ಬುಧವಾರ, ಜನವರಿ 19, 2022
26 °C
ಸಿಪಿಎಂ 11ನೇ ಜಿಲ್ಲಾ ಸಮ್ಮೇಳನ

ಜನರ ನೆರವಿಗೆ ನಿಲ್ಲದ ಕೇಂದ್ರ ಸರ್ಕಾರ: ಎಸ್‌.ವರಲಕ್ಷ್ಮೀ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೋವಿಡ್‌ ಸಂಕಷ್ಟದಲ್ಲಿರುವಾಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನರ ನೆರವಿಗೆ ನಿಲ್ಲದೇ ಚುನಾವಣೆಗೆ ಹಣ ನೀಡಿದ ಕಾರ್ಪೋರೆಟ್ ಸ್ನೇಹಿತರ ಪರವಾಗಿ ನಿಂತಿದ್ದರ ಪರಿಣಾಮವಾಗಿ ದೇಶ ಇಂದು ಬಿಕ್ಕಟ್ಟಿಗೆ ಸಿಲುಕಿದೆ ಎಂದು ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯೆ ಎಸ್.ವರಲಕ್ಷ್ಮೀ ಟೀಕಿಸಿದರು.

ಸಿಪಿಎಂ ಹಾಸನ ಜಿಲ್ಲಾ ಸಮಿತಿಯ 11ನೇ ಜಿಲ್ಲಾ ಸಮ್ಮೇಳನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ಭವನದ ಆವರಣದಲ್ಲಿ ಶನಿವಾರ ನಡೆದ ಸಭೆ ಉದ್ಘಾಟಿಸಿ ಮಾತನಾಡಿದರು.

‘ಲಾಕ್‌ಡೌನ್ ವೇಳೆ ಜನರ ಪ್ರಾಥಮಿಕ ಅಗತ್ಯಗಳನ್ನು ಪೂರೈಸಲು ಸರ್ಕಾರ ವಿಫಲವಾಯಿತು. ಮೊದಲ ಅಲೆಯಲ್ಲಿ ವೈಫಲ್ಯ ಅನುಭವಿಸಿದ ಸರ್ಕಾರ, ಎರಡನೇ ಅಲೆ ವೇಳೆಯಲ್ಲೂ ಜನವಿರೋಧಿ ನೀತಿಯನ್ನು ಮುಂದುವರಿಸಿದ ಕಾರಣ
ಅಪಾರ ಪ್ರಾಣ ಹಾನಿ ಉಂಟಾಯಿತು. ಕೊನೆಗೆ ನ್ಯಾಯಾಲಯ ಮಧ್ಯ ಪ್ರವೇಶ ಮಾಡಿದ್ದರಿಂದ ಜನರಿಗೆ ಆಮ್ಲಜನಕ, ಲಸಿಕೆ ಮತ್ತಿತರ ಸೌಲಭ್ಯ ದೊರೆಯುವಂತಾಯಿತು’ ಎಂದು ಹೇಳಿದರು.

ಸಿಪಿಎಂ ರಾಜ್ಯ ಸಮಿತಿ ಸದಸ್ಯ ಉಮೇಶ್ ಮಾತನಾಡಿ, ‘ಕೊರೊನಾ ವೇಳೆ ಸರ್ಕಾರದ ವೈಫಲ್ಯ ಮರೆಮಾಚಲು ಹಿಂದುತ್ವವನ್ನು ಮುನ್ನೆಲೆಗೆ ತಂದು ಜನರಿಗೆ ದ್ರೋಹವೆಸಗಲಾಯಿತು. ಸಂವಿಧಾನ ಬುಡಮೇಲು ಮಾಡಲು ಬಿಜೆಪಿ ಸರ್ಕಾರವೇ ಮುಂದಾಗಿದೆ. ಇದಕ್ಕೆ ಬೃಹತ್ ಜನಾಂದೋಲನವನ್ನು ಕಟ್ಟುವುದೇ ಪರಿಹಾ’ರ ಎಂದು ಹೇಳಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಮಾತನಾಡಿ, ‘ಸರ್ಕಾರದ ನೀತಿಗಳಿಂದ ಕಾಫಿ, ಆಲೂಗೆಡ್ಡೆ ಮತ್ತು ತೆಂಗು ಬೆಳೆಗಾರರ ಕಣ್ಣೀರಿಗೆ ಕಾರಣವಾಗಿವೆ. ಸೂಕ್ತ ಬೆಲೆ ಸಿಗದೆ ಬೆಳೆಗಾರರು ಕಂಗಾಲಾಗಿದ್ದಾರೆ. ಕಾರ್ಮಿಕರಿಗೂ ಪ್ಯಾಕೇಜ್ ನೀಡಬೇಕು’ ಎಂದು ಆಗ್ರಹಿಸಿದರು.

ಸಿಪಿಎಂ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್.ಆರ್.ನವೀನ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಭೆಗೂ ಮುನ್ನ ಸಿಪಿಎಂ.ನ ಸಾವಿರಾರು ಕಾರ್ಯಕರ್ತರು ಹೇಮಾವತಿ ಪ್ರತಿಮೆ ಬಳಿಯಿಂದ ಕನ್ನಡ ಸಾಹಿತ್ಯ ಪರಿಷತ್ ಭವನದವರೆಗೆ ಮೆರವಣಿಗೆ ನಡೆಸಿದರು.

ಸಿಪಿಎಂ ಪಕ್ಷದ ಹಿರಿಯ ಸದಸ್ಯ ವಿ.ಸುಕುಮಾರ್, ಸಿಪಿಎಂ ಸ್ಥಳೀಯ ಸಮಿತಿ ಎಂ.ಜಿ. ಪೃಥ್ವಿ, ಜಿಲ್ಲಾ ಸಮಿತಿ
ಸದಸ್ಯರಾದ ಸೌಮ್ಯಾ, ಅರವಿಂದ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು