com) ವೆಬ್‌ಸೈಟ್‌ ರೂಪಿಸಿದ್ದು, ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಂಡಿದೆ.

ನಗರದ ಅರಣ್ಯ ಭವನದಲ್ಲಿ ಫಾರೆಸ್ಟ್ ಕಂಟ್ರೋಲ್ ರೂಂ ತೆರೆದು ಪೊಲೀಸ್ ಇಲಾಖೆಯ ಮಾದರಿಯಲ್ಲಿ ದಿನದ 24 ಗಂಟೆ ಮೂರು ಪಾಳಿಯಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ.

ಎಲ್ಲೆಂದರಲ್ಲಿ ದಾಳಿ ಮಾಡುವ ಆನೆಗಳು, ಗದ್ದೆಗಳಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿವೆ. ಜನರ ಮೇಲೂ ದಾಳಿ ಮಾಡುತ್ತಿವೆ. ಹೀಗಾಗಿ ಅವುಗಳ ಚಲನವಲನ ವೀಕ್ಷಣೆಗೆ ಇಲಾಖೆಯು ವೆಬ್‌ಸೈಟ್‌ ಮೊರೆ ಹೋಗಿದೆ. ರೇಡಿಯೊ ಕಾಲರ್, ಅರಣ್ಯ ಸಿಬ್ಬಂದಿಯಿಂದ ಸಿಗುವ ಮಾಹಿತಿ ಆಧರಿಸಿ ವೆಬ್‌ಸೈಟ್‌ನಲ್ಲಿ ಕಾಡಾನೆಗಳ ವಿವರ ಲಭ್ಯವಾಗುತ್ತಿದೆ.

ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಆನೆ ಕಾರ್ಯಪಡೆ, ರ‍್ಯಾಪಿಡ್ ರೆಸ್ಪಾನ್ಸ್ ಟೀಂಗಳು ಕಾಡಾನೆಗಳ ಚಲನ ವಲನದ ಮೇಲೆ ಕಣ್ಣಿಟ್ಟಿವೆ. ಆದರೆ, ಕೇಂದ್ರೀಕೃತ ವ್ಯವಸ್ಥೆ ಇಲ್ಲದೇ ಉಪಟಳ ತಡೆಯುವುದು ಕಷ್ಟವಾಗಿತ್ತು.

ಕಾಡಾನೆಗಳ ಬೆನ್ನಟ್ಟಲು ಇರುವ ಜಿಪಿಎಸ್ ಅಳವಡಿಸಿದ ಆರು ವಾಹನಗಳ ಚಲನವಲನದ ಬಗ್ಗೆಯೂ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗಲಿದೆ. ಆನೆ ಎಲ್ಲಿವೆ? ಆನೆಯನ್ನು ಹಿಂಬಾಲಿಸುವ ತಂಡ ಎಲ್ಲಿದೆ ಎಂಬುದನ್ನು ಗಮನಿಸುವ ಅಧಿಕಾರಿಗಳು ತಕ್ಷಣ ಸ್ಪಂದಿಸಲಿದ್ದಾರೆ. ಸಾರ್ವಜನಿಕರು ಸಮಸ್ಯೆ ದಾಖಲಿಸಲು ಈ ವೆಬ್‌ಸೈಟ್‌ನಲ್ಲಿ ಅವಕಾಶ ಇದ್ದು, ಅವುಗಳಿಗೂ ಇಲಾಖೆ ಸ್ಪಂದಿಸಲಿದೆ.

ಆನೆಗಳ ಸಂಪೂರ್ಣ ಮಾಹಿತಿ

‘ಕಂಟ್ರೋಲ್‌ ರೂಂ ವಿಸ್ತರಿಸಲಾಗಿದ್ದು, ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ಹಾಗೂ ಅರಕಲಗೂಡು ತಾಲ್ಲೂಕಿನಲ್ಲಿ ಸಂಚರಿಸುವ ಕಾಡಾನೆಗಳ ಮೇಲೆ ನಿಗಾ ಇರಿಸಲಾಗುತ್ತಿದೆ’ ಎಂದು ಡಿಸಿಎಫ್‌ ಸೌರಭ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಕಾಡಾನೆಗಳು ಎಲ್ಲಿವೆ? ಗುಂಪಿನಲ್ಲಿವೆಯಾ ಅಥವಾ ಒಂಟಿಯಾಗಿವೆಯಾ? ನಿಂತಿವೆಯಾ ಅಥವಾ ಚಲಿಸುತ್ತಿವೆಯಾ? ಗ್ರಾಮಗಳ ಹತ್ತಿರವಿದೆಯಾ ಅಥವಾ ದೂರ ಇವೆಯಾ? ಹೀಗೆ ಆನೆಗಳ ಕುರಿತು ಎಲ್ಲ ರೀತಿಯ ಮಾಹಿತಿ ಗೂಗಲ್ ಮ್ಯಾಪ್ ಮತ್ತು ಸ್ಯಾಟಲೈಟ್ ಮ್ಯಾಪ್ ಸಹಾಯದಿಂದ ಸಿಗಲಿದೆ. ಅದನ್ನು ಗಮನಿಸುವ ಸಿಬ್ಬಂದಿ, ತಕ್ಷಣವೇ ಕಾರ್ಯಪ್ರವೃತ್ತರಾಗಿ ಅನಾಹುತ ತಪ್ಪಿಸಲಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.

ಯೋಜನೆಯನ್ನು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅರಂಭಿ ಸಿದ್ದು, ಯಶಸ್ವಿಯಾದರೆ ಕಾಡು ಪ್ರಾಣಿಗಳ ಹಾವಳಿ ಇರುವ ಇತರ ಪ್ರದೇಶಗಳಿಗೂ ವಿಸ್ತರಿಸುವ ಚಿಂತನೆ ಇದೆ.
ಸೌರಭ್‌ಕುಮಾರ್, ಹಾಸನ ಡಿಸಿಎಫ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT