ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತಗೆರೆ ಗ್ರಾಮದಲ್ಲೇ ವಸತಿ ಶಾಲೆ ನಿರ್ಮಿಸಿ

ಮರಳು ದಂಧೆಗೆ ಅಡ್ಡಿಯಾಗುವ ಕಾರಣಕ್ಕೆ ಸುಳ್ಳು ಹೇಳಿಕೆ; ಆರೋಪ
Last Updated 16 ಸೆಪ್ಟೆಂಬರ್ 2021, 13:44 IST
ಅಕ್ಷರ ಗಾತ್ರ

ಹಾಸನ: ‘ಮರಳು ದಂಧೆ ನಡೆಸಲು ಅಡ್ಡಿ ಆಗಬಹುದು ಎಂಬ ಕಾರಣಕ್ಕೆ ಆಲೂರು ತಾಲ್ಲೂಕು
ಕೆ.ಹೊಸಕೋಟೆ ಹೋಬಳಿ ಕಿತ್ತಗೆರೆ ಗ್ರಾಮದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಬಾಲಕಿಯರ ವಸತಿ ಶಾಲೆ
ನಿರ್ಮಾಣಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಉಪಾಧ್ಯಕ್ಷ (ಭೀಮವಾದ) ಪ್ರೀತಮ್‌
ಅಡ್ಡಿಪಡಿಸುತ್ತಿದ್ದಾರೆ’ ಎಂದು ಮಲ್ಲಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶರತ್‌ ಕುಮಾರ್‌ ಆರೋಪಿಸಿದರು.

‘ಕಿತ್ತಗೆರೆ ಗ್ರಾಮದ ಸರ್ವೇ ನಂ. 32 ರಲ್ಲಿ 3.10 ಎಕರೆ ಹಾಗೂ ಸರ್ವೇ ನಂ.34 ರಲ್ಲಿ 1.20
ಎಕರೆ ಸರ್ಕಾರಿ ಗೋಮಾಳದಲ್ಲಿ ಅಧಿಕಾರಿಗಳು ವಸತಿ ಶಾಲೆಗೆ ಜಾಗ ಕಾಯ್ದಿರಿಸಿ ಶಿಫಾರಸು
ಮಾಡಿದ್ದಾರೆ. ಈ ಜಾಗದಲ್ಲಿ ಪ್ರೀತಮ್‌ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವ ದಾರಿಯಾಗಿದ್ದು, ಇಲ್ಲಿ
ಶಾಲೆ ನಿರ್ಮಾಣವಾದರೆ ತೊಂದರೆ ಉಂಟಾಗಲಿದೆ ಎಂದು ಈ ರೀತಿ ಹೇಳಿಕೆ ನೀಡಿದ್ದಾರೆ’ ಎಂದು
ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಈಗ ಗುರುತಿಸಿರುವ ಸ್ಥಳದ ಸುತ್ತಮುತ್ತ 40ಕ್ಕೂ ಹೆಚ್ಚು ಮನೆಗಳಲ್ಲಿ ಎಂಟು ದಶಕಗಳಿಂದ ಜನರು
ವಾಸವಿದ್ದಾರೆ. ಕಾಡಾನೆಗಳು ಸಂಚರಿಸುವ ಜಾಗ ಅಲ್ಲ. ಕಾಡಾನೆ ಸಮಸ್ಯೆ ತಾಲ್ಲೂಕಿನ ಎಲ್ಲಾ
ಭಾಗದಲ್ಲಿಯೂ ಇದೆ. ಹೇಮಾವತಿ ನದಿಗೂ ಶಾಲೆ ನಿರ್ಮಿಸಲು ಗುರುತಿಸಿರುವ ಸ್ಥಳಕ್ಕೂ ಅಂದಾಜು 2
ಕಿ.ಮೀ. ಅಂತರವಿದ್ದು, ಶೀತ ಪ್ರದೇಶ ಅಲ್ಲ’ ಎಂದು ಸ್ಪಷ್ಟಪಡಿಸಿದರು.

‘2017-18ನೇ ಸಾಲಿನಲ್ಲೇ ಹೋಬಳಿಗೆ ಶಾಲೆ ಮಂಜೂರಾಗಿದ್ದು, ಸ್ವಂತ ಕಟ್ಟಡ ಇಲ್ಲದ ಕಾರಣ
ಆಲೂರು ಪಟ್ಟಣದ ಬಸವೇಶ್ವರ ವಿದ್ಯಾಸಂಸ್ಥೆಯ ಕಟ್ಟಡದಲ್ಲಿ ಮಾಸಿಕ ₹1.20 ಲಕ್ಷ ಬಾಡಿಗೆ ನೀಡಿ
ನಡೆಸಲಾಗುತ್ತಿದೆ. ಇಷ್ಟು ವರ್ಷಗಳಿಂದ ಶಾಲೆಯ ಬಗ್ಗೆ ಧ್ವನಿ ಎತ್ತಿಲ್ಲ. ಶಾಲೆ ಬೇಡ ಎಂದು ಇಬ್ಬರು
ವ್ಯಕ್ತಿಗಳು ಮಾತ್ರ ಹೇಳಿಕೆ ನೀಡಿದ್ದು, ಆತನೂ ನಮ್ಮ ಗ್ರಾಮಕ್ಕೆ ಸೇರಿದವನಲ್ಲ’ ಎಂದು ತಿಳಿಸಿದರು.

ಕಾಡ್ಲೂರು ಮೋಹನ್ ಮಾತನಾಡಿ, ’ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿತ್ತಗೆರೆಯಲ್ಲಿ ಬಾಲಕಿಯರ ವಸತಿ ಶಾಲೆ ನಿರ್ಮಿಸಲು ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಸರ್ವಾನುಮತದ ನಿರ್ಣಯ ಕೈಗೊಂಡಿದ್ದಾರೆ. ಈ ಭಾಗದಲ್ಲಿ ಕೂಲಿ ಕಾರ್ಮಿಕರು, ಬಡವರು ಹೆಚ್ಚು ವಾಸವಿದ್ದು, ವಿದ್ಯಾಭ್ಯಾಸಕ್ಕೆ ಬೇರೆ ತಾಲ್ಲೂಕು ಮತ್ತು ಜಿಲ್ಲೆಗೆ ಹೋಗಬೇಕಾಗಿದೆ. ಇಲ್ಲಿಯೇ ವಸತಿ ಶಾಲೆ ನಿರ್ಮಿಸುವುದರಿಂದ ತುಂಬಾ ಅನುಕೂಲವಾಗಲಿದೆ’ ಎಂದರು.

ರೈತ ಸಂಘದ ಮುಖಂಡ ಲೋಕೇಶ್‌ ಮಾತನಾಡಿ,₹22 ಕೋಟಿ ಮೊತ್ತದ ಡಾ.ಬಿ.ಆರ್‌. ಅಂಬೇಡ್ಕರ್‌ ಬಾಲಕಿಯರ ವಸತಿ ಶಾಲೆ ಮಂಜೂರಾಗಿದೆ. 6 ರಿಂದ 10ನೇ ತರಗತಿ ವರೆಗಿನ 250 ವಿದ್ಯಾರ್ಥಿಗಳಿಗೆ ಸೌಲಭ್ಯ ಸಿಗಲಿದೆ. ವಸತಿ ಶಾಲೆ ಆಗಿರುವುದರಿಂದ ವಿದ್ಯಾರ್ಥಿಗಳು ನಿತ್ಯ ಓಡಾಡುವ ಅಗತ್ಯವಿರುವುದಿಲ್ಲ. ಶಾಲೆಯ ಸುತ್ತಲೂ 15 ಅಡಿ ಎತ್ತರದ ಕಾಂಪೌಂಡ್‌ ನಿರ್ಮಾಣವಾಗಲಿದೆ. ಜತೆಗೆ ಸೋಲಾರ‍್ ಬೇಲಿ ಹಾಗೂ ಎಲ್‌ಇಡಿ ಬಲ್ಬ್‌ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಮಾಜಿ ಉಪಾಧ್ಯಕ್ಷ ವಿರೂಪಾಕ್ಷ, ಚಂದ್ರಶೇಖರ್‌, ಪುನಿತ್‌ ನಾಗವಾರ ಇದ್ದರು.

ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT