ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕನ ತತ್ವ ಸದಾ ಪ್ರಸ್ತುತ: ವೀಣಾ ಬನ್ನಂಜೆ

ಅಕ್ಕಮಹಾದೇವಿ ಜಯಂತಿ, ಎರಡು ಕೃತಿಗಳ ಲೋಕಾರ್ಪಣೆ ಮಾಡಿದ ಸಚಿವೆ ಶಶಿಕಲಾ ಜೊಲ್ಲೆ
Last Updated 27 ಸೆಪ್ಟೆಂಬರ್ 2021, 5:41 IST
ಅಕ್ಷರ ಗಾತ್ರ

ಮೈಸೂರು: ‘ಜಗತ್ತು ಎಷ್ಟು ಬದಲಾಗುತ್ತಿದ್ದರೂ ಅಕ್ಕಮಹಾದೇವಿ ವಚನಗಳು ಸರ್ವಕಾಲಕ್ಕೂ ಪ್ರಸ್ತುತ’ ಎಂದು ಚಿಂತಕಿ ಡಾ.ವೀಣಾ ಬನ್ನಂಜೆ ಅಭಿಪ್ರಾಯ ವ್ಯಕ್ತಪಡಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾ ಮತ್ತು ನಗರ ಘಟಕ, ಕದಳಿ ಮಹಿಲಾ ವೇದಿಕೆ ಮೈಸೂರು ಹಾಗೂ ಮಹಿಳಾ ಬಳಗಗಳ ಸಹಯೋಗದಲ್ಲಿ ಭಾನುವಾರ ಜೆಎಸ್‌ಎಸ್‌ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಹಾಗೂ ‘ಬೆಳಗು ಬಾ’ ಮತ್ತು ‘ಶರಣ ಸಂಸ್ಕೃತಿ ನೂರು ಪ್ರಶ್ನೆ ನೂರು ಉತ್ತರ’ ಲೋಕಾರ್ಪಣೆ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

‘ಜಾತಿಯಿಲ್ಲದ ಸಮಾಜ ನಿರ್ಮಾಣ ಮಾಡಬೇಕು, ಜಾತಿ ಇರಬಾರದು ಎಂದು ಕಠೋರವಾಗಿ ನಂಬುತ್ತೇವೆ. ಮತ್ತೊಂದೆಡೆ ನಮ್ಮ ಜಾತಿಯೇ ಮೇಲು ಎನ್ನುವ ಆರ್ಭಟ ಕೇಳುತ್ತೇವೆ. ಜಗತ್ತಿನಲ್ಲಿ ಏನೆಲ್ಲಾ ಗೊಂದಲ ಸೃಷ್ಟಿಸುವ, ವ್ಯಕ್ತಿಯ ಬೆಳವಣಿಗೆಗೆ ಅಡ್ಡಿ ಮಾಡುವ, ಭಗವಂತನ ಹತ್ತಿರ ಹೋಗದಂತೆ ಎಳೆಯುವ ಸಾಧ್ಯತೆ ಇದೆ. ಅದನ್ನು ಸಮಾಜ ನಿರಂತರವಾಗಿ ಮಾಡುತ್ತಲೇ ಇದೆ. ಹಿಂದಿನಿಂದ ಏಟುಗಳು, ಅಪವಾದದ ಮಾತುಗಳು ಕೇಳಿಬರುತ್ತಿವೆ ಈ ಸಂದರ್ಭದಲ್ಲಿ ಅಕ್ಕ ಪ್ರಸ್ತುತವಾಗದಿದ್ದರೆ ಮತ್ಯಾವಾಗ’ ಎಂದರು.

‘ಭಗವಂತನ ಮಾರ್ಗಕ್ಕೆ ಸೂತ್ರಬದ್ಧವಾದ ಉಪನಿಷತ್ತು, ವೇದವೋ, ಪುರಾಣವೋ, ಭಾಗವತವೋ ವಚನಗಳು ಪ್ರಸ್ತುತವಾಗದಿದ್ದರೆ ನಾವು ಭಗವಂತನ ಜೊತೆಗೆ ಇಲ್ಲ ಎಂದರ್ಥ’ ಎಂದು ಹೇಳಿದರು.

‘ಆಹಾರವ ಕಿರಿದು ಮಾಡಿರಯ್ಯಾ ಎಂದು ಅಕ್ಕ ಹೇಳಿದ್ದಾಳೆ. ಆಹಾರದಿಂದಲೇ ವ್ಯಾಧಿ, ನಿದ್ದೆ, ಅದರಿಂದಲೇ ತಾಮಸ, ಅಜ್ಞಾನ, ಅಹಂಕಾರ, ತಾಮಸದಿಂದ ಕಾಮ, ಕಾಮದಿಂದ ಕಾಯವಿಕಾರ, ಮನೋವಿಕಾರ, ಇಂದ್ರೀಯ ವಿಕಾರ, ಜಪ, ಧ್ಯಾನ ತಪ ಬೇಡುವ ಈ ದೇಹಕ್ಕೆ ಆಹಾರ ಕಿರಿಯ ಮಾಡಿರಯ್ಯಾ, ತನು ಕಿರಿಯ ಮಾಡಿ ಅವನಿಗೆ ಅರ್ಪಿಸಿರಯ್ಯಾ ಎಂದಿದ್ದಾರೆ. ಇದರರ್ಥ ಎಲ್ಲ ಇಂದ್ರೀಯಗಳನ್ನು ಜಾಗೃತಿಗೊಳಿಸಬೇಕಾಗಿದೆ’ ವೀಣಾ ಹೇಳಿದರು.

‘ಆತ್ಮಸಂಗಾತಕ್ಕೆ ನೀನುಂಟು ಎಂದು 12ನೇ ಶತಮಾನದಲ್ಲಿ ಅಕ್ಕ ಹೇಳಿದ್ದಾರೆ. ನನ್ನ ಕಾಯ್ದರೆ ಅವನೊಬ್ಬನೇ, ಇಲ್ಲಿ ನಾನು ಕಳೆದುಕೊಳ್ಳುವುದು ಏನು ಇಲ್ಲ, ಅಹಂಕಾರ ಮಾತ್ರ. ಅದು ಹೋದ ಮೇಲೆ ಬೇರೆ ಏನೂ ಇಲ್ಲ. ಆದರೆ, ನಮ್ಮದು ಗುರಿ ಸಾಧನೆಯ ಬದುಕಾಗಿದೆ. ಅದು ಇಲ್ಲದಿದ್ದರೆ ಬದುಕು ಸುಂದರವಾಗಿರುತ್ತದೆ’ ಎಂದರು.

‘ದೇವ ಒಲಿಯಬೇಕಾದರೆ ನಮ್ಮಲ್ಲಿ ಏನೂ ಇರಬಾರದು. ಆವ ವಿದ್ಯೆ ಅರಿತಡೇನು, ಸಾವವಿದ್ಯೆ ಗೆಲ್ಲದತನಕ ಎಂದು ವಚನದಲ್ಲಿ ಹೇಳಿದ್ದಾಳೆ. ಜ್ಞಾನಿಗಳಿಗೂ ಸಾವನ್ನು ಗೆಲ್ಲಲಾಗಿಲ್ಲ. ಅದಕ್ಕೆ ಭಕ್ತಿಮಾರ್ಗವೇ ಶ್ರೇಷ್ಠ. ಅಕ್ಕನ ಅಂತಹ ಭಕ್ತಿ ಎಂತಹ ತುತ್ತ ತುದಿಗೆ ಒಯ್ಯುತ್ತದೆ ಎಂದರೆ, ಸಾವಿನ ಬೆನ್ನಿನ ಹಿಂದೆ ಒಯ್ಯುತ್ತದೆ. ಅಂದರೆ ಸಾವಿನ ಭಯ ಹೋಗಿಸುತ್ತದೆ’ ಎಂದರು.

‘ಒಳಜೀವ ಒದ್ದಾಡಿದರೆ ನಾವು ಭಗವಂತ ಮಾರ್ಗದಲ್ಲಿ ಇಲ್ಲ ಎಂದರ್ಥ. ಸಂತೋಷದಿಂದ ಇದ್ದರೆ, ಭಗವಂತನ ಸಮೀಪ ಇದ್ದೇವೆ ಎಂದು ಅರ್ಥ. ಒಳಗಿನ ಸಂತೋಷ ಅದು ಭಗವಂತ ಜೊತೆಗೆ ಮಾತ್ರ ಸಾಧ್ಯ. ಯಾರಿಗೂ ಹಾನಿ ಮಾಡದೆ ನನ್ನಷ್ಟಕ್ಕೆ ನಾನು ನಡೆಯುವುದು. ಅದುವೇ ಪರಮಾದ್ಬುತವಾದ ಆತ್ಮಾರಾಮ ಸ್ಥಿತಿ. ನಮ್ಮಷ್ಟಕ್ಕೆ ನಾವಿರುವುದು. ಅದಕ್ಕಿಂತ ಪರಮಸುಖ, ಪರಮಾನಂದ ಜಗತ್ತಿನಲ್ಲಿ ಯಾವುದೂ ಇಲ್ಲ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ, ಪುಸ್ತಕ ಬಿಡುಗಡೆ ಮಾಡಿದ ಮುಜರಾಯಿ, ವಕ್ಫ್‌ ಮತ್ತು ಹಜ್ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಮಾತನಾಡಿ, 900 ವರ್ಷದ ಹಿಂದೆ ಹೆಣ್ಣು– ಗಂಡು ಎನ್ನದೇ ಸರಿಸಮಾನ ಅವಕಾಶ, ಅಧಿಕಾರ ಕೊಟ್ಟವರು ಬಸವಣ್ಣ. ಆದರೂ 21ನೇ ಶತಮಾನದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ, ನಮ್ಮ ಅಧಿಕಾರಕ್ಕಾಗಿ ಹಕ್ಕಿಗಾಗಿ ಹೋರಾಟ ಮಾಡುತ್ತೇವೆ’ ಎಂದರು.

‘ಒಂದು ದಿನ ಜಯಂತಿ ಆಚರಿಸಿದರೆ ಸಾಲದು ಅಕ್ಕಮಹಾದೇವಿ ಹಾಗೂ ಶರಣರು ತೋರಿದ ಮಾರ್ಗದಲ್ಲಿ ಬದುಕಿದರೆ ಬದುಕು ಸಾರ್ಥಕವಾಗುವುದು’ ಎಂದರು.

ಮಹಾನಗರ ಪಾಲಿಕೆ ಮೇಯರ್ ಸುನಂದಾ ಪಾಲನೇತ್ರ ಅವರನ್ನು ಅಭಿನಂದಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಅಭಾಶಸಾಪ ಅಧ್ಯಕ್ಷ ಡಾ.ಗೊ.ರು. ಚನ್ನಬಸಪ್ಪ ಮಾತನಾಡಿ, ‘ಮಹಿಳಾ ಆಂದೋಲನಕ್ಕೆ ದಿಟ್ಟ ನಿಲುವಿನ ಹೆಣ್ಣು ಮಕ್ಕಳ ಅಗತ್ಯವಿದೆ’ ಎಂದು ಹೇಳಿದರು.

‘ದೇವಾಲಯ ಸಂಸ್ಕೃತಿ ವಿರೋಧವಾಗಿರುವ ಶರಣ ಸಂಸ್ಕೃತಿಯ ಆರಾಧಕರಾಗಿರುವ ಶಶಿಕಲಾ ಜೊಲ್ಲೆ ಅವರಿಗೆ ಮುಜರಾಯಿ ಇಲಾಖೆ ನೀಡಿದ್ದಾರೆ. ಅವುಗಳ ರಕ್ಷಣೆ ಮಾಡಬೇಕಾಗಿದೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಗದಗ– ಡಂಬಳ ತೋಂಟದಾರ್ಯ ಸಂಸ್ಥಾನಮಠದ ತೋಂಟದ ಸಿದ್ಧರಾಮ ಸ್ವಾಮೀಜಿ, ‘ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ ಬಲ ತುಂಬಿದೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ಪ್ರಶ್ನೆ ಕೇಳುವುದು ಮಕ್ಕಳ ಸಹಜ ಸ್ವಭಾವ. ಜಗತ್ತಿನಲ್ಲಿ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಹೇಳಿದರೆ, ಜಗತ್ತು ಬದಲಾವಣೆ ಮಾಡಲು ಸಾಧ್ಯವಾಗುತ್ತದೆ. ಪ್ರಶ್ನಿಸುವ ಸಾಮರ್ಥ್ಯ ಎಲ್ಲಿ ಇರುತ್ತದೆಯೋ ಅಲ್ಲಿ ಜ್ಞಾನದ ಸ್ಥಿತಿ ವಿಸ್ತಾರವಾಗುತ್ತದೆ’ ಎಂದು ಹೇಳಿದರು.

ಪ್ರೊ.ಮಲೆಯೂರು ಗುರುಸ್ವಾಮಿ ಕೃತಿಗಳ ಪರಿಚಯಿಸಿದರು. ಶಸಾಪ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಕದಳಿ ಮಹಿಳಾ ವೇದಿಕೆ ಮೈಸೂರು ಅಧ್ಯಕ್ಷೆ ಶಾರದಾ ಗುರುಲಿಂಗಸ್ವಾಮಿ, ಶಸಾಪ ಮೈಸೂರು ನಗರದ ಘಟಕದ ಅಧ್ಯಕ್ಷ ಮ.ಗು. ಸದಾನಂದಯ್ಯ, ಜಿಲ್ಲಾ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಬೆಳಗು ಬಾ ಕೃತಿ ಲೇಖಕಿ ಎಂ.ಎ. ನೀಲಾಂಬಿಕಾ, ಶರಣ ಸಂಸ್ಕೃತಿ ನೂರು ಪ್ರಶ್ನೆ, ನೂರು ಉತ್ತರ ಸಂಪಾದಕಿ ಮುಕ್ತಾ ಬಿ. ಕಾಗಲಿ ಉಪಸ್ಥಿತರಿದ್ದರು.

ಮಹಿಳಾ ವೇದಿಕೆ, ಬಳಗಕ್ಕೆ ಅನುದಾನ: ಮನವಿ

ಸಮಾರಂಭ, ಕಾರ್ಯಕ್ರಮ ನಡೆಸಲು ಮಹಿಳಾ ವೇದಿಕೆ, ಬಳಗಗಳಿಗೆ ಸಾಕಷ್ಟು ಸಂಕಷ್ಟಗಳು ಬರುತ್ತಿವೆ. ಅದಕ್ಕಾಗಿ ಮುಜರಾಯಿ ಸಚಿವೆಯಾದ ಶಶಿಕಲಾ ಜೊಲ್ಲೆ ಅವರು, ಆರಾಧನಾ ಯೋಜನೆಯಡಿ ಒಂದಿಷ್ಟು ಅನುದಾನ ನೀಡಬೇಕು ಎಂದು ಮೇಯರ್ ಸುನಂದಾ ಪಾಲನೇತ್ರ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT