ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪರೇಟರ್‌ಗಳು–ಟ್ರಾಯ್‌ ನಡುವೆ ಹಗ್ಗ–ಜಗ್ಗಾಟ: ಕೇಬಲ್‌ ಟಿವಿ ಸಂಪರ್ಕ ಕಡಿತ

Last Updated 16 ಮಾರ್ಚ್ 2019, 11:23 IST
ಅಕ್ಷರ ಗಾತ್ರ

ಹಾಸನ: ಟ್ರಾಯ್‌ನ ಹೊಸ ದರ ನೀತಿ ಅಳವಡಿಸಿಕೊಳ್ಳದ ಕಾರಣ ಜಿಲ್ಲೆಯಲ್ಲಿ ಹಲವು ಕಡೆ ಕೇಬಲ್‌ ಟಿವಿ ಸಂಪರ್ಕಗಳು ಕಡಿತಗೊಳ್ಳಲಾರಂಭಿಸಿದ್ದು, ಗ್ರಾಹಕರು ಮನರಂಜನೆಯಿಂದ ಹೊರಗುಳಿಯುವಂತಾಗಿದೆ.

ಕೇಬಲ್‌ ಆಪರೇಟರ್‌ಗಳು ಹಾಗೂ ಟ್ರಾಯ್‌ ನಡುವಿನ ಹಗ್ಗ ಜಗ್ಗಾಟದ ಗೊಂದಲ ಇನ್ನು ಬಗೆಹರಿದಿಲ್ಲ. ಹೊಸ ದರ ನೀತಿ ಅನ್ವಯ ಗ್ರಾಹಕರು ಚಾನಲ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಮಾ.31 ರವರೆಗೆ ಗಡುವು ನೀಡಲಾಗಿದೆ. ಆದರೆ ಈವರೆಗೂ ಬಹುತೇಕ ಗ್ರಾಹಕರಿಗೆ ಹೊಸ ದರ ಪಟ್ಟಿಯ ಮಾಹಿತಿಯೇ ಸಿಕ್ಕಿಲ್ಲ.

ಟ್ರಾಯ್‌ ನೀತಿಯನ್ನು ನಿಗದಿತ ಅವಧಿಯೊಳಗೆ ಅಳವಡಿಸಲು ಆಗುವುದಿಲ್ಲ ಎಂಬುದನ್ನು ಅರಿತ ಹ್ಯಾಥ್‌ವೇ ನಂತಹ ಮಲ್ಟಿ ಸಿಸ್ಟಂ ಆಪರೇಟರ್‌ಗಳು ಸೆಟ್‌ಟಾಪ್‌ ಬಾಕ್ಸ್‌ಗಳ ಸಂಪರ್ಕ ಕಡಿತಗೊಳಿಸಲು ಆರಂಭಿಸಿದ್ದಾರೆ. ಚಾನಲ್‌ಗಳ ಚಂದಾದಾರರಾಗಲು ಕೇಬಲ್‌ ಆಪರೇಟರ್‌ಗಳನ್ನು ಸಂಪರ್ಕಿಸಿ ಎನ್ನುವ ಸೂಚನೆ ಟಿವಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದೆ.

ಫ್ರಿ ಟು ಏರ್‌ ಚಾನಲ್‌ಗಳನ್ನು ಹೊರತು ಪಡಿಸಿ ಉಳಿದ ಕನ್ನಡ ಚಾನಲ್‌ಗಳನ್ನು ಆಯ್ಕೆ ಮಾಡಿಕೊಂಡರೆ ಮಾಸಿಕ ₹ 350 ಎನ್ನುವುದೇ ಕನಿಷ್ಠ ಮಾಸಿಕ ಪ್ಯಾಕೇಜ್‌ ಆಗಿರುವುದು ಗ್ರಾಹಕರಿಗೆ ಅಚ್ಚರಿ ಮೂಡಿಸಿದೆ.

‘ಕನ್ನಡ ಚಾನಲ್‌ಗಳನ್ನೂ ಹೊಂದಿರುವ ಕೆಲವು ಮನರಂಜನಾ ಸಂಸ್ಥೆಗಳು ಅವರ ಎಲ್ಲ ಚಾನಲ್‌ಗಳನ್ನು ಒಂದೇ ಪ್ಯಾಕೇಜ್‌ ಅಡಿ ಸೇರಿಸಿದ್ದು, ಗ್ರಾಹಕರು ಅನಗತ್ಯವಾದರೂ ಅವುಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತಿದೆ. ಐದು ದಿನದಿಂದ ಮನೆಯಲ್ಲಿ ಟಿವಿ ವೀಕ್ಷಿಸಲು ಸಾಧ್ಯವಾಗಿಲ್ಲ. ಅನಿವಾರ್ಯವಾಗಿ ಅವರ ದರಪಟ್ಟಿ ರೀಚಾರ್ಜ್‌ ಮಾಡಲು ಹೇಳಿದ್ದೇನೆ’ ಎಂದು ಚನ್ನಪಟ್ಟಣ ಬಡಾವಣೆ ನಿವಾಸಿ ಮಂಜು ತಿಳಿಸಿದರು.

‘ಮಲ್ಟಿಸಿಸ್ಟಂ ಆಪರೇಟರ್‌ಗಳು ಸಂಪರ್ಕ ಕಡಿತಗೊಳಿಸಿ ನಾಲ್ಕು ದಿನವಾಯಿತು. ಹೊಸ ನೀತಿ ಅಳವಡಿಕೆಗೆ ಮಾ. 31 ಕಡೆ ದಿನವಾಗಿರುವುದರಿಂದ ಹೀಗೆ ಮಾಡುತ್ತಿದ್ದಾರೆ. ಹಾಸನದಲ್ಲಿ ಶೇಕಡಾ 40 ಸೆಟ್‌ಟಾಪ್‌ ಬಾಕ್ಸ್‌ಗಳಿಗೆ ಮರು ಸಂಪರ್ಕ ದೊರೆತಿದೆ. ಉಳಿದವರು ಚಾನಲ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದು ಹಾಸನಾಂಬ ಕೇಬಲ್‌ ಆಪರೇಟರ್ಸ್‌ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಂದ್ರಶೇಖರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT