ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಸದೃಢ, ಕಾರ್ಯಕರ್ತರು ಧೃತಿಗೆಡಬೇಕಿಲ್ಲ: ಎಚ್‌.ಡಿ. ರೇವಣ್ಣ

Last Updated 3 ನವೆಂಬರ್ 2021, 14:58 IST
ಅಕ್ಷರ ಗಾತ್ರ

ಹಾಸನ: ‘ಪಶ್ಚಿಮ ಬಂಗಾಳದ ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕಡೆ ರಾಷ್ಟ್ರೀಯ ಪಕ್ಷ ಬಿಜೆಪಿ ಠೇವಣಿ ಕಳೆದುಕೊಂಡಿರುವಾಗ ಪ್ರಾದೇಶಿಕ ಪಕ್ಷ ಜೆಡಿಎಸ್‌ ಯಾವ ಲೆಕ್ಕ’ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

‘ಸಿಂದಗಿಯಲ್ಲಿ ಬಿಜೆಪಿ ಗೆಲ್ಲಲು ಕಾಂಗ್ರೆಸ್ ಕಾರಣ. ಆದರೆ, ಹಾನಗಲ್‌ನಲ್ಲಿ ಬಿಜೆಪಿ ಆಂತರಿಕ ಜಗಳದಿಂದ ಕಾಂಗ್ರೆಸ್ ಗೆದ್ದಿದೆ. ಮತದಾರರು ಪ್ರೀತಿಯಿಂದ ಮತ ಹಾಕಿಲ್ಲ. ಮುಖಂಡರ ಪ್ರಚಾರದಿಂದಲೂ ಗೆದ್ದಿಲ್ಲ. ಕಾರ್ಯಕರ್ತರ ಒತ್ತಾಯದ ಮೇರೆಗೆ ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಾಯಿತು. ಪಕ್ಷ ಸದೃಢವಾಗಿದ್ದು, ಕಾರ್ಯಕರ್ತರು ದೃತಿಗೆಡಬೇಕಿಲ್ಲ. ಚುನಾವಣೆಯಲ್ಲಿ ಸೋಲು, ಗೆಲುವು ಸಾಮಾನ್ಯ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಅಭ್ಯರ್ಥಿಗಳೇ ಇಲ್ಲದ ಹೀನಾಯ ಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ.ಸಿಂದಗಿಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕರೆದುಕೊಂಡು ಹೋಗಿ ನಿಲ್ಲಿಸಿದ್ದಕ್ಕೆ ಮತದಾರರುಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ’ ಎಂದು ಟೀಕಿಸಿದರು.

‘ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ವಿರುದ್ಧ ಅಪಪ್ರಚಾರ ಮಾಡಲು ಆರಂಭಿಸಿದರು. ಜೆಡಿಎಸ್ ಮುಗಿಸಬೇಕೆಂಬುದೇ ಕಾಂಗ್ರೆಸ್ ನ ಮೊದಲ ಆದ್ಯತೆಯಾಗಿದೆ. ಉಪ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಂದ ಹಣದ ಹೊಳೆಯೇ ಹರಿದಿದೆ. ನಮ್ಮ ಬಳಿ ಅಷ್ಟು ಹಣವಿಲ್ಲ. ಆದರೆ, ದೇವೇಗೌಡರು ಇರುವವರೆಗೂ ಪ್ರಾದೇಶಿಕ ಪಕ್ಷ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದರು.

‘2018ರಲ್ಲಿ ಜೆಡಿಎಸ್‌ನ ಏಳು ಶಾಸಕರನ್ನು ಕಾಂಗ್ರೆಸ್‌ನವರು ಕರೆದುಕೊಂಡು ಹೋದರು. ಎಲ್ಲರೂ ಸೋತು ಮನೆಗೆ ಹೋದರು. 125 ಸ್ಥಾನದಿಂದ 79ಕ್ಕೆ ಇಳಿಯುವ ಮೂಲಕ ಜನ ಕಾಂಗ್ರೆಸ್‌ಗೆ ಬುದ್ಧಿ ಕಲಿಸಿದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಸ್ವತಂತ್ರವಾಗಿ ಅಧಿಕಾರ ಹಿಡಿಯಲಿದೆ’ ಎಂದು ವಿಶ್ವಾಸವ್ಯಕ್ತಪಡಿಸಿದರು.

ಕಾಂಗ್ರೆಸ್‌ನಲ್ಲಿ ಕೆಲವು ಹೊಗಳು ಭಟ್ಟರು ಇದ್ದಾರೆ. ಅವರಿಗೆ ಎಚ್.ಡಿ. ಕುಮಾರಸ್ವಾಮಿ ಅವರನ್ನು ತೆಗಳುವುದೇ ಕೆಲಸ. ಸಿಂದಗಿಯಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಕರೆದುಕೊಂಡು ಹೋಗಿ ಅಪಪ್ರಚಾರ ಮಾಡಿದ್ದರಿಂದ ಸೋಲು ಅನುಭವಿಸಬೇಕಾಗಿದೆ ಎಂದರು.

‘ಜಿಲ್ಲೆಯ ಜಾನುವಾರುಗಳಿಗೆ ಎರಡು ವರ್ಷಗಳಿಂದ ಕಾಲುಬಾಯಿ ಜ್ವರ ಮತ್ತು ಚಪ್ಪೆ ರೋಗಕ್ಕೆ ಲಸಿಕೆ
ನೀಡಿರಲಿಲ್ಲ. ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ಜತೆ ಮಾತನಾಡಿದ ಮಾರನೇ ದಿನವೇ ಜಿಲ್ಲೆಗೆ 5.5 ಲಕ್ಷ ಡೋಸ್‌ ಲಸಿಕೆ ಬಂದಿದ್ದು, ಈಗಾಗಲೇ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯ ನಡೆಯುತ್ತಿದೆ’ ಎಂದು ಶಾಸಕ ರೇವಣ್ಣಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT