ಗುರುವಾರ , ಮಾರ್ಚ್ 30, 2023
23 °C
ಜೈನ ಮುನಿಗಳ ಚಾತುರ್ಮಾಸ್ಯ ವ್ರತಾಚರಣೆ ಸಂಪನ್ನ; ಪಿಂಛಿ ಪರಿವರ್ತನೆ– ಭಕ್ತರಿಂದ ಜಯಘೋಷ

‘ಧಾರ್ಮಿಕ, ಶೈಕ್ಷಣಿಕ ಕೇಂದ್ರವಾಗಲಿದೆ ಜೈನರಗುತ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಳೇಬೀಡು: ಶಿವಪುರ ಕಾವಲಿನ ರಾಶಿ ಗುಡ್ಡ ತಪ್ಪಲಿನ ಹಸಿರು ಪರಿಸರ ನಡುವೆ ಇರುವ ಅಡಗೂರು ಜೈನರ ಗುತ್ತಿಯಲ್ಲಿ ಭಾನುವಾರ ಸಂಜೆ ಜೈನ ಮುನಿಗಳ ಪಿಂಛಿ ಪರಿವರ್ತನಾ ಕಾರ್ಯಕ್ರಮ ವೈಭವದಿಂದ ನಡೆಯಿತು.

ಜಿನ ಧರ್ಮ ಪ್ರಭಾವಕ ವೀರಸಾಗರ ಮುನಿ ಮಹಾರಾಜರು ಹಾಗೂ ಅಮಿಂತಜನ ಕೀರ್ತಿ ಮಹಾರಾಜರು ಹಳೆಯ ಪಿಂಛಿಯನ್ನು ತ್ಯಜಿಸಿ ಭಕ್ತರಿಂದ ಹೊಸ ಪಿಂಛಿಯನ್ನು ಸ್ವೀಕರಿಸಿದರು.

ಕಾರ್ಯಕ್ರಮದ ಅಂಗವಾಗಿ ಭಾನುವಾರ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ವಿಧಾನಗಳು ನಡೆದವು. ತೀರ್ಥಂಕರರಿಗೆ ವಿವಿಧ ದ್ರವ್ಯಗಳಿಂದ ನಿತ್ಯ ವಿಧಿ ಅಭಿಷೇಕ, ಮುನಿಗಳ ಆಹಾರ ಚರ್ಯೆ, ಸಾಮಾಹಿಕ ಕಾರ್ಯಕ್ರಮದ ನಂತರ ಪಿಂಛಿ ಪರಿವರ್ತನ ಕಾರ್ಯಕ್ರಮವನ್ನು ಪ್ರತಿಷ್ಠಾಚಾರ್ಯ ಪವನ್ ಪಂಡಿತ್ ಹಾಗೂ ಸ್ಥಾನಿಕ ಅರ್ಚಕ ಶೀತಲ್ ಪಂಡಿತ್ ನಡೆಸಿದರು. ಜೈನ ಮುನಿಗಳಿಗೆ ಹೊಸ ಪಿಂಛಿಯನ್ನು ಸಮರ್ಪಿಸಿದಾಗ ಭಕ್ತರು ಸಂಭ್ರಮದಿಂದ ಜಯಕಾರ ಹಾಕಿ, ಭಕ್ತಿ ಸಮರ್ಪಿಸಿದರು.

ಗಾಯಕಿ ನಿರೀಕ್ಷಾ ಜೈನ್ ತಂಡದವರು ಸಂಗೀತಾ ಸುಧೆ ಹರಿಸಿದರು. ಇದೇ ಸಂದರ್ಭದಲ್ಲಿ ಧರ್ಮ ಗ್ರಂಥಗಳ ಬಿಡುಗಡೆ ಮಾಡಲಾಯಿತು. ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ 95ಕ್ಕಿಂತ ಹೆಚ್ಚು ಅಂಕ ಪಡೆದ ದಿಶಾ ಎನ್. ಜೈನ್, ಆಶಿಶ್ ಜೈನ್, ಸುಜಲ್ ವಿ. ಜೈನ್, ಅದಿತಿ ಜೈನ್, ಅಮೃತಾ ಜೈನ್, ಸಂಯಮ ಜೈನ್, ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕಪಡೆದ ಅನ್ವಿತಾ ಜೈನ್, ತಪಸ್ ಜೈನ್, ಮಾನ್ಯ ಜೈನ್, ರೋಷನ್ ಜೆ ಜೈನ್ ಹಾಗೂ ತೇಜಸ್ ಜೈನ್ ಅವರನ್ನು ವೀರಸಾಗರ ಮುನಿಮಹಾರಾಜರು ಅಭಿನಂದಿಸಿ, ಆಶೀರ್ವದಿಸಿದರು.

ವೀರಸಾಗರ ಮುನಿ ಮಹಾರಾಜರು ಮಾತನಾಡಿ, ‘ಜೈನರ ಗುತ್ತಿ ಧಾರ್ಮಿಕ ತಾಣ ಮಾತ್ರವಲ್ಲದೆ ಶೈಕ್ಷಣಿಕ ಕೇಂದ್ರವಾಗಿ ಹೊರಹೊಮ್ಮಲಿದೆ. ಕೇತ್ರದಲ್ಲಿ ಸಮಾಜಕ್ಕೆ ಉಪಯುಕ್ತವಾಗುವಂತಹ ಗೋಶಾಲೆ, ವೃದ್ಧಾಶ್ರಮ ಸಹ ನಡೆಸಲು ಸಿದ್ಧತೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಟ್ರಸ್ಟ್ ಆಸಕ್ತಿ ವಹಿಸಿ ಮುನ್ನುಗ್ಗಿದೆ’ ಎಂದರು.

ಅರತಿಪುರ ಜೈನ ಮಠದ ಸಿದ್ಧಾಂತ ಕೀರ್ತಿ ಭಟ್ಟಾರಕ ಪಟ್ಟಚಾರ್ಯವರ್ಯ ಸ್ವಾಮೀಜಿ ಅವರು, ‘ಜಾಣ್ಮೆಗಿಂತ ತಾಳ್ಮೆ ಮುಖ್ಯ ಎಂದು ಜೈನ ಧರ್ಮ ಸಮಾಜಕ್ಕೆ ತಿಳಿಸಿದೆ. ಅಹಿಂಸೆಯ ಪ್ರತೀಕವಾಗಿದೆ. ಅಹಿಂಸಾತ್ಮಕ ತತ್ವಗಳಿಂದ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ’ ಎಂದರು.

ಜೈನರಗುತ್ತಿ ಶೈಕ್ಷಣಿಕ ಹಾಗೂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ.ಅಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷ ಕುಣಿಗಲ್ ಬ್ರಹ್ಮದೇವಯ್ಯ, ಕಾರ್ಯದರ್ಶಿ ಸಜ್ಜನ್ ಜೈನ್ ನೆಲ್ಲಿಕಾರ್, ಸಹ ಕಾರ್ಯದರ್ಶಿ ಕೆ.ಜೆ.ಬ್ರಹ್ಮೇಶ್, ಖಜಾಂಚಿ ಜಯೆಂದ್ರ ಕುಮಾರ್, ನಿರ್ದೇಶಕರಾದ ರವೀಂದ್ರಕುಮಾರ್, ಕೀರ್ತಿಕುಮಾರ್, ಬಿ.ಎ.ರವಿಕುಮಾರ್, ಶೀತಲ್ ಪ್ರಸಾದ್, ಜಿನೇಂದ್ರ ಕುಮಾರ್, ಹೊಂಗೇರೆ ದೇವೇಂದ್ರ ಕುಮಾರ್, ಪ್ರಶಾಂತ್ ಕುಮಾರ್, ನಾಗೇಂದ್ರ ಪ್ರಸಾದ್, ಮುಕ್ತೀಶ್ ಜೈನ್ ಇದ್ದರು.

ಪ್ರಮೋದ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು