ಹಾಸನ: ಸಾಲಗಾಮೆ ಗೇಟ್ ಬಳಿ ಎಐಡಿಎಸ್‌ಒ ಕಚೇರಿಯನ್ನು ಎಐಡಿಎಸ್‌ಒ ರಾಜ್ಯ ಘಟಕದ ಅಧ್ಯಕ್ಷೆ ಅಶ್ವಿನಿ ಕೆ.ಎಸ್. ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ಶಿಕ್ಷಣದ ವ್ಯಾಪಾರೀಕರಣ ವಿರುದ್ಧ ಬಲಿಷ್ಠ ಹೋರಾಟಗಳನ್ನು ಕಟ್ಟುತ್ತ, ಪ್ರತಿಯೊಬ್ಬರಿಗೂ ಪ್ರಜಾತಾಂತ್ರಿಕ, ವೈಜ್ಞಾನಿಕ, ಧರ್ಮ ನಿರಪೇಕ್ಷ, ಸಮಾನ ಶಿಕ್ಷಣ ಖಾತ್ರಿ ಆಗಬೇಕೆಂದರೆ ವಿದ್ಯಾರ್ಥಿಗಳು ಹೆಚ್ಚು ಹೋರಾಟಗಳನ್ನು ಬಲಪಡಿಸಬೇಕಾದ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ಹೆಚ್ಚುತ್ತಿರುವ ಕುಸಂಸ್ಕೃತಿ ವಿರುದ್ಧ ಪರ್ಯಾಯವಾಗಿ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆದರ್ಶ, ಮೌಲ್ಯಗಳನ್ನು ಎಲ್ಲೆಡೆ ಹರಡಬೇಕು ಎಂದು ಹೇಳಿದರು.
ಅತಿಥಿಗಳಾಗಿದ್ದ ಲೇಖಕಿ ರೂಪ ಹಾಸನ ಮಾತನಾಡಿ, ಅನ್ಯಾಯದ ವಿರುದ್ಧದ ಹೋರಾಟಗಳನ್ನು ನಿರಂತರವಾಗಿ ಬೆಳೆಸುವ ಜೊತೆಗೆ ಇನ್ನಷ್ಟು ಜ್ಞಾನ ಬೆಳೆಸಿಕೊಳ್ಳಲು ಹೆಚ್ಚೆಚ್ಚು ವೈಚಾರಿಕ ಚರ್ಚೆಗಳನ್ನು ಸಂಘಟಿಸಬೇಕು ಎಂದು ಸಲಹೆ ನೀಡಿದರು.
ಎಐಡಿಎಸ್‌ಒ ರಾಜ್ಯ ಘಟಕದ ಕಾರ್ಯದರ್ಶಿ ಅಜಯ್ ಕಾಮತ್, ಉಪಾಧ್ಯಕ್ಷೆ ಚಂದ್ರಕಲಾ, ಖಜಾಂಚಿ ಸುಭಾಷ್, ಹಾಸನ ಜಿಲ್ಲೆಯ ಸಂಚಾಲಕಿ ಚೈತ್ರಾ, ಕಾರ್ಯಕರ್ತರಾದ ಸುಷ್ಮಾ, ಮಮತಾ, ಧನು, ಸೌಮ್ಯ, ಪುರುಷೋತ್ತಮ್, ವಿವಿಧ ಶಾಲೆ– ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.