ಮಂಗಳವಾರ, ಜೂನ್ 15, 2021
20 °C
ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರ; ಶಾಸಕ ಎಚ್‌.ಡಿ.ರೇವಣ್ಣ ಆರೋಪ

ಸಿಬಿಐ ತನಿಖೆಗೆ ರೇವಣ್ಣ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಸಾರಿಗೆ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿಬರುತ್ತಿದ್ದು, ಕೂಡಲೇ ಸಿಬಿಐ ತನಿಖೆ ನಡೆಸಬೇಕು’ ಎಂದು ಶಾಸಕ ಎಚ್‌.ಡಿ.ರೇವಣ್ಣ ಒತ್ತಾಯಿಸಿದರು.

‘ಶಾಸಕರ ಗನ್‌ಮ್ಯಾನ್‌ ಆಗಿದ್ದ ಮಲ್ಲಿಕಾರ್ಜುನ್‌ ಎಂಬುವವರು ಸಾರಿಗೆ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್‌ ಆಗಿ ವಿಜಯಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಜೊತೆ ನಿವೃತ್ತ ಸಾರಿಗೆ ಅಧಿಕಾರಿಗಳು ಸೇರಿ ವರ್ಗಾವಣೆ ದಂಧೆಯಲ್ಲಿ ನಿರತರಾಗಿದ್ದಾರೆ. ಅಧಿಕಾ ರಿಗಳ ವರ್ಗಾವಣೆಗಾಗಿ ₹ 85 ಕೋಟಿ ಸಂಗ್ರಹಿಸಿದ್ದಾರೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ರಾಜ್ಯದ ಪ್ರಮುಖ ಚೆಕ್‌ಪೋಸ್ಟ್‌ಗಳಾದ ಕಲಬುರ್ಗಿಯ ಅಳಂದ, ವಿಜಯಪುರದ ಝಳಕಿ, ಬೆಳಗಾವಿಯ ಕೂರ್ಗನಹಳ್ಳಿ, ಬೀದರ್‌ನ ಹುಮ್ನಾಬಾದ್, ಬೆಂಗಳೂರಿನ ಅತ್ತಿಬೆಲೆ, ಚಿಕ್ಕಬಳ್ಳಾಪುರದ ಸಂಗ್ಲಿ, ಚಾಮರಾಜನಗರದ ಗುಂಡ್ಲುಪೇಟೆ, ಗೌರಿಬಿದನೂರು ಸೇರಿದಂತೆ 14 ಚೆಕ್‌ ಪೋಸ್ಟ್‌ಗಳಿಂದ ಮಾಸಿಕ ₹ 10 ಕೋಟಿಯಂತೆ ವರ್ಷಕ್ಕೆ ₹ 120 ಕೋಟಿ ಹಣ ವಸೂಲಿ ಮಾಡಲಾಗುತ್ತಿದೆ. ಈ ಹಣ ಎಲ್ಲಿಗೆ ಹೋಗುತ್ತಿದೆ ಎಂದು ತನಿಖೆ ಮಾಡದೆ ಎಸಿಬಿ ಮತ್ತು ಲೋಕಾಯುಕ್ತ ಸಂಸ್ಥೆಗಳು ಕಣ್ಣುಮುಚ್ಚಿ ಕುಳಿತಿವೆ’ ಎಂದು ದೂರಿದರು.

‘ಒಂದು ವರ್ಷದಿಂದ ಯಾವುದೇ ಚೆಕ್‌ಪೋಸ್ಟ್‌ಗಳ ಮೇಲೆ ದಾಳಿ ಮಾಡಿಲ್ಲ. ಈ ಹಿಂದೆ ದಾಳಿ ನಡೆಸಿದಾಗ ಅಕ್ರಮವಾಗಿ ಸಂಗ್ರಹಿಸಿದ್ದ ಹಣ ಸಿಕ್ಕಿದೆ. ಈಗ ದಾಳಿ ನಡೆಸದೆ ಇರುವುದು ಅನುಮಾನಗಳಿಗೆ ಕಾರಣವಾಗಿದೆ. ಸಾರಿಗೆ ಇಲಾಖೆಯೇ ಸರ್ಕಾರವನ್ನು ನಿಯಂತ್ರಿಸುತ್ತಿದೆ. ಕಳೆದ ಚುನಾವಣೆಗಳ ಪ್ರಚಾರದ ವೇಳೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸರ್ಕಾರವನ್ನು ಭ್ರಷ್ಟ ಸರ್ಕಾರ ಎಂದಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈಗ ಏಕೆ ಸುಮ್ಮನಿದ್ದಾರೆ’ ಎಂದು ಪ್ರಶ್ನಿಸಿದರು.

‘ಸಾರಿಗೆ ಇಲಾಖೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಅಧಿಕಾರಿಗಳು ನಿಯೋಜನೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ರಾಜಸ್ವ ನಷ್ಟವಾಗುತ್ತಿದ್ದು, ಇಂಥ ನಿಯೋಜನೆ ಮಾಡಬಾರದು ಎಂದು ಇಲಾಖೆ ಕಾರ್ಯದರ್ಶಿ ಆದೇಶ ಮಾಡಿದ್ದರೂ ಇಲಾಖೆಯ ಆಯುಕ್ತರನ್ನು ಹೆದರಿಸಿ, ಸರ್ಕಾರದ ನೀತಿ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ನಿಯೋಜನೆ ಮಾಡಿ ಸುತ್ತಿದ್ದಾರೆ. ಒಂದು ಚೆಕ್‌ಪೋಸ್ಟ್‌ನಲ್ಲಿ ನಡೆಯುವ ದಾಳಿಯಲ್ಲಿ ಸಿಕ್ಕಿಬೀಳುವ ಅಧಿಕಾರಿಯಿಂದ ಹಣಪಡೆದು ಆತನನ್ನು ಮತ್ತೊಂದು ಚೆಕ್‌ಪೋಸ್ಟ್‌ಗೆ ನಿಯೋಜಿಸಲಾಗುತ್ತಿದೆ’ ಎಂದರು.

‘ದೇಶದ ಹಲವು ರಾಜ್ಯಗಳಲ್ಲಿ ಆರ್‌ಟಿಒ ಚೆಕ್‌ಪೋಸ್ಟ್‌ಗಳನ್ನು ರದ್ದು ಮಾಡಲಾಗಿದೆ. ಇದೇ ರೀತಿ ನಮ್ಮ ರಾಜ್ಯದಲ್ಲೂ ರದ್ದು ಮಾಡಿ ಹಗಲು ದರೋಡೆಗೆ ಕಡಿವಾಣ ಹಾಕಬೇಕು. ಇಲಾಖೆಯಲ್ಲಿನ ಎಲ್ಲ ಅಕ್ರಮಗಳ ತನಿಖೆ ನಡೆಸಿ ಸರ್ಕಾರದ ರಾಜಸ್ವ ಸೋರಿಕೆ ಮತ್ತು ಅಕ್ರಮ ಚಟುವಟಿಕೆ ತಡೆಯಲು ಮುಂದಾಗಬೇಕಿದೆ’ ಎಂದು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.