ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವರಾಜ ಬೊಮ್ಮಾಯಿ ಬಜೆಟ್‌: ಹುಸಿಯಾದ ಜನರ ನಿರೀಕ್ಷೆ

ತೆಂಗು, ಕಾಫಿ ಬೆಳೆಗಾರರಿಗೆ ಸಿಗದ ಅಭಯ
Last Updated 18 ಫೆಬ್ರುವರಿ 2023, 6:06 IST
ಅಕ್ಷರ ಗಾತ್ರ

ಹಾಸನ: ಚುನಾವಣೆಯ ಹೊಸ್ತಿಲಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್‌ನಲ್ಲಿ ಜಿಲ್ಲೆಗೆ ಹೇಳಿಕೊಳ್ಳುವಂತಹ ಕೊಡುಗೆಗಳು ಸಿಗದೇ, ಜಿಲ್ಲೆಯ ಜನರು ನಿರಾಸೆ ಅನುಭವಿಸುವಂತಾಗಿದೆ. ಚುನಾವಣೆ ವರ್ಷವಾಗಿದ್ದರಿಂದ ಜಿಲ್ಲೆಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ.

ಜಿಲ್ಲೆಯಲ್ಲಿ ಪ್ರಮುಖವಾಗಿ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಆನೆ ಕಾರಿಡಾರ್‌ ನಿರ್ಮಾಣ ಮಾಡುವಂತೆ ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಬರಲಾಗಿದೆ. ಆದರೆ, ಈ ಬಾರಿಯ ಬಜೆಟ್‌ನಲ್ಲೂ ಈ ಬಗ್ಗೆ ಯಾವುದೇ ಪ್ರಸ್ತಾಪ ಮಾಡದೇ ಇರುವುದು ಈ ಭಾಗದ ರೈತರ ಆಸೆಗೆ ತಣ್ಣೀರು ಎರಚಿದಂತಾಗಿದೆ.

ಆನೆ ಕಾರ್ಯಪಡೆಯನ್ನು ಈಗಾಗಲೇ ರಚಿಸಿದ್ದು, ಇದಕ್ಕೆ ಹೆಚ್ಚುವರಿಯಾಗಿ 199 ಸಿಬ್ಬಂದಿಯನ್ನು ನೇಮಿಸಲು ಅನುಮೋದನೆ ನೀಡಲಾಗಿದೆ. ಮಾನವ–ಆನೆ ಸಂಘರ್ಷ ತಡೆಗೆ 72 ಕಿ.ಮೀ. ಬ್ಯಾರಿಕೇಡ್‌, 30 ಕಿ.ಮೀ. ಆನೆ ನಿರೋಧಕ ಕಂದಕ, 186 ಕಿ.ಮೀ. ಸೌರಶಕ್ತಿ ಬೇಲಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ ಎಂದು ಬೊಮ್ಮಾಯಿ ಮಂಡಿಸಿದ ಬಜೆಟ್‌ನಲ್ಲಿ ಹೇಳಲಾಗಿದೆ.

ಜಿಲ್ಲೆಯ ಪ್ರಮುಖ ಬೇಡಿಕೆಯಾಗಿದ್ದ ಆಲೂಗಡ್ಡೆ, ಕಾಫಿಗೆ ವಿಶೇಷ ಪ್ಯಾಕೇಜ್‌ ಬಗ್ಗೆಯೂ ಪ್ರಸ್ತಾಪಿಸಿಲ್ಲ. ಅಂಗಾಂಶ ಕೃಷಿ ಆಲೂಗಡ್ಡೆ ಬೆಳೆಯುವ ರೈತರಿಗೆ ಪ್ರೋತ್ಸಾಹಧನ ಯೋಜನೆ ಈಗಾಗಲೇ ಜಾರಿಯಲ್ಲಿದೆ. ಇದೀಗ ಎಪಿಕಲ್‌ ರೂಟ್ ಕಲ್ಚರ್‌ ತಂತ್ರಜ್ಞಾನವನ್ನು ರೈತರಿಗೆ ಪರಿಚಯಿಸಲು ನಿರ್ಧರಿಸಲಾಗಿದೆ.

ಈ ಭಾಗದಲ್ಲಿ ಅಧಿಕವಾಗಿರುವ ತೆಂಗು ಬೆಳೆಗಾರರಿಗೆ ಶಾಶ್ವತ ಬೆಂಬಲ ಬೆಲೆ ನಿಗದಿಯೂ ನನೆಗುದಿಗೆ ಬಿದ್ದಂತಾಗಿದೆ. ಇನ್ನು ಕಾಡಾನೆ ದಾಳಿ, ಅತಿವೃಷ್ಟಿಯಿಂದ ಕಂಗೆಟ್ಟಿರುವ ಕಾಫಿ ಬೆಳೆಗಾರರ ಪುನಶ್ಚೇತನಕ್ಕೂ ಯಾವುದೇ ಯೋಜನೆ ಘೋಷಣೆ ಮಾಡದೇ ಇರುವುದು ನಿರಾಸೆ ಮೂಡಿಸಿದೆ.

ಉದ್ಯಮ ವಲಯಕ್ಕೆ ನಿರಾಸೆ: ಬೆಂಗಳೂರಿಗೆ ಹತ್ತಿರದಲ್ಲಿರುವ ಹಾಸನ ಜಿಲ್ಲೆಯಲ್ಲಿ ಉದ್ಯಮ ಅಭಿವೃದ್ಧಿಗೆ ಉತ್ತೇಜನ ಸಿಗಬಹುದು ಎನ್ನುವ ಭರವಸೆಯೂ ಹುಸಿಯಾಗಿದೆ.

9 ಜಿಲ್ಲೆಗಳಲ್ಲಿ ಕೈಗಾರಿಕಾ ವಸಾಹತು ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಿದ್ದು, ನಿರ್ದಿಷ್ಟ ಜಿಲ್ಲೆಗಳ ಹೆಸರುಗಳು ಇಲ್ಲ. ಬಿಯಾಂಡ್‌ ಬೆಂಗಳೂರು ಯೋಜನೆಯಡಿ ಹಾಸನ ಜಿಲ್ಲೆಯಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮ, ಹಾರ್ಡ್‌ವೇರ್‌ ಪಾರ್ಕ್‌, ಲಾಜಿಸ್ಟಿಕ್‌ ಹಬ್‌, ಸೇರಿದಂತೆ ಕೈಗಾರಿಕಾ ವಲಯಕ್ಕೆ ಯಾವುದೇ ಭರವಸೆಗಳು ಸಿಕ್ಕಿಲ್ಲ ಎನ್ನುವುದು ಉದ್ಯಮಿಗಳು ಹೇಳುವ ಮಾತು.

ಶಾಲಾ–ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಬಸ್‌ ಪಾಸ್‌, ರೈತರ ಶೂನ್ಯ ಬಡ್ಡಿದರದ ಸಾಲವನ್ನು ₹ 3 ಲಕ್ಷದಿಂದ ₹5 ಲಕ್ಷ ಕ್ಕೆ ಏರಿಸಲಾಗಿದೆ.

ರೈಲ್ವೆ ಯೋಜನೆಗೆ ಅನುದಾನ: ಚಿಕ್ಕಮಗಳೂರು–ಬೇಲೂರು ರೈಲ್ವೆ ಮಾರ್ಗ ಯೋಜನೆಯ ಅಂದಾಜು ವೆಚ್ಚವನ್ನು ₹5,838 ಕೋಟಿಗೆ ಪರಿಷ್ಕರಿಸಲಾಗಿದ್ದು, ಇದಕ್ಕೆ ರಾಜ್ಯ ಸರ್ಕಾರದ ಪಾಲು ₹960 ಕೋಟಿ ಹೆಚ್ಚುವರಿ ಅನುದಾನ ನೀಡುವುದಾಗಿ ಘೋಷಿಸಲಾಗಿದೆ.

ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯ

ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಪಡಿಸುವಲ್ಲಿ ರಾಜ್ಯ ಬಜೆಟ್‌ನಲ್ಲಿ ಹಲವು ಘೋಷಣೆ ನೀಡಿರುವುದು ಸ್ವಾಗತಾರ್ಹ. ಇದು ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯವಾಗಿದೆ‌ ಎಂದು ಎಐಡಿಎಸ್‌ಒ ಹಾಸನ ಜಿಲ್ಲಾ ಸಹ ಸಂಚಾಲಕಿ ಚೈತ್ರಾ ತಿಳಿಸಿದ್ದಾರೆ.

ಸರ್ಕಾರಿ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಸರ್ಕಾರಿ ಶಾಲೆಗಳ ನವೀಕರಣ, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್, ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಸೇರಿದಂತೆ ಹಲವು ವಿದ್ಯಾರ್ಥಿ ಹೋರಾಟದ ಬೇಡಿಕೆಗಳಿಗೆ ಸ್ಪಂದನೆ ದೊರೆತಿದೆ.

ಆದರೆ, ಪ್ರತಿ ಜಿಲ್ಲೆಗೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಮತ್ತು ಇನ್ನಿತರ ವಿದ್ಯಾರ್ಥಿಗಳ ಬೇಡಿಕೆಗಳು ಈ ಬಜೆಟ್‌ನಲ್ಲಿಯೂ ಈಡೇರಿಲ್ಲ. ಜೊತೆಗೆ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದ್ದ ಲ್ಯಾಪ್ ಟಾಪ್ ಅಥವಾ ಟ್ಯಾಬ್ ಕುರಿತು ಅನುದಾನ ಬಿಡುಗಡೆಯಾಗಿಲ್ಲ. ಈ ಎಲ್ಲಾ ಬೇಡಿಕೆಗಳಿಗೂ ಇದೇ ಬಜೆಟ್‌ನಲ್ಲಿ ಅನುದಾನ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT