ಶನಿವಾರ, ಜೂನ್ 19, 2021
22 °C

ಹೆಚ್ಚು ದರ ಪಡೆದರೆ ಖಾಸಗಿ ಆಸ್ಪತ್ರೆ ಪರವಾನಗಿ ರದ್ದು‌: ಸಚಿವ ಸುಧಾಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಕೋವಿಡ್‌ ರೋಗಿಗಳಿಂದ ಹೆಚ್ಚು ಶುಲ್ಕ ಪಡೆದರೆ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ (ಕೆಪಿಎಂಇ) ಅಡಿ ಆಸ್ಪತ್ರೆ ಪರವಾನಗಿ ರದ್ದುಗೊಳಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಎಚ್ಚರಿಕೆ ನೀಡಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಹೆಚ್ಚು ಹಣ ತೆಗೆದುಕೊಳ್ಳುತ್ತಿರುವ ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಜಿಲ್ಲಾ ಆರೋಗ್ಯಾಧಿಕಾರಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಬೇಕು. ಎಷ್ಟು ಆಸ್ಪತ್ರೆಗಳಿಗೆ ಭೇಟಿ ನೀಡಲಾಗಿದೆ ಎಂಬ ಮಾಹಿತಿಯನ್ನು ನಿತ್ಯ ನೀಡಬೇಕು. ಕೋವಿಡ್ ರೋಗಿಗಳಿಗೆ ನೀಡುವ ರೆಮ್‌ಡಿಸಿವಿರ್ ಚುಚ್ಚುಮದ್ದು ಸಹ ಕಾಳಸಂತೆಯಲ್ಲಿ ಮಾರಾಟವ ಮಾಡಲಾಗುತ್ತಿದೆ ಎಂಬ ಆರೋಪ ಬಂದಿದೆ. ಸಹಾಯಕ ಔಷಧ ನಿಯಂತ್ರಣಾಧಿಕಾರಿ ಸಹ ಮೆಡಿಕಲ್ ಸ್ಟೋರ್‌ ಗಳ ಮೇಲೆ ದಾಳಿ ನಡೆಸಿ, ಮಾರಾಟ ಮಾಡುವವರ ಬಗ್ಗೆ ಪೊಲೀಸ್‌ ವರಿಷ್ಠಾಧಿಕಾರಿಗೆ ಮಾಹಿತಿ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಸಕ್ರಿಯ ಪ್ರಕರಣಗಳು ಹೆಚ್ಚು ಇರುವುದರಿಂದ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ವಾರ್‌ ರೂಂ ತೆರೆಯಬೇಕು.
ಅಂತಿಮ ವರ್ಷದ ಎಂಬಿಬಿಎಸ್ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ವಾರ್‌ ರೂಂಗೆ ನಿಯೋಜಿಸಬೇಕು.
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಿಮ್ಸ್ ಆಸ್ಪತ್ರೆ ಕೋವಿಡ್‌ ವಾರ್ಡ್‌, ಐಸಿಯುನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಜಿಲ್ಲಾಧಿಕಾರಿ ನಿತ್ಯ ಅರ್ಧ ಗಂಟೆ ಹಿಮ್ಸ್‌ ಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದರು.

ಹಿಮ್ಸ್‌ ಆಸ್ಪತ್ರೆಯಲ್ಲಿ ಈಗಿರುವ 13 ಕೆ.ಎಲ್‌ ಸಾಮರ್ಥ್ಯದ ಆಮ್ಲಜನಕ ಘಟಕದ ಜತೆ ಹೆಚ್ಚುವರಿ 20 ಕೆ.ಎಲ್‌.
ಸಾಮರ್ಥ್ಯದ ಆಮ್ಲಜನಕ ಘಟಕ ಸ್ಥಾಪಿಸಲಾಗುವುದು. ಮೂರು ವಾರಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಇದರಿಂದ
ಆಮ್ಲಜನಕ ಕೊರತೆ ನೀಗಲಿದೆ. ಸಕಲೇಶಪುರ ಮತ್ತು ಚನ್ನರಾಯಪಟ್ಟಣದಲ್ಲೂ ಆಮ್ಲಜನಕ ಘಟಕ ಸ್ಥಾಪಿಸಲಾಗುತ್ತಿದೆ
ಎಂದರು.

750 ತಜ್ಞ ವೈದ್ಯರು ಸೇರಿದಂತೆ 2,500 ವೈದ್ಯರನ್ನು ನೇರ ನೇಮಕ ಮಾಡಿಕೊಂಡಿದ್ದು, ಎರಡು ದಿನದಲ್ಲಿ
ನೇಮಕಾತಿ ಪತ್ರ ನೀಡಲಾಗುವುದು. ವಾರದಲ್ಲಿ ಕೆಲಸಕ್ಕೆ ಅವರನ್ನು ನಿಯೋಜಿಸಲಾಗುವುದು. ಜಿಲ್ಲೆಗೆ ಮಂಗಳವಾರವೇ
50 ವೆಂಟಿಲೇಟರ್‌ಗಳನ್ನು ಪೂರೈಸಲಾಗುವುದು ಎಂದು ವಿವರಿಸಿದರು.

ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಜಿಲ್ಲೆಯಲ್ಲಿ ಕೊರತೆ ಇರುವ 35 ವೈದ್ಯರ ನೇಮಕಕ್ಕೆ ಕ್ರಮ
ಕೈಗೊಳ್ಳಲಾಗುವುದು ಹಾಗೂ ಹಿಮ್ಸ್‌ಗೆ ನೋಡಲ್‌ ಅಧಿಕಾರಿ ನೇಮಿಸಲಾಗುವುದು ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು