ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗೊಳದಲ್ಲಿ ಬೃಹತ್ ವಿದ್ಯಾಸಂಸ್ಥೆ ಸ್ಥಾಪನೆ: ರೇವಣ್ಣ

ಚಾರುಕೀರ್ತಿ ಶ್ರೀ ಬಡವರ ಪಾಲಿನ ದಾರಿ ದೀಪ: ಬಣ್ಣನೆ
Last Updated 3 ಮೇ 2019, 14:31 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಜೈನ ಕಾಶಿಯಲ್ಲಿ ಶೀಘ್ರವೇ ಬೃಹತ್ ವಿದ್ಯಾಸಂಸ್ಥೆ ತೆರೆಯಲಾಗುವುದು ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ 70 ಹುಟ್ಟುಹಬ್ಬ ಅಂಗವಾಗಿ ಹಮ್ಮಿಕೊಂಡಿದ್ದ ಗುರುವಂದನಾ ವಿನಯಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾಮೀಜಿ ಅವರೇ ಶುಭ ದಿನ ನೋಡಿ, ಯಾವ ಸಂಸ್ಥೆ ಎಂದು ಘೋಷಣೆ ಮಾಡೋಣ ಎಂದು ಹೇಳಿದ್ದಾರೆ. ಅವರ ಆಶಯದಂತೆ ಒಳ್ಳಯ ದಿನ ನೂತನ ವಿದ್ಯಾ ಸಂಸ್ಥೆ ಹೆಸರು ಪ್ರಕಟಿಸಲಾಗುವುದು. ಇದರಿಂದ ನಾಲ್ಕಾರು ಜನರಿಗೆ ಅನುಕೂಲವಾಗಬೇಕು ಎಂದು ನುಡಿದರು.

‘ಬಾಹುಬಲಿ ದೈವಶಕ್ತಿಯಿಂದ ಸ್ವಾಮೀಜಿ ಅವರು ಮಠವನ್ನು ಈ ಹಂತಕ್ಕೆ ಬೆಳೆಸಿದ್ದಾರೆ’ ಎಂದು ಗುಣಗಾನ ಮಾಡಿದ ರೇವಣ್ಣ, ‘ಶ್ರೀಗಳು ಅವರ ಸ್ವಂತಕ್ಕೆ ಏನನ್ನೂ ಕೇಳಿಲ್ಲ. ಹಿಂದೆಯೂ ನಾನು ಹಲವು ವರ್ಷ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಮಸ್ತಕಾಭಿಷೇಕದಲ್ಲೂ ಕೆಲಸ ಮಾಡುವ ಸುಯೋಗ ಸಿಕ್ಕಿದೆ. ಕರ್ಮಯೋಗಿಗಳ ಆಶೀರ್ವಾದದಿಂದ ಬೆಳಗೊಳ ಇಂದು ಅಕ್ಷರಶಃ ಬೆಳೆದಿದೆ’ ಎಂದು ನುಡಿದರು.

ವಿದ್ಯಾಕ್ಷೇತ್ರದಲ್ಲಿ ಒಂದು ಕ್ರಾಂತಿ ಮಾಡಿದ್ದಾರೆ. ಬಾಹುಬಲಿ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಸ್ಥಾಪಿಸಿರುವ ಅನೇಕ ಶೈಕ್ಷಣಿಕ ಸಂಸ್ಥೆಗಳು ಬಡವರ ಮಕ್ಕಳಿಗೆ ದಾರಿದೀಪವಾಗಿವೆ. ಮಕ್ಕಳಿಗೆ ವಿದ್ಯಾದಾನ ಮಾಡುವ ಹಿಂದಿನ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುವ ಮೂಲಕ ಸ್ವಾಮೀಜಿಗಳು ಬಡವರ ಪಾಲಿಗೆ ದೀಪವಾಗಿದ್ದಾರೆ’ ಎಂದು ಬಣ್ಣಿಸಿದರು.

ನಾಡೋಜ ಡಾ.ಹಂಪಾ ನಾಗರಾಜಯ್ಯ ಅವರದು ಇಳಿ ವಯಸ್ಸಿನಲ್ಲೂ ಭತ್ತದ ಉತ್ಸಾಹ. ಶ್ರೀಗಳು ಮಠಾಧಿಪತಿಗಳಾಗಿ 50 ವರ್ಷದ ಸಾರ್ಥಕ ಸಂದರ್ಭಗಳನ್ನು ‘ಚಾರು ಶ್ರೀ’ ಪುಸ್ತಕದಲ್ಲಿ ದಾಖಲು ಮಾಡಿರುವುದು ಸಂತಸದ ವಿಷಯ. ನಾಡಿನ ಜೈನ ಸಾಹಿತ್ಯಕ್ಕೆ ಹಾಗೂ ರಾಜ್ಯಕ್ಕೆ ನಾಗರಾಜಯ್ಯ ಅವರು ತಮ್ಮದೇ ಕೊಡುಗೆ ನೀಡಿದ್ದಾರೆ. ಇಳಿ ವಯಸ್ಸಿನಲ್ಲೂ ಅವರ ಕ್ರೀಯಾಶೀಲತೆ, ಲವಲವಿಗೆ ನಮಗೆಲ್ಲಾ ಮಾದರಿ ಎಂದರು.

ಚಂದ್ರಪ್ರಭ ಸಾಗರ ಮಹಾರಾಜರು ಕಳುಹಿಸಿರುವ ಸ್ಪಟಿಕ ಜಿನಬಿಂಬ ಪ್ರತಿಷ್ಠಾಪಿಸಿರುವ ರಜತ ಮಾನಸ್ತಂಭವನ್ನು ಅವರ ಶಿಷ್ಯರು ಚಾರುಕೀರ್ತಿ ಶ್ರೀಗಳಿಗೆ ಕೊಡುಗೆಯಾಗಿ ನೀಡಿದರು. ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಅವರು ಸ್ವಾಮೀಜಿಯನ್ನು ಸನ್ಮಾನಿಸಿದರು.

ಸಾಹಿತಿ ಹಂಪ ನಾಗರಾಜಯ್ಯ, ಡಾ. ಜಯಂಧರ್‌ ಸೋನಿ ಸಂಪಾದಕತ್ವದಲ್ಲಿ ಸಿದ್ಧಗೊಂಡಿರುವ ಚಾರುಶ್ರೀ ಗ್ರಂಥ ಲೋಕಾರ್ಪಣೆಗೂ ಮುನ್ನ ಬಸದಿಯಿಂದ ರಜತ ಪಲ್ಲಕ್ಕಿಯಲ್ಲಿ ಇಬ್ಬರು ಹೆಗಲ ಮೇಲೆ ಹೊತ್ತುಕೊಂಡು ವೇದಿಕೆಗೆ ತಂದಿದ್ದು ವಿಶೇಷವಾಗಿತ್ತು.

ಮಹೋತ್ಸವದ ಪ್ರಯುಕ್ತ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಶ್ರಾವಕ ಶ್ರಾವಕಿಯರು 70 ಅರ್ಘ್ಯಗಳನ್ನು ಸಮರ್ಪಿಸಿ ಗೌರವಿಸಿದರು. ಸ್ಥಳೀಯ ಜೈನ ಸಮಾಜ, ಕೂಷ್ಮಾಂಡಿನಿ ಮಹಿಳಾ ಸಮಾಜದ ಸದಸ್ಯರು 70 ತರದ ಶ್ರೀಫಲಗಳನ್ನು ಚಾರುಕೀರ್ತಿ ಶ್ರೀಗಳಿಗೆ ಅರ್ಪಿಸಿದರು.

ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಶಾಸಕ ಸಿ.ಎನ್. ಬಾಲಕೃಷ್ಣ, ಬಿಜೆಪಿ ಮುಖಂಡ ಗೋ.ಮಧುಸೂಧನ್‌, ಡಾ. ಜಯಂಧರ್‌ ಸೋನಿ, ಪ್ರೊ. ಲುಯಿಟ್‌ ಗಾರ್ಡ್‌ ಸೋನಿ, ಬಿ.ಪ್ರಸನ್ನಯ್ಯ, ಎಸ್‌.ಜಿತೇಂದ್ರ ಕುಮಾರ್‌ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ರಮೇಶ್‌, ತಾಲ್ಲೂಕು ಪಂಚಾಯಿತಿ ಸದಸ್ಯೆ ಮಹಾಲಕ್ಷ್ಮಿ ಶಿವರಾಜ್‌, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ರಮೇಶ್‌, ಹಿರಿಯ ಪತ್ರಕರ್ತ ಪದ್ಮರಾಜ್‌ ದಂಡಾವತಿ, ಜೈನ ಸಮಾಜದ ಅಧ್ಯಕ್ಷ ಜಿ.ಪಿ.ಪದ್ಮಕುಮಾರ್‌, ಮಹಿಳಾ ಸಮಾಜದ ಅಧ್ಯಕ್ಷೆ ಪೂರ್ಣಿಮಾ ಅನಂತ ಪದ್ಮನಾಭ್‌ ಇದ್ದರು ಸೌಮ್ಯ, ಸರ್ವೇಶ್‌ ಜೈನ್‌ ಪ್ರಾರ್ಥಿಸಿದರು. ಎಸ್‌.ಎನ್‌.ಅಶೋಕ್‌ ಕುಮಾರ್‌ ಸ್ವಾಗತಿಸಿದರು, ಎಚ್‌.ಎನ್‌.ಆರತಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT