ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕೈಜಾರಿದ ಹಾಸನ ಕ್ಷೇತ್ರ

ಮುಂದಿನ ಕಾರ್ಯತಂತ್ರದ ಕುರಿತು ಸ್ಥಳೀಯ ಮುಖಂಡರಿಂದ ಗೋಪ್ಯ ಚರ್ಚೆ
Published 19 ಮಾರ್ಚ್ 2024, 5:24 IST
Last Updated 19 ಮಾರ್ಚ್ 2024, 5:24 IST
ಅಕ್ಷರ ಗಾತ್ರ

ಹಾಸನ: ಮಂಡ್ಯ, ಹಾಸನ ಮತ್ತು ಕೋಲಾರದಲ್ಲಿ ಜೆಡಿಎಸ್‌ ಸ್ಪರ್ಧಿಸಲಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಇಲ್ಲಿ ಈಚೆಗೆ ನಡೆದ ಕಾರ್ಯಕರ್ತರ ಸಭೆಯಲ್ಲಿಯೇ ಹೇಳಿದ್ದು ಹಾಸನ ಕ್ಷೇತ್ರ ಬಿಜೆಪಿಯ ಕೈತಪ್ಪಿದಂತಾಗಿದೆ. ಆದಾಗ್ಯೂ, ‘ಮೈತ್ರಿ ಕುರಿತು ಯಾವುದೇ ಸೂಚನೆ ಬಂದಿಲ್ಲ’ ಎಂದು ಹೇಳುವ ಮೂಲಕ ಬಿಜೆಪಿ ನಾಯಕರು ವರಿಷ್ಠರ ನಿರ್ಧಾರದತ್ತ ದೃಷ್ಟಿ ನೆಟ್ಟು ಕುಳಿತಿದ್ದಾರೆ.

ಹಾಸನದಿಂದ ಪ್ರಜ್ವಲ್‌ ರೇವಣ್ಣ ಸ್ಪರ್ಧಿಸಲಿದ್ದಾರೆ ಎಂದು ಕುಮಾರಸ್ವಾಮಿ ಘೋಷಿಸಿದ್ದಾರೆ. ಈಚೆಗೆ ಬಿಜೆಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಹಾಸನ, ಮಂಡ್ಯ, ಕೋಲಾರ ಕ್ಷೇತ್ರಗಳ ಹೆಸರು ಇಲ್ಲದಿರುವುದು ಕುಮಾರಸ್ವಾಮಿ ಅವರ ಹೇಳಿಕೆಗೆ ಮತ್ತಷ್ಟು ಪುಷ್ಟಿ ನೀಡಿದೆ.

ಹಾಸನ ಕ್ಷೇತ್ರ ಬಿಜೆಪಿ ಕೈಜಾರಿರುವುದು ಸ್ಥಳೀಯ ನಾಯಕರಿಗೂ ಗೊತ್ತಾಗಿದೆ. ಅದಕ್ಕಾಗಿಯೇ ಇತ್ತೀಚೆಗೆ ಸಭೆ ನಡೆಸಿರುವ ಸ್ಥಳೀಯ ಪ್ರಮುಖ ನಾಯಕರು ಗೋಪ್ಯವಾಗಿ ಮುಂದಿನ ಕಾರ್ಯತಂತ್ರದ ಕುರಿತು ಚರ್ಚಿಸಿದ್ದಾರೆ. ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎ.ಟಿ. ರಾಮಸ್ವಾಮಿ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್‌ ನಾಗೇಂದ್ರ, ಸಕಲೇಶಪುರ ಶಾಸಕ ಸಿಮೆಂಟ್‌ ಮಂಜು, ಮುಖಂಡ ಯೋಗಾರಮೇಶ್‌ ಭಾಗಿಯಾಗಿದ್ದರು.

ಈ ಚುನಾವಣೆಯಲ್ಲಿ ಎ.ಟಿ. ರಾಮಸ್ವಾಮಿ ಅವರನ್ನೇ ಕಣಕ್ಕೆ ಇಳಿಸಬೇಕೆಂದು ಬಿಜೆಪಿ ಜಿಲ್ಲಾ ಘಟಕದಿಂದ ತೀರ್ಮಾನ ಮಾಡಲಾಗಿತ್ತು. ಅದಕ್ಕಾಗಿಯೇ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿಯೇ ಜೆಡಿಎಸ್ ತೊರೆದು, ಬಿಜೆಪಿ ಸೇರಿದ್ದ ರಾಮಸ್ವಾಮಿ, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಹೋಗುವ ಉದ್ದೇಶದಿಂದಲೇ ಅವರು ಈ ನಿರ್ಧಾರ ಕೈಗೊಂಡಿದ್ದರು ಎನ್ನುವುದು ಗುಟ್ಟೇನಲ್ಲ ಎಂದು ಮುಖಂಡರು ತಿಳಿಸಿದರು.

ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಯಿಂದ ಹಾಸನ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕಾಗಿದೆ. ಇನ್ನೊಂದೆಡೆ ಕಾಂಗ್ರೆಸ್‌ ತನ್ನ ಅಭ್ಯರ್ಥಿ ಘೋಷಿಸಿದ್ದು, ರಾಮಸ್ವಾಮಿ ಅವರಿಗೆ ಅಲ್ಲೂ ಬಾಗಿಲು ಮುಚ್ಚಿದಂತಾಗಿದೆ.

ಇನ್ನೊಂದೆಡೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ‘ಪ್ರೀತಂ ಗೌಡರನ್ನು ಸೋಲಿಸಿ’ ಎಂದವರ ಜೊತೆಗೆ ಸ್ನೇಹದ ಹಸ್ತ ಚಾಚುವುದು ಹೇಗೆ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಬಿಜೆಪಿ ನಾಯಕರ ಗೋಪ್ಯ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ತಟಸ್ಥ ನಿಲುವು: ‘ವರಿಷ್ಠರು ಹಾಸನ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಲ್ಲಿ ತಟಸ್ಥ ನಿಲುವು ತಳೆಯಬೇಕು’ ಎನ್ನುವ ಸಲಹೆ ಸಭೆಯಲ್ಲಿ ವ್ಯಕ್ತವಾಗಿದೆ. ‘ಈ ಮೂಲಕ ವರಿಷ್ಠರ ಮಾತಿಗೆ ಮನ್ನಣೆ ನೀಡಿದಂತೆಯೂ ಆಗುತ್ತದೆ; ಜೆಡಿಎಸ್‌ ಜೊತೆಗೆ ಸ್ನೇಹದ ಹಸ್ತ ಚಾಚುವುದೂ ತಪ್ಪಲಿದೆ’ ಎನ್ನುವ ಅಭಿಪ್ರಾಯಗಳು ಸಭೆಯಲ್ಲಿ ಬಂದವು ಎಂದು ಮೂಲಗಳು ತಿಳಿಸಿವೆ.

ಆದರೆ, ಬಿಜೆಪಿ ನಾಯಕರಿಂದ ಮೈತ್ರಿ ಕುರಿತು ಯಾವುದೇ ಅಧಿಕೃತವಾಗಿ ಸೂಚನೆ ಬಾರದಿರುವುದು ಸ್ಥಳೀಯ ನಾಯಕರಲ್ಲಿ ಇನ್ನೂ ಆಶಾಭಾವ ಉಳಿಸಿದೆ. ಅದಕ್ಕಾಗಿಯೇ ಸಭೆಯ ಮೂಲಕ ಕೊನೆಯ ಕಸರತ್ತು ನಡೆಸಿದ್ದಾರೆ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

ಜಿಲ್ಲೆಯಲ್ಲಿ ಪಕ್ಷ ಸದೃಢವಾಗಿದ್ದು ಬಿಜೆಪಿ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಬೇಕು ಎಂದು ವರಿಷ್ಠರಿಗೆ ಮನವರಿಕೆ ಮಾಡಲಾಗಿದೆ. ಅವರ ತೀರ್ಮಾನದಂತೆ ಮುಂದಿನ ಹೆಜ್ಜೆ ಇಡಲಾಗುವುದು

-ಸಿದ್ದೇಶ್‌ ನಾಗೇಂದ್ರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಶ್ರೇಯಸ್ ಸೋದರತ್ತೆ ಕಣಕ್ಕೆ?

ಹಾಸನ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರೇಯಸ್‌ ಪಟೇಲ್‌ ಅವರ ಸೋದರತ್ತೆಯನ್ನೇ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವ ಪ್ರಯತ್ನಗಳು ನಡೆಯುತ್ತಿವೆಯೇ ಎನ್ನುವ ಚರ್ಚೆಯೂ ನಡೆದಿದೆ. ಮೋದಿ ಅವರನ್ನು ಬೆಂಬಲಿಸಿ ಶ್ರೇಯಸ್ ಅವರ ಸೋದರತ್ತೆ ರಾಜೇಶ್ವರಿ ವಿಜಯಕುಮಾರ್ ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ ಎನ್ನುವ ಸಂದೇಶ ಭಾನುವಾರ ಬೆಳಿಗ್ಗೆಯಿಂದ ವಾಟ್ಸ್‌ಆ್ಯಪ್‌ ಗುಂಪುಗಳಲ್ಲಿ ಹರಿದಾಡುತ್ತಿದೆ. ‘ಹಾಸನ ಜಿಲ್ಲೆಯಲ್ಲಿ ರಾಜಕೀಯ ರೋಚಕ ತಿರುವು ಕಾಣಲಿದೆ. ಜಿಲ್ಲೆಯ ಪ್ರಭಾವಿ ರಾಜಕಾರಣಿ ದಿ.ಎಚ್.ಸಿ ಶ್ರೀಕಂಠಯ್ಯ ಅವರ ಸೊಸೆ ಹಾಸನದ ಮಾಜಿ ಸಂಸದ ದಿ. ಜಿ.ಪುಟ್ಟಸ್ವಾಮಿಗೌಡರ ಮಗಳನ್ನು ಈ ಬಾರಿ ನರೇಂದ್ರ ಮೋದಿಯವರ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಾಗುತ್ತಿದೆ’ ಎನ್ನುವ ಸಂದೇಶ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT