ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟ್ರ್ಯಾಕ್ಟರ್ ಹುಲ್ಲಿಗೆ ಅರ್ಧ ಚೀಲ ರಾಗಿ!

ಮಳೆಯ ಕೊರತೆಯಿಂದ ರಾಗಿ ಇಳುವರಿ ಕುಸಿತ: ರೈತರು ಕಂಗಾಲು
ಎಚ್‌.ಎಸ್‌.ಅನಿಲ್‌ಕುಮಾರ್‌
Published 26 ಮಾರ್ಚ್ 2024, 6:11 IST
Last Updated 26 ಮಾರ್ಚ್ 2024, 6:11 IST
ಅಕ್ಷರ ಗಾತ್ರ

ಹಳೇಬೀಡು: ಸಮರ್ಪಕ ಮಳೆ ಬೀಳದೆ ಬರದ ಛಾಯೆ ಆವರಿಸಿದ್ದರಿಂದ ಈ ಭಾಗದಲ್ಲಿ ರಾಗಿ ಫಸಲು ಕುಸಿದಿದೆ. ಮನೆ ಬಳಕೆಗೂ ಪರಿಪೂರ್ಣವಾಗಿ ರಾಗಿ ದೊರಕದೇ ಬೆಳೆಗಾರರು ತತ್ತರಿಸಿದ್ದಾರೆ. 

ಕೊಯ್ಲು ಮಾಡಿ ಬಣವೆ ಹಾಕಿದ ಹುಲ್ಲನ್ನು, ಕಣಕ್ಕೆ ಹಾಕಿ ಒಕ್ಕಣೆ ಮಾಡಿದ ರೈತರಿಗೆ ಕನಿಷ್ಠ ರಾಗಿ ಫಸಲು ಕೈಗೆ ಸಿಕ್ಕಿದೆ. ಒಂದು ಟ್ರ್ಯಾಕ್ಟರ್ ಹುಲ್ಲನ್ನು ಕಣದಲ್ಲಿ ಹರಡಿ ಒಕ್ಕಣೆ ಮಾಡಿದರೂ, ಸಾಕಷ್ಟು ರೈತರಿಗೆ ಒಂದು ಚೀಲ ರಾಗಿಯೂ ದೊರಕುತ್ತಿಲ್ಲ. ‘ಮನೆ ಮಂದಿ ಜೊತೆಗೆ ಕಾರ್ಮಿಕರನ್ನು ಸೇರಿಸಿಕೊಂಡು ಒಕ್ಕಣೆ ಮಾಡಿದ ರಾಜಗರೆ ಗ್ರಾಮದ 20ಕ್ಕೂ ಹೆಚ್ಚು ಮಂದಿ ರೈತರಿಗೆ ಅರ್ಧ ಚೀಲ ರಾಗಿ ಫಸಲು ದೊರಕಿದೆ’ ಎಂದು ಗ್ರಾಮದ ರೈತ ದೇವರಾಜು ಕೆಂಪಯ್ಯ ಅಳಲು ತೋಡಿಕೊಳ್ಳುತ್ತಾರೆ.

‘ರಾಗಿ ಬೆಳೆ ಕಡಿಮೆ ಮಳೆಯಲ್ಲಿಯೇ ಬೆಳೆಯುತ್ತದೆ. ಮೂರು ತಿಂಗಳ ಬೆಳೆಯಾದ ರಾಗಿಗೆ 15 ದಿನಕ್ಕೆ ಒಂದರಂತೆ 6 ಬಾರಿ ಮಳೆ ಬಿದ್ದರೆ, ಒಂದು ಎಕರೆಗೆ 5 ರಿಂದ 6 ಚೀಲ ರಾಗಿ ಉತ್ಪಾದಿಸಬಹುದು. ಈ ವರ್ಷ ರಾಗಿ ಬೆಳೆಗೆ ಪೂರಕವಾದ ಮಳೆ ಬೀಳಲಿಲ್ಲ. ಕಳೆದ ವರ್ಷ ಬಿದ್ದ ಮಳೆಗೆ ಭೂಮಿಯಲ್ಲಿ ನೀರು ಇಂಗಿದ್ದರಿಂದ ರಾಗಿ ಹುಲ್ಲು ಬೆಳೆಯಿತು. ಬೆಳೆಯಲ್ಲಿ ತೆನೆಯೂ ಕಟ್ಟಿತು. ಆದರೆ ಕಾಳು ಕಟ್ಟಲಿಲ್ಲ. ಅಲ್ಪಸ್ವಲ್ಪ ಕಾಳು ಕಟ್ಟಿದರೂ, ಜೊಳ್ಳು ಹೆಚ್ಚಾಗಿ ಬಂತು. ಜೇಬಿನ ಭರ್ತಿ ಹಣ ತುಂಬದೆ ಇದ್ದರೂ, ಮನೆ ಬಳಕೆಗೂ ಸಮರ್ಪಕವಾಗಿ ರಾಗಿ ದೊರಕಲಿಲ್ಲ’ ಎಂದು ರೈತ ಬಸ್ತಿಹಳ್ಳಿಯ ಮಹೇಶ್ ಸಮಸ್ಯೆ ಬಿಚ್ಚಿಟ್ಟರು.

ಪಂ‍ಪ್‌ಸೆಟ್‌ನಿಂದ ರಾಗಿ ಬೆಳೆಗೆ ನೀರುಣಿಸಿದವರಿಗೆ ಎಕರೆಗೆ 5 ರಿಂದ 6 ಚೀಲ ಫಸಲು ದೊರಕಿದೆ. ಮಳೆ ಆಶ್ರಿತ ಭೂಮಿಯಲ್ಲಿ ಕೆಲವು ಕಡೆ 2 ಚೀಲ ರಾಗಿ ದೊರಕಿದೆ. ಎತ್ತರದ ಕಲ್ಲು ಭೂಮಿಯಲ್ಲಿ ಎಕರೆಗೆ ಅರ್ಧ ಚೀಲ ರಾಗಿ ದೊರಕಿದೆ ಎಂಬ ಮಾತು ರೈತರಿಂದ ಕೇಳಿ ಬರುತ್ತಿದೆ. ಒಂದು ಎಕರೆಯಲ್ಲಿ 10 ಚೀಲ ರಾಗಿ ಫಸಲು ದೊರಕಿದರೆ ಮಾತ್ರ ರಾಗಿ ಕೃಷಿ ಪರಿಪೂರ್ಣವಾಗುತ್ತದೆ ಎನ್ನುತ್ತಾರೆ ರೈತರು.

ಒಂದು ಎಕರೆ ರಾಗಿ ಬೆಳೆಯಲು ₹ 10ಸಾವಿರ ಖರ್ಚು ಬರುತ್ತದೆ. 1 ಕ್ವಿಂಟಲ್ ರಾಗಿ ₹ 3ಸಾವಿರದಿಂದ ₹3,200ರ ವರೆಗೂ ಮಾರಾಟವಾಗುತ್ತಿದೆ. ಒಂದು ಎಕರೆಗೆ 10 ಕ್ವಿಂಟಲ್ ರಾಗಿ ಫಸಲು ಬಂದರೆ ನಷ್ಟವಾಗುತ್ತಿರಲಿಲ್ಲ ಎಂಬ ಮಾತು ರೈತರಿಂದ ಕೇಳಿ ಬರುತ್ತಿದೆ.

ರಾಗಿ ವಾಣಿಜ್ಯ ಬೆಳೆಯಲ್ಲ. ಬಂಪರ್ ಬೆಲೆ ಬಂದರೂ ರಾಗಿ ಬೆಳೆದ ರೈತ ಶ್ರೀಮಂತನಾಗಲು ಸಾಧ್ಯವಿಲ್ಲ. ಮನೆ ಮಂದಿಗೆ ಆಹಾರ, ಜಾನುವಾರುಗಳಿಗೆ ಮೇವು ದೊರಕುತ್ತದೆ. ಹಳೇಬೀಡು ಭಾಗದಲ್ಲಿ ರಾಗಿ ಪ್ರಮುಖ ಆಹಾರವಾಗಿದೆ. ಕಾಲಕ್ಕೆ ತಕ್ಕಂತೆ ಜನರ ಆಹಾರ ಶೈಲಿ ಬದಲಾಗಿದ್ದರೂ, ಹಳೇಬೀಡು ಭಾಗದಲ್ಲಿ ರಾಗಿ ಮುದ್ದೆ ಹಾಗೂ ಅಂಬಲಿ ಬಯಸುವವರ ಸಂಖ್ಯೆಗೆ ಕೊರತೆ ಇಲ್ಲ. ರಾಗಿ ಇಳುವರಿ ಕುಸಿದರೆ ಆಹಾರದ ಕೊರತೆ ಆಗುತ್ತದೆ. ಬೆಳೆಗಾರರೇ ಕೊಳ್ಳುವ ಪರಿಸ್ಥಿತಿ ಬಂದರೆ ಕಷ್ಟವಾಗುತ್ತದೆ ಎನ್ನುತ್ತಾರೆ ರೈತ ಸೋಮಶೇಖರಪ್ಪ. 

ರಾಗಿ ಜುಲೈ, ಆಗಸ್ಟ್‌ನಲ್ಲಿ ಬೆಳೆಯುವ ಮುಂಗಾರು ಹಂಗಾಮಿನ ಬೆಳೆಯಾಗಿದೆ. ಸೆಪ್ಟೆಂಬರ್ ನಂತರ ಬೆಳೆದರೆ ಸಮರ್ಪಕ ಫಸಲು ಬರುವುದಿಲ್ಲ. ಹಳೇಬೀಡು ಭಾಗದಲ್ಲಿ ಬಣವೆ ಹಾಕಿಕೊಂಡು ತಡವಾಗಿ ಒಕ್ಕಣೆ ಮಾಡುತ್ತಿರಬಹುದು ಎನ್ನುತ್ತಾರೆ ಕೃಷಿ ಅಧಿಕಾರಿಗಳು.

15 ದಿನಕ್ಕೊಮ್ಮೆ ಮಳೆ ಬಂದರೂ ರಾಗಿ ಫಸಲು ಕಾಣಬಹುದು ಭೂಮಿಯಲ್ಲಿ ಹದ ಇಲ್ಲದೇ ತೆನೆಯಲ್ಲಿ ರಾಗಿ ಕಾಳು ಕಟ್ಟಲಿಲ್ಲ ಸಾಕಷ್ಟು ಬೆಳೆಗಾರರಿಗೆ ಮನೆ ಬಳಕೆಗೂ ರಾಗಿ ದೊರಕಿಲ್ಲ

ಮನೆ ಮಂದಿಯೆಲ್ಲ ದುಡಿದರೂ ಮನೆ ಬಳಕೆಗೂ ರಾಗಿ ದೊರಕದಿದ್ದರೆ ಸಣ್ಣ ರೈತರು ಬದುಕುವುದೇ ಕಷ್ಟವಾಗುತ್ತದೆ. ಮುಂದಿನ ವರ್ಷದಲ್ಲಾದರೂ ಸಮರ್ಪಕ ಮಳೆ ಬೀಳಲಿ ಎಂದು ಪ್ರಾರ್ಥಿಸುತ್ತಿದ್ದೇವೆ
-ದೇವರಾಜ್ ಕೆಂಪಯ್ಯ. ರಾಜಗೆರೆ ರೈತ
ಈ ವರ್ಷ ಬರಗಾಲ ಎದುರಾಗಿದ್ದರಿಂದ ರಾಗಿ ಮಾತ್ರವಲ್ಲದೆ ರೈತರಿಗೆ ಯಾವ ಬೆಳೆಯೂ ಕೈಹಿಡಿದಿಲ್ಲ. ಮಳೆ ಆಶ್ರಿತ ಬೆಳೆಗಳು ಶೇ 100 ರಷ್ಟು ಹಾಳಾಗಿವೆ. ನೀರಾವರಿ ಇದ್ದವರು ಮಾತ್ರ ಬೆಳೆ ಉಳಿಸಿಕೊಂಡಿದ್ದಾರೆ
-ರಂಗಸ್ವಾಮಿ. ಸಹಾಯಕ ಕೃಷಿ ನಿರ್ದೇಶಕ ಬೇಲೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT