ಪಿಎಸ್‌ಐ ನೇಮಕಾತಿ ಅಕ್ರಮ ತನಿಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡಬಾರದು: ಡಿಕೆಶಿ

ಅರಕಲಗೂಡು: ‘ಪಿಎಸ್‌ಐ ನೇಮಕಾತಿ ಅಕ್ರಮ ತನಿಖೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಸ್ತಕ್ಷೇಪ ಮಾಡಬಾರದು. ಸತ್ಯಾಂಶ ಮುಚ್ಚಿಡದೆ ಪ್ರಕರಣದಲ್ಲಿ ಭಾಗಿಯಾದವರ ಹೆಸರನ್ನು ಸಿಐಡಿ ಬಹಿರಂಗಪಡಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.
ಸಚಿವ ಡಾ.ಅಶ್ವತ್ಥನಾರಾಯಣ ಸಂಬಂಧಿ ಭಾಗಿಯಾಗಿರುವ ಕುರಿತು ಪ್ರಸ್ತಾಪಿಸಿ, ‘ಯಾರಾದರೂ ಲಂಚ ಪಡೆದವನು ಪಡೆದಿದ್ದಾನೆ ಅಂತ ಹೇಳುತ್ತಾನೆಯೇ? ಲಂಚ ಕೊಟ್ಟವನು ಲಂಚ ಕೊಟ್ಟಿದ್ದೀನಿ ಅಂತ ಹೇಳುತ್ತಾನೆಯೇ? ಈಗೆಲ್ಲಾ ಆಚೆ ಬಂದಿಲ್ವಾ? ಜೈಲಿಗೆ ಹಾಕಿರುವ ಹುಡುಗರನ್ನು ಕೇಳಿ’ ಎಂದು ಗುಡುಗಿದರು.
ಅಕ್ರಮದ ಮೂಲ ಹುಡುಕಿ ಹೋದರೆ ಸರ್ಕಾರವೇ ಉಳಿಯುವುದಿಲ್ಲ ಎಂಬ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ, ‘ಕುಮಾರಸ್ವಾಮಿ ಹೇಳಿರುವುದರಲ್ಲಿ ಸತ್ಯ ಕಾಣುತ್ತಿದೆ. ಅಕ್ರಮದಲ್ಲಿ ಕಿಂಗ್‌ಪಿನ್ ಇರೋದು ಸತ್ಯ. ಆ ಕಿಂಗ್‌ಪಿನ್ ಕೆಲವರನ್ನು ಬಿಡಿಸುತ್ತಿದ್ದಾರೆ. ಅಧಿಕಾರಿಗಳು ಮತ್ತು ಪೊಲೀಸ್ ಕಾನ್ಸ್ಟೆಬಲ್ಗಳನ್ನು ಮಾತ್ರ ಬಂಧಿಸುತ್ತಿದ್ದಾರೆ. ಮಂತ್ರಿಗಳ ರಕ್ಷಣೆ ಇಲ್ಲದೆ ಈ ಹಗರಣ ಆಗಲು ಸಾಧ್ಯವಿಲ್ಲ. ಗೃಹ ಸಚಿವ, ಡಾ.ಅಶ್ವತ್ಥನಾರಾಯಣ ಫೋನ್ ಮಾಡಿ ಕೆಲವರನ್ನು ಬಿಡಿಸಿದ್ದಾರೆ’ ಎಂದು ಆರೋಪಿಸಿದರು.
ತಿಹಾರ್ ಜೈಲಿಗೆ ಡಿ.ಕೆ.ಶಿವಕುಮಾರ್ ಪುಸ್ತಕ ಓದಲು ಹೋಗಿದ್ರಾ ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿ, ‘ಯಡಿಯೂರಪ್ಪ, ಅಮಿತ್ ಶಾ ಹಾಗೂ ಅವರ ಪಕ್ಷ ಶಾಸಕರು, ಮಾಜಿ ಸಚಿವರು ಜೈಲಿಗೆ ಏಕೆ ಹೋಗಿದ್ದರು? ಯಾವ ವಚನ ಓದಲು ಹೋಗಿದ್ದರು? ಅವರ ರೀತಿ ನಾನು ಯಾವುದೇ ಆರೋಪಗಳನ್ನು ಹೊತ್ತು ಹೋಗಿಲ್ಲ. ರಾಜಕೀಯ ಷಡ್ಯಂತ್ರ ರೂಪಿಸಿ ಕಳುಹಿಸಿದ್ದರು’ ಎಂದು ಕಿಡಿಕಾರಿದರು.
‘ಸರ್ಕಾರಿ ಹುದ್ದೆಗೆ ಎಷ್ಟು ಹಣ ನಡೆಯುತ್ತಿದೆ ಎಂಬುದರ ಕುರಿತು ‘ಕಾಸಿದರಷ್ಟೇ ಸರ್ಕಾರಿ ಹುದ್ದೆ’ ಎಂಬ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿರುವ ವರದಿ ಓದಿದರೆ ಗೊತ್ತಾಗುತ್ತದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.