ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಕಲೇಶಪುರ | ಸದ್ಯ ವಾಣಿವಿಲಾಸ ಸಾಗರಕ್ಕೆ ಎತ್ತಿನಹೊಳೆ ನೀರು: ರಾಜಣ್ಣ

ಸೆ.6ರಂದು ಮೊದಲ ಹಂತ ಯೋಜನೆ ಉದ್ಘಾಟನೆ: ಸಚಿವ ಕೆ.ಎನ್‌. ರಾಜಣ್ಣ
Published : 4 ಸೆಪ್ಟೆಂಬರ್ 2024, 12:24 IST
Last Updated : 4 ಸೆಪ್ಟೆಂಬರ್ 2024, 12:24 IST
ಫಾಲೋ ಮಾಡಿ
Comments

ಸಕಲೇಶಪುರ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮುತುವರ್ಜಿಯಿಂದ ಹಲವು ಅಡೆತಡೆ ನಿವಾರಣೆ ಮಾಡಿ, ಎತ್ತಿನಹೊಳೆ ಯೋಜನೆ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಸೆ.6ರಂದು ವಿಧ್ಯುಕ್ತವಾಗಿ ಚಾಲನೆ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.

ತಾಲ್ಲೂಕಿನ ಹೆಬ್ಬನಹಳ್ಳಿ ಬಳಿ ಉದ್ಘಾಟನಾ ಕಾರ್ಯಕ್ರಮದ ಸ್ಥಳ ಹಾಗೂ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೆ.6 ರಂದು ಗೌರಿ ಹಬ್ಬದ ದಿನ ಎತ್ತಿನಹೊಳೆ ಯೋಜನೆಯ ಮೊದಲ ಹಂತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹಲವು ಸಚಿವರು ಭಾಗಿಯಾಗಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಪಶ್ಚಿಮಾಭಿಮುಖವಾಗಿ ಹರಿಯುವ ನದಿ ನೀರನ್ನು ಪೂರ್ವಾಭಿಮುಖವಾಗಿ ತಿರುಗಿಸುವ ವಿನೂತನ ಯೋಜನೆ ಇದು. ಒಟ್ಟು 7 ಪೈಪ್‌ಲೈನ್ ಮೂಲಕ ನೀರು ಮೇಲೆತ್ತಲಾಗುತ್ತಿದೆ. ಇದಕ್ಕಾಗಿ ನೀರನ್ನು ಸಂಗ್ರಹ ಮಾಡಲಾಗಿದೆ. ಮುಂದಿನ ವರ್ಷದ ವೇಳೆಗೆ ಅರಸೀಕೆರೆ ಹಾಗೂ ಜಿಲ್ಲೆಯ ಬೇರೆ ಭಾಗಕ್ಕೆ ನೀರು ಹರಿಯಲಿದೆ ಎಂದು ಹೇಳಿದರು.

ಸದ್ಯ ನಾಲ್ಕನೇ ವಿತರಣೆ ತೊಟ್ಟಿಯಿಂದ ವಾಣಿವಿಲಾಸ ಸಾಗರದತ್ತ ಲಿಫ್ಟ್ ಮಾಡಿದ ನೀರು ಹರಿಯುತ್ತಿದೆ. ಎಲ್ಲ ಅಡೆತಡೆ ನಿವಾರಣೆ ಮಾಡಿ ಯೋಜನೆ ಜಾರಿ ಮಾಡಲಾಗುತ್ತಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವೈಯಕ್ತಿಕ ಮುತುವರ್ಜಿಯಿಂದ ಯೋಜನೆ ಕಾರ್ಯಗತಗೊಳಿಸಲು ಶ್ರಮಿಸಿದ್ದಾರೆ ಎಂದು ವಿವರಿಸಿದರು.

ಕೆಲವೆಡೆ ಅರಣ್ಯ ಇಲಾಖೆಯ ಅಡ್ಡಿ ಆಕ್ಷೇಪಗಳು ಇರುವುದರಿಂದ ಅಡಚಣೆ ಆಗಿದೆ. ಆದ್ದರಿಂದ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಯುತ್ತಿದೆ. ಮುಂದಿನ ವರ್ಷ ಅರಸೀಕೆರೆ ಸೇರಿದಂತೆ ಏಳು ಜಿಲ್ಲೆಗಳಿಗೂ ನೀರು ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಯೋಜನೆಯಿಂದ ನೀರಿನ ಅಗತ್ಯತೆ ಇರುವ ಬಯಲು ಸೀಮೆಯ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಉಳಿದ ಕಾಮಗಾರಿಗಳನ್ನು ತುರ್ತಾಗಿ ಮಾಡಿ, ಮುಂದಿನ ವರ್ಷ ಏಳು ಜಿಲ್ಲೆಯ ಕೆರೆಗಳಿಗೆ ನೀರು ಹರಿಸುತ್ತೇವೆ ಎಂದರು.

ಸಂಸದ ಶ್ರೇಯಸ್ ಪಟೇಲ್, ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿಕ್ಕಸಿದ್ದಯ್ಯ, ಸಕಲೇಶಪುರ ಉಪ ವಿಭಾಗಾಧಿಕಾರಿ ಡಾ. ಎಂ.ಎನ್. ಶ್ರುತಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಇ.ಎಚ್. ಲಕ್ಷ್ಮಣ್ ಇದ್ದರು.

ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಬಳಿ ವಿತರಣಾ ನಾಲೆಯನ್ನು ಸಚಿವ ಕೆ.ಎನ್‌. ರಾಜಣ್ಣ ವೀಕ್ಷಿಸಿದರು.
ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಬಳಿ ವಿತರಣಾ ನಾಲೆಯನ್ನು ಸಚಿವ ಕೆ.ಎನ್‌. ರಾಜಣ್ಣ ವೀಕ್ಷಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಬಾಗಿನ

ಎತ್ತಿನಹೊಳೆ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡುವ ಮುನ್ನ ಬಾಗಿನ ಅರ್ಪಿಸುವ ನಮ್ಮ ಸಂಪ್ರದಾಯಕ್ಕೆ ಪೂರಕವಾಗಿರುವ ವಿಧಿ ವಿಧಾನಗಳನ್ನು ನೆರವೇರಿಸಲು ಉಪ ಮುಖ್ಯಮಂತ್ರಿ ನಿಶ್ಚಯ ಮಾಡಿದ್ದಾರೆ ಎಂದು ಸಚಿವ ರಾಜಣ್ಣ ತಿಳಿಸಿದರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧ್ಯುಕ್ತವಾಗಿ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡುವರು. ವಿನೂತನ ಯೋಜನೆ ಅನುಷ್ಠಾನಗೊಳಿಸಿದ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿಗೆ ಜಿಲ್ಲೆಯ ಜನರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಪಕ್ಷಾತೀತವಾಗಿ ಆಹ್ವಾನ

ಇದೊಂದು ಕುಡಿಯುವ ನೀರಿನ ಯೋಜನೆಯಾಗಿದ್ದು ಈ ಕಾರ್ಯಕ್ರಮಕ್ಕೆ ಫಲಾನುಭವಿ ಜಿಲ್ಲೆಯ ಎಲ್ಲ ಪ್ರತಿನಿಧಿಗಳಿಗೆ ಪಕ್ಷಾತೀತವಾಗಿ ಆಹ್ವಾನ ನೀಡಲಾಗಿದೆ ಎಂದು ಸಚಿವ ಕೆ.ಎನ್‌. ರಾಜಣ್ಣ ಹೇಳಿದರು. ಗುತ್ತಿಗೆದಾರರು ಸಾಕಷ್ಟು ಕಷ್ಟದ ಸನ್ನಿವೇಶ ಎದುರಿಸಿ ಯೋಜನೆ ಕಾರ್ಯಗತ ಮಾಡಿದ್ದಾರೆ. ಯೋಜನೆಗೆ ಸಹಕಾರ ನೀಡಿದ ಕೆಲ ಅಧಿಕಾರಿಗಳು ಜನರನ್ನು ಅಂದು ಸನ್ಮಾನ ಮಾಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT