ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಂಡೆಕಟ್ಟೆಯಲ್ಲಿ ಜೀವ ವೈವಿಧ್ಯ ವನ: ಅನಂತ ಹೆಗಡೆ ಅಶೀಸರ

308 ಎಕರೆ ಪ್ರದೇಶದಲ್ಲಿ ವಿಶೇಷ ಯೋಜನೆ
Last Updated 19 ಆಗಸ್ಟ್ 2020, 14:03 IST
ಅಕ್ಷರ ಗಾತ್ರ

ಹಾಸನ: ನಗರದ ಹೊರವಲಯದಲ್ಲಿರುವ ಗೆಂಡೆಕಟ್ಟೆ ಅರಣ್ಯವನ್ನು ವಿಶೇಷ ಜೀವ ವೈವಿಧ್ಯ ವನವನ್ನಾಗಿ ಮಾರ್ಪಾಡು ಮಾಡಲು ಯೋಜನೆ ರೂಪುಗೊಂಡಿದ್ದು, ಮುಂದಿನ ದಿನಗಳಲ್ಲಿ ಜಾರಿಯಾಗಲಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಅಧಿಕಾರಿಗಳೊಂದಿಗೆ ಸಭೆ ನಡಸಿದ ಅವರು, ಅಧಿಕಾರಿಗಳಿಂದ ವರದಿ ಪಡೆದು, ಸುಮಾರು 308 ಎಕರೆ ಪ್ರದೇಶದಲ್ಲಿರುವ ಗೆಂಡೆಕಟ್ಟೆ ಅರಣ್ಯ ಪ್ರದೇಶವನ್ನು ವಿಶೇಷ ಯೋಜನೆಯಡಿ ಜೀವ ವೈವಿಧ್ಯ ವನವನ್ನಾಗಿ ಮಾರ್ಪಾಡು ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ. ಅದರಂತೆಯೇ ನದಿ ಮೂಲಗಳು, ಪುರಾತನ ಕೆರೆಗಳು ಹಾಗೂ ಅರಣ್ಯ ಪರಿಸರ ಪುನಶ್ಚೇತನಕ್ಕೆ ವಿಶೇಷ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಅರಣ್ಯ, ಕೆರೆಗಳು ಒತ್ತುವರಿಯಾಗಿ ಕಣ್ಮರೆ ಆಗುತ್ತಿವೆ. ಅಳಿವಿನಂಚಿನಲ್ಲಿರುವ ಜೀವ ವೈವಿಧ್ಯತೆಗಳನ್ನು, ಪರಿಸರ ಉಳಿಸುವ ದೃಷ್ಟಿಯಿಂದ ಮೂರು ಹಂತಗಳಲ್ಲಿ ಸಮಿತಿ ರಚಿಸಿ, ಅವುಗಳ ಮೂಲಕ ಸ್ಥಳೀಯ ಸಂಸ್ಥೆಗಳನ್ನು ಒಗ್ಗೂಡಿಸಿ, ದಾಖಲಾತಿಗಳ ಅಧ್ಯಯನ ಹಾಗೂ ವರದಿ ಮಾಡುವುದು ಅಗತ್ಯವಿದೆ ಎಂದರು.

ಪ್ರತಿ ಗ್ರಾಮದಲ್ಲಿ ಜನತಾ ಜೀವ ವೈವಿಧ್ಯತೆ ದಾಖಲಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಮಲೆನಾಡು ಪ್ರದೇಶಗಳಲ್ಲಿ ವಿವಿಧ ಬಗೆಯ ಔಷಧಿ ಗುಣವುಳ್ಳ ಸಸ್ಯ ಸಂಪತ್ತು, ವಿಶೇಷ ಮಸಾಲೆ ಪದಾರ್ಥಗಳಾದ ಏಲಕ್ಕಿ, ಜಾಯಿಕಾಯಿ ಹಾಗೂ ಇತರೆ ಸಾಂಬಾರ ಪದಾರ್ಥಗಳ ಉತ್ಪಾದನೆ ದಿನೇ ದಿನೇ ಕ್ಷೀಣಿಸುತ್ತಿದೆ. ಈ ನಿಟ್ಟಿನಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅವುಗಳ ಉತ್ಪಾದನೆ ಹೆಚ್ಚಿಸಲು ವಿಶೇಷ ಯೋಜನೆ ಸರ್ಕಾರಕ್ಕೆ ಮಂಡಿಸಬೇಕು ಎಂದರು.

ಸ್ಥಳೀಯ ಪ್ರದೇಶಗಳಲ್ಲಿ ಪಾರಂಪರಿಕವಾಗಿ ಮಹತ್ವವುಳ್ಳ ಆಹಾರ ಪದಾರ್ಥಗಳು ಹಾಗೂ ವಿಶೇಷ ತಳಿಗಳ ಹಣ್ಣುಗಳನ್ನು ಬೆಳೆಯಲು, ಜಾನುವಾರುಗಳನ್ನು ಸಾಕಲು ಉತ್ತೇಜನ ನೀಡಬೇಕು. ಇದಕ್ಕೆ ಜಿಯೋ ಟ್ಯಾಗ್ ಪಡೆಯಲು ಅಧಿಕಾರಿಗಳು, ಕೃಷಿ ವಿಜ್ಞಾನಿಗಳು ಶ್ರಮಿಸಬೇಕು ಎಂದು ನುಡಿದರು.

ರಾಜ್ಯದಾದ್ಯಂತ ಸುಮಾರು 29 ಕೃಷಿ ರಾಸಾಯನಿಕಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದರೂ ಅವುಗಳ ಮಾರಾಟ ಹಾಗೂ ಬಳಕೆ ನಿಂತಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಶುಂಠಿ ಬೆಳೆಗಾರರು ಹೆಚ್ಚು ರಾಸಾಯನಿಕ ಬಳಸುತ್ತಿದ್ದು, ಇದರಿಂದ ಜೀವ ಸಂಕುಲದ ಆರೋಗ್ಯ ಹಾಗೂ ಪರಿಸರ ಹಾನಿ ಉಂಟಾಗುತ್ತಿದೆ. ಇದರಿಂದ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಇದರ ಬಗ್ಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಮಾತನಾಡಿ, ಜಿಲ್ಲಾ ಪಂಚಾಯಿತಿ ಸೇರಿದಂತೆ 267 ಗ್ರಾಮ ಪಂಚಾಯಿತಿಗಳು, 8 ತಾಲ್ಲೂಕು ಪಂಚಾಯಿತಿಗಳಲ್ಲಿ ಜೀವ ವೈವಿಧ್ಯ ಸಮಿತಿ ರಚಿಸಲಾಗಿದೆ. ಸಂಬಂಧಪಟ್ಟ ದಾಖಲಾತಿ ಹಾಗೂ ವರದಿಗಳನ್ನು ಪ್ರತಿ ತಿಂಗಳ ಕೊನೆಯಲ್ಲಿ ಸಲ್ಲಿಸಲಾಗುತ್ತಿದೆ. ಹಾಸನ ತಳಿ ಮೇಕೆ ಹಾಗೂ ಆಲೂರು ಸಣ್ಣ ಅಕ್ಕಿ ತಳಿಯ ಬಗ್ಗೆ ಸಭೆಯ ಗಮನಕ್ಕೆ ತಂದ ಅವರು, ಇವುಗಳ ಸಂವರ್ಧನೆಗೆ ಪ್ರಾಮುಖ್ಯತೆ ನೀಡಬೇಕು ಎಂದರು.

ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್, ಜಿಲ್ಲಾ ಪಂಚಾಯಿತಿ ಉಪ ಮುಖ್ಯ ಕಾರ್ಯದರ್ಶಿ ಮಹೇಶ್, ಜಂಟಿ ಕೃಷಿ ನಿರ್ದೇಶಕ ರವಿಕುಮಾರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT