ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಬಂದ್‌ಗೆ ನೀರಸ ಪ್ರತಿಕ್ರಿಯೆ

ರಸ್ತೆಗಳಲ್ಲಿ ಬೈಕ್ ರ್‍ಯಾಲಿ, ಬಲವಂತವಾಗಿ ಅಂಗಡಿ ಬಾಗಿಲು ಮುಚ್ಚಿಸಲು ಯತ್ನ
Last Updated 5 ಡಿಸೆಂಬರ್ 2020, 12:53 IST
ಅಕ್ಷರ ಗಾತ್ರ

ಹಾಸನ: ಮರಾಠಾ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ವಿವಿಧ ಕನ್ನಡ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಜನ ಜೀವನ ಎಂದಿನಂತೆ ಕಂಡು ಬಂತು. ಬಸ್‌, ಆಟೊ ಸಂಚಾರವೂ ಇತ್ತು. ಹಲವು ಕಡೆ ಅಂಗಡಿ, ಸರ್ಕಾರಿ ಕಚೇರಿ, ತರಕಾರಿ ಮಾರುಕಟ್ಟೆ, ರಸ್ತೆಬದಿ ಅಂಗಡಿಗಳನ್ನು ಬಲವಂತವಾಗಿ ಬಂದ್‌ ಮಾಡಿಸುವ ಯತ್ನ ನಡೆಯಿತು. ಪ್ರತಿಭಟನಾಕಾರರು ಬಂದಾಗ ಅಂಗಡಿ ಬಾಗಿಲು ಹಾಕಿ, ಅವರು ತೆರಳಿದ ಬಳಿಕ ವ್ಯಾಪಾರಿಗಳು ಮತ್ತೆ ವ್ಯಾಪಾರ ನಡೆಸುತ್ತಿದ್ದರು. ಅಜಾದ್‌ ರಸ್ತೆಯಲ್ಲಿ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ್‌ ಮಾಡಿ ಬೆಂಬಲ ಸೂಚಿಸಿದ್ದರು.

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಕರ್ನಾಟಕ ಸ್ವಾಭಿಮಾನಿ ಬಣ, ಕನ್ನಡಪರ ಒಕ್ಕೂಟಗಳ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ನಗರ ಪ್ರಮುಖ ರಸ್ತೆಗಳಲ್ಲಿ ಬೈಕ್‌ ರ‍್ಯಾಲಿ ನಡೆಸಿದರು.

ಸಾರಿಗೆ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಆಗಿತ್ತು. ಇದರಿಂದ ಗ್ರಾಮೀಣ ಪ್ರದೇಶಗಳಿಗೆ ಹೋಗುವವರು ತೊಂದರೆ
ಅನುಭವಿಸಬೇಕಾಯಿತು. ಮಧ್ಯಾಹ್ನ ಬಳಿಕ ಪೂರ್ಣ ಪ್ರಮಾಣದಲ್ಲಿ ನಗರ ಮತ್ತು ಗ್ರಾಮೀಣ ಸಾರಿಗೆ ಆರಂಭಗೊಂಡಿತು.

ಕನ್ನಡ ಬಾವುಟ ಹಿಡಿದು ಬಂದ ಪ್ರತಿಭಟನಾಕಾರರು ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಇಲಾಖೆ, ಬ್ಯಾಂಕ್‍ಗಳಿಗೆ
ಮುತ್ತಿಗೆ ಹಾಕಿದರು. ಅಂಗಡಿ, ಹೋಟೆಲ್ ಮಾಲೀಕರಿಗೆ ಕೈ ಮುಗಿದು ಬಂದ್‍ಗೆ ಸಹಕರಿಸುವಂತೆ ಕೋರಿದರು.

ನಗರದ ಹೇಮಾವತಿ ಪ್ರತಿಮೆ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು ಮರಾಠ ಅಭಿವೃದ್ಧಿ ನಿಗಮವನ್ನು
ರದ್ದುಗೊಳಿಸಬೇಕು. ಹೋರಾಟಗಾರರನ್ನು ವಸೂಲಿಗಾರರು ಎಂದು ಕರೆದಿರುವ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಕನ್ನಡಪರ ಹೋರಾಟ ಒಕ್ಕೂಟಗಳ ಜಿಲ್ಲಾಧ್ಯಕ್ಷ ಬಾಳ್ಳು ಗೋಪಾಲ್, ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್. ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್, ರಾಜಕುಮಾರ್ ಅಭಿಮಾನಿಗಳ ಸಂಘದ ಪ್ರಶಾಂತ್ ನಾಗರಾಜ್, ಜಯಕರ್ನಾಟಕ ಸಂಘಟನೆ ಕಾರ್ಯಾಧ್ಯಕ್ಷ ಸಂಗಂ, ಚೌಡವಳ್ಳಿ ಜಗದೀಶ್, ಹರೀಶ್ ಬಾಬು, ಡಿ. ಶಂಕರಗೌಡ, ಸೀತರಾಮು, ಪ್ರೀತಂ, ದಿನೇಶ್, ರೈತ ಸಂಘದ ಅಧ್ಯಕ್ಷ ಬಾಬು, ರಾಘವೇಂದ್ರ, ಕಾಂಗ್ರೆಸ್ ಮುಖಂಡ ಎಚ್.ಕೆ. ಮಹೇಶ್, ಪ್ರವೀಣ್ ಹಾಗೂ ಇತರರು
ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT