ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಳೇಬೀಡು: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ನೆರವಿಗೆ ಕಿರುಹೊತ್ತಗೆ

ಎಚ್.ಎಸ್. ಅನಿಲ್‌ಕುಮಾರ್
Published 6 ಮಾರ್ಚ್ 2024, 5:20 IST
Last Updated 6 ಮಾರ್ಚ್ 2024, 5:20 IST
ಅಕ್ಷರ ಗಾತ್ರ

ಹಳೇಬೀಡು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಬರಬೇಕು. ಪರೀಕ್ಷೆ ಎದುರಿಸಲು ಸಜ್ಜಾಗುತ್ತಿರುವ ಎಲ್ಲ ಮಕ್ಕಳು ಉತ್ತೀರ್ಣರಾಗಬೇಕು ಎಂಬ ಉದ್ದೇಶದಿಂದ ಪ್ರಶ್ನೆಪತ್ರಿಕೆಯಲ್ಲಿ ಬರಬಹುದಾದ 40 ಅಂಕದ ಪ್ರಶ್ನೋತ್ತರದ ‘ಟಾರ್ಗೆಟ್– 40’ ಪುಸ್ತಕವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಹೊರತಂದಿದ್ದಾರೆ.

ಪುಸ್ತಕಗಳನ್ನು ಅಚ್ಚು ಹಾಕಿಸಲು ₹38 ಸಾವಿರ ವೆಚ್ಚವಾಗಿದೆ. ಧುಮ್ಮೇನಹಳ್ಳಿಯ ಕೃತಿಕಾ ಪುಟ್ಟಸ್ವಾಮಿ ₹15 ಸಾವಿರ ಸಹಾಯ ಮಾಡಿದ್ದಾರೆ. ಉಳಿದ ಹಣವನ್ನು ವಿವಿಧ ದಾನಿಗಳಿಂದ ಸಂಗ್ರಹಿಸಲಾಗಿದೆ. ಮಧ್ಯಮ ಅವಧಿ ಪರೀಕ್ಷೆ ಹಾಗೂ ಅಂತಿಮ ಪರೀಕ್ಷೆಗೆ ಎರಡು ಹಂತದಲ್ಲಿ ಪುಸ್ತಕ ವಿತರಿಸಲಾಗಿದೆ. ತಾಲ್ಲೂಕಿನ ಎಲ್ಲ ಶಾಲೆಯ ವಿದ್ಯಾರ್ಥಿಗಳಿಗೂ ಉಚಿತವಾಗಿ ಪುಸ್ತಕ ಕೊಡಲಾಗಿದೆ.

‘6 ವಿಷಯಗಳನ್ನು ಒಳಗೊಂಡ ಕಿರುಹೊತ್ತಗೆಯನ್ನು ದಾನಿಗಳ ನೆರವಿನಿಂದ ಹೊರತರಲಾಗಿದೆ. ಪುಸ್ತಕ ಪಾಸಿಂಗ್ ಪ್ಯಾಕೇಜ್ ಆಗಿದೆ. ಪುಸ್ತಕದಲ್ಲಿರುವ ಪ್ರಶ್ನೋತ್ತರಗಳನ್ನು ಪ್ರತಿ ವಿದ್ಯಾರ್ಥಿಗೂ ಮನವರಿಕೆ ಮಾಡಲಾಗಿದೆ. ಪುಸ್ತಕ ಅರ್ಥ ಮಾಡಿಕೊಂಡು ಬರೆಯಲು ಬರುವಂತೆ ಓದಿದರೆ 40 ಅಂಕ ಪಡೆಯಬಹುದು’ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್.

‘ಜೊತೆಯಲ್ಲಿ ಪಠ್ಯಪುಸ್ತಕ, ನೋಟ್ಸ್ ಓದಬೇಕು. ಶಿಕ್ಷಕರು ಹೇಳಿದ ಪಾಠವನ್ನು ಅಂದಿನ ದಿನವೇ ಓದಿಕೊಂಡು ಆಗಾಗ್ಗೆ ಮನವರಿಕೆ ಮಾಡಿಕೊಳ್ಳಬೇಕು. ಅಂತಹ ವಿದ್ಯಾರ್ಥಿ ಶೇ 100ರಷ್ಟು ಅಂಕ ಪಡೆಯಬಹುದು. ಪರೀಕ್ಷೆ ಮುಗಿದ ನಂತರ ಪುಸ್ತಕವನ್ನು ಹಿಂದಕ್ಕೆ ಪಡೆದು ಮುಂದಿನ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು’ ಎಂದು ಅವರು ಹೇಳುತ್ತಾರೆ.

‘ಟಾರ್ಗೆಟ್– 40 ಕಿರುಹೊತ್ತಗೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅಡಿಪಾಯದಂತಿದೆ. ಪುಸ್ತಕ ಓದಿಕೊಂಡು ಹೆಚ್ಚಿನ ಅಧ್ಯಯನಕ್ಕೆ ತೊಡಗಲು ಪುಸ್ತಕ ಮಾರ್ಗದರ್ಶಕವಾಗಿದೆ. ದಸರಾ ರಜೆಯಲ್ಲಿ ಟಾರ್ಗೆಟ್ ಪುಸ್ತಕದ ಮಾಹಿತಿಯನ್ನು ಹೊಂ ವರ್ಕ್ ಮಾಡಿಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಪುಸ್ತಕ ರೂಪಿಸಲು ಹಗಲು– ರಾತ್ರಿ ಎನ್ನದೆ ಶ್ರಮಿಸಿದ್ದಾರೆ. ಮಕ್ಕಳು ಸದುಪಯೋಗ ಮಾಡಿಕೊಂಡರೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ’ ಎಂದು ಹಳೇಬೀಡು ಕೆಪಿಎಸ್ ಶಾಲೆ ಉಪ ಪ್ರಾಶುಪಾಲ ಮುಳ್ಳಯ್ಯ ಹೇಳಿದರು.

ಪುಸ್ತಕದಲ್ಲಿ ಏನಿದೆ?: ಬೇಲೂರು ತಾಲ್ಲೂಕಿನ ಎಲ್ಲ ಶಾಲೆಯಲ್ಲಿಯೂ ಶೇ 100ರಷ್ಟು ಫಲಿತಾಂಶ ಬರಬೇಕು ಎಂದು ಟಾರ್ಗೆಟ್ ಪುಸ್ತಕ ರೂಪಿಸಿದ್ದಾರೆ. ಗಣಿತದ ಸೂತ್ರಗಳು, ವಿಜ್ಞಾನದ ಕಿರು ಚಿತ್ರಗಳು, ಕನ್ನಡ, ಇಂಗ್ಲಿಷ್ ವ್ಯಾಕರಣ ಹಾಗೂ ಪ್ರಶ್ನೋತ್ತರಗಳನ್ನು ಕಿರುಹೊತ್ತಗೆಯಲ್ಲಿ ಅಳವಡಿಸಲಾಗಿದೆ.

ಸರಳವಾಗಿ ಕಲಿಯಲು ಅವಕಾಶವಿದೆ. ಟಾರ್ಗೆಟ್ ಪುಸ್ತಕದಲ್ಲಿ ಕಲಿತರೆ ಹೆಚ್ಚಿನ ಕಲಿಕೆಗೆ ಆಸಕ್ತಿ ಬರುತ್ತದೆ. ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಪುಸ್ತಕ ತಯಾರಿಕೆಗೆ ಬಳಸಿಕೊಂಡಿದ್ದಾರೆ ಎನ್ನುತ್ತಾರೆ ಗಣಿತ ಶಿಕ್ಷಕ ಮನೋಜ್.

ಯಾರು ಏನಂದರು?

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತಮ ಫಲಿತಾಂಶಕ್ಕೆ ಅನುಸರಿಸುತ್ತಿರುವ ಮಾರ್ಗಗಳಲ್ಲಿ ಟಾರ್ಗೆಟ್– 40 ಪುಸ್ತಕ ಸಹ ಒಂದಾಗಿದೆ – ಕೆ.ಪಿ.ನಾರಾಯಣ್ ಕ್ಷೇತ್ರ ಶಿಕ್ಷಣಾಧಿಕಾರಿ

ಎಲ್ಲ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಿರ್ಣರಾಗಬೇಕು ಎಂಬುದು ಕ್ಷೇತ್ರ ಶಿಕ್ಷಣಾಧಿಕಾರಿ ಮಹದಾಸೆ – ಬಿ.ಎಂ.ನಾಗರಾಜು ಹೆಬ್ಬಾಳು ಸರ್ಕಾರಿ ಪ್ರೌಢಶಾಲೆ ಶಿಕ್ಷಕ

ಟಾರ್ಗೆಟ್– 40 ಪುಸ್ತಕದಿಂದ ಸರಳ ಕಲಿಕೆಗೆ ಅನುಕೂಲವಾಯಿತು. ಪಠ್ಯಪುಸ್ತಕ ಅಧ್ಯಯನದ ನಡುವೆ ಬದಲಾವಣೆ ದೊರಕಿದಂತಾಯಿತು – ಗಗನ್ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT