ಸೋಮವಾರ, ಸೆಪ್ಟೆಂಬರ್ 20, 2021
24 °C
ತನಿಖೆ ನಡೆಸುವುದಾದರೆ ದಾಖಲೆ ನೀಡಲು ಸಿದ್ಧ; ಶಾಸಕ ಎಚ್‌.ಡಿ.ರೇವಣ್ಣ

ವಿಮಾನ ನಿಲ್ದಾಣ ಟೆಂಡರ್‌ ಅವ್ಯವಹಾರ: ಎಚ್‌.ಡಿ ರೇವಣ್ಣ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಹಾಸನ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಯ ಟೆಂಡರ್‌ನಲ್ಲಿ ಅಂದಾಜು ₹ 20 ಕೋಟಿ ಡೀಲ್ ಮಾಡಿ ಮುಂಬೈನ ಸಂಸ್ಥೆಯೊಂದಕ್ಕೆ ಗುತ್ತಿಗೆ ಕೊಡಿಸಲು ಸತತ ಪ್ರಯತ್ನ ನಡೆದಿತ್ತು’ ಎಂದು ಶಾಸಕ ಎಚ್.ಡಿ.ರೇವಣ್ಣ ಆರೋಪಿಸಿದರು.

‘ಟೆಂಡರ್‌ನಲ್ಲಿ ಎಲ್ಲಕ್ಕಿಂತಲೂ ಕಡಿಮೆ ದರ ನಮೂದಿಸಿದವರನ್ನು ಬದಿಗಿರಿಸಿ 2ನೇ ಅತಿ ಕಡಿಮೆ ದರ ನಮೂದಿಸಿದ (ಎಲ್2) ವರಿಗೆ ಗುತ್ತಿಗೆ ಕೊಡಿಸಲು ಪ್ರಯತ್ನಿಸಲಾಗಿತ್ತು. ಅದಕ್ಕಾಗಿ ವಿನಾಕಾರಣ ಪ್ರಕ್ರಿಯೆ ವಿಳಂಬ ಮಾಡಲಾಗಿತ್ತು. ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ನಿಯಮ ಪ್ರಕಾರ್ ಎಲ್- 1ಗೆ ಟೆಂಡರ್ ನೀಡಬೇಕಿತ್ತು. ಅದಕ್ಕೆ ಅಡ್ಡಗಾಲು ಹಾಕಿದ ಮುಖಂಡರೊಬ್ಬರು ಎಲ್ 1 ಗುತ್ತಿಗೆದಾರರನ್ನು ಸಂಪರ್ಕಿಸಿ ಯೋಜನೆಯಿಂದ ಹೊರಗುಳಿಯುವಂತೆ ಒತ್ತಡ ಹೇರಿದ್ದರು. ಈ ವಿಷಯ ನನ್ನ ಗಮನಕ್ಕೆ ಬಂದಾಗ ಹಿರಿಯ ಅಧಿಕಾರಿ ಗಳೊಂದಿಗೆ ಚರ್ಚಿಸಿ ಎಚ್ಚರಿಸಿದೆ. ಮುಖ್ಯಮಂತ್ರಿ ಈ ಬಗ್ಗೆ ತನಿಖೆ ನಡೆಸು ವುದಾದರೆ ಅದಕ್ಕೆ ಸಂಬಂಧಿಸಿದ ದಾಖಲೆ ಹಾಜರುಪಡಿಸಲು ಸಿದ್ಧವಿದ್ದೇನೆ’ ಎಂದು ಹೇಳಿದರು.

‘2023ರವರೆಗೆ ಅರುಣ್ ಸಿಂಗ್ ಅವರೇ ಬಿಜೆಪಿ ರಾಜ್ಯ ಉಸ್ತುವಾರಿಯಾಗಿದ್ದರೆ ಜೆಡಿಎಸ್ ಮುಳುಗುತ್ತದೆಯೋ? ಬೇರೆ ಪಕ್ಷಗಳು ಮುಳುಗುತ್ತವೋ ಎನ್ನುವುದನ್ನು ನೋಡೋಣ. ಅದಕ್ಕಾಗಿ ಅವರನ್ನು ಅದೇ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ಬಿಜೆಪಿ ಕೇಂದ್ರ ನಾಯಕರಿಗೆ ಮನವಿ ಮಾಡುತ್ತೇನೆ’ ಎಂದು ತಿರುಗೇಟು ನೀಡಿದರು.

‘ಯಡಿಯೂರಪ್ಪ ಬಿಜೆಪಿಗೆ 150 ಸ್ಥಾನ ಗೆಲ್ಲಿಸುತ್ತೇನೆ ಎನ್ನುತ್ತಿದ್ದಾರೆ. ಇವರು ಅವರ ಜತೆ ಸೇರಿ ಇನ್ನೂ 30 ಸ್ಥಾನ ಜಾಸ್ತಿ ಗೆಲ್ಲಿಸಲಿ. ಅರುಣ್ ಸಿಂಗ್ ಅವರೇ 2023ರವರೆಗೆ ರಾಜ್ಯದ ಉಸ್ತುವಾರಿ ವಹಿಸಿಕೊಂಡು ಜೆಡಿಎಸ್ ಮುಳುಗಿಸಲಿ. ನಾವೇನು ಬಿಜೆಪಿಗೆ ಬರುತ್ತೇವೆ ಎಂದು ಅರ್ಜಿ ಹಾಕಿಕೊಂಡಿಲ್ಲ’ ಎಂದು ವ್ಯಂಗ್ಯವಾಡಿದರು.

‘ಎಚ್.ಡಿ. ಕುಮಾರಸ್ವಾಮಿ ಲಘುವಾಗಿ ಮಾತನಾಡಿದ್ದಾರೆ ಎಂದಿದ್ದಾರೆ. ಜೆಡಿಎಸ್ ಮುಳುಗುತ್ತಿ ರುವ ಹಡಗು ಎನ್ನುವುದು ಲಘುವಾದ ಮಾತು ಅಲ್ಲವೇ? ನಮ್ಮ ಪಕ್ಷದ ಬಗ್ಗೆ ಭವಿಷ್ಯ ಹೇಳಲು ಇವರು ಯಾರು’ ಎಂದು ಕಿಡಿಕಾರಿದರು.

‘2023ರ ವಿಧಾನಸಭೆ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಚುನಾವಣೆ ಎದುರಿಸಲು ಸಿದ್ಧವಾಗಿದ್ದೇವೆ. ದೇವೇಗೌಡರು ಬದುಕಿರುವವರೆಗೂ ನಮ್ಮ ಪಕ್ಷ ಮುಳುಗಲು ಸಾಧ್ಯವಿಲ್ಲ’ ಎಂದರು.

‘ಎಸ್.ಆರ್.ಬೊಮ್ಮಾಯಿ ಹಾಗೂ ದೇವೇಗೌಡರ ನಡುವಿನ ಸಂಬಂಧದ ಬಗ್ಗೆ ಗೊತ್ತಿಲ್ಲದವರು ಏನೇನೋ ಮಾತನಾಡಿದ್ದಾರೆ. ಗೌಡರನ್ನು ಸಂಪುಟದಿಂದ ಬೊಮ್ಮಾಯಿ ಕೈಬಿಟ್ಟರೂ ತಾವು ಪ್ರಧಾನಿಯಾದಾಗ ದೇವೇಗೌಡರು ಎಸ್.ಆರ್.ಬೊಮ್ಮಾಯಿ ಅವರಿಗೆ ಸರ್ಕಾರದಲ್ಲಿ ಸ್ಥಾನಮಾನ ಕೊಟ್ಟಿದ್ದರು’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ.ಎಸ್‌. ಲಿಂಗೇಶ್‌, ಮುಖಂಡ ಹೊನ್ನವಳ್ಳಿ ಸತೀಶ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.