ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸ್ಥಾಪಿಸಿದ್ದು ವಾಟ್ಸ್‌ಆ್ಯಪ್‌ ವಿವಿ: ಯು.ಟಿ. ಖಾದರ್‌ ವಾಗ್ದಾಳಿ

Last Updated 8 ಫೆಬ್ರುವರಿ 2020, 13:30 IST
ಅಕ್ಷರ ಗಾತ್ರ

ಹಾಸನ: ಸಂವಿಧಾನ ನೀಡಿರುವ ಮೀಸಲಾತಿ ರದ್ದುಗೊಳಿಸುವ ಸಲುವಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂದು ಶಾಸಕ ಯು.ಟಿ.ಖಾದರ್ ಅವರು ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.

ಎಲ್ಐಸಿ, ಬಿಇಎಂಎಲ್‌, ಬಿಪಿಸಿಎಲ್ ಸೇರಿದಂತೆ ಹಲವು ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ‌ ಅಧಿಕಾರ ಮಾಡುವುದು ಯಾವ ದೇಶ ಪ್ರೇಮ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಸೌದಿ ಅರೇಬಿಯಕ್ಕೆ ಬಿಪಿಸಿಎಲ್ ಅನ್ನು ಮಾರಿದರೆ ಅದು ವಿಶ್ವದ ನಂಬರ್‌ ಒನ್‌ ಸಂಸ್ಥೆಯಾಗಲಿದೆ. ಮನೆಯಲ್ಲಿ ಕಷ್ಟ ಬಂದಾಗ ಮಾಂಗಲ್ಯ ಅಡವಿಟ್ಟಂತೆ ಎಲ್ಐಸಿ ಯನ್ನು ಮಾರಾಟ ಮಾಡಲು ಮುಂದಾಗಿದೆ. ಎಲ್ಐಸಿ ಖಾಸಗೀಕರಣ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾವನಾತ್ಮಕ ವಿಚಾರದಿಂದ ಹೊಟ್ಟೆ ತುಂಬವುದಿಲ್ಲ. ದೇಶದ ಯುವಕರು, ವಿದ್ಯಾರ್ಥಿಗಳು ಈ ವಿಚಾರವನ್ನು ಅರ್ಥ ಮಾಡಿಕೊಂಡು ಬೀದಿಗಿಳಿದು ಹೋರಾಟ ಮಾಡಬೇಕು. ಇಲ್ಲದಿದ್ದರೆ ಭಾರತ ಬಲಿಷ್ಠ ರಾಷ್ಟ್ರವಾಗುವುದಿಲ್ಲ ಎಂದು ಎಚ್ಚರಿಸಿದರು.

ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರು ಸ್ಥಳೀಯ ರೈಲ್ವೆ ಯೋಜನೆಗೆ ₹ 18,600 ಕೋಟಿ ಘೋಷಿಸಿದೆ. ಆದರೆ ಅದಕ್ಕೆ ಮೀಸಲಿಟ್ಟ ಹಣ ₹ 1 ಕೋಟಿ ಎಂದು ಲೇವಡಿ ಮಾಡಿದರು.

ಬಿಜೆಪಿಯ 25 ಸಂಸದರು ಹಾಗೂ ರಾಜ್ಯ ಪ್ರತಿನಿಧಿಸುವ ಮೂವರು ಕೇಂದ್ರ ಸಚಿವರು ಕರ್ನಾಟಕದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿಲ್ಲ. ಪ್ರಧಾನಿ‌ ಮುಂದೆ ಮಾತನಾಡಲು ಹೆದರುತ್ತಿದ್ದಾರೆ. ದೇಶದಲ್ಲಿ ಅಧಿಕಾರ ನಡೆಸಿದ ಎಲ್ಲ ಪ್ರಧಾನಿಗಳು ಶಿಕ್ಷಣಕ್ಕೆ ಕೊಡುಗೆ ನೀಡಿದ್ದಾರೆ. ರಾಜೀವ್ ಗಾಂಧಿ ನವೋದಯ ಸಂಸ್ಥೆ ಸ್ಥಾಪಿಸಿದರು. ಬಿಜೆಪಿ ಸರ್ಕಾರದ ಅಧಿಕಾರದಲ್ಲಿ ಯಾವುದೇ ವಿಶ್ವವಿದ್ಯಾಲಯ ಪ್ರಾರಂಭಿಸಲಿಲ್ಲ. ಇವರು ಸ್ಥಾಪಿಸಿದ್ದು ವಾಟ್ಸ್ ಆ್ಯಪ್‌ ವಿಶ್ವವಿದ್ಯಾಲಯ. ದೇಶದ ಶಿಕ್ಷಣಕ್ಕೆ ವಿದೇಶಿ ಹಣ ತರಲು ಹೊರಟಿದ್ದಾರೆ. ಇದು ದೇಶ ಪ್ರೇಮವೇ ಎಂದು ಪ್ರಶ್ನಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಪ್ಪು ಅನ್ನು ಎತ್ತಿ ತೋರಿಸಿದರೆ ಅಂತಹವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗುತ್ತಿದೆ. ಪೊಲೀಸ್ ಇಲಾಖೆ ರಾಜಕೀಯ ಪಕ್ಷದ ಅಣತಿಯಂತೆ ಕೆಲಸ ಮಾಡಬಾರದು ಎಂದರು.

ಕೇಂದ್ರ ಸರ್ಕಾರ ಕರ್ನಾಟಕವನ್ನು ವೈರಿ ರಾಜ್ಯದಂತೆ ನೋಡುತ್ತಿದೆ. ಪ್ರವಾಹ ಬಂದಾಗ ಪ್ರಧಾನಿ ಭೇಟಿ ನೀಡಲಿಲ್ಲ. ಪರಿಹಾರ ಘೋಷಿಸಲಿಲ್ಲ. ಅಗತ್ಯ ಅನುದಾನ ಕೊಡದೆ ತಾರತಮ್ಯ ಮಾಡಲಾಗಿದೆ. ಸಾವಿರಾರು ಸಂತ್ರಸ್ತರ ಬದುಕು ಬೀದಿಗೆ ಬಿದ್ದರೂ ಕಣ್ಣೀರು ಒರೆಸಲಿಲ್ಲ ಎಂದರು.

ಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್‌ ಮಂಜುನಾಥ್‌, ಕೆಪಿಸಿಸಿ ಸದಸ್ಯ ಎಚ್‌.ಕೆ.ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT