ಗುರುವಾರ , ನವೆಂಬರ್ 14, 2019
19 °C
ಗಾರ್ಡನ್‌ ಸ್ವಚ್ಚಗೊಳಿಸಲು ಹೇಳಿದಕ್ಕೆ ಕುಪಿತಗೊಂಡ

ಸೆಸ್ಕ್‌ ಎಇಇ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಸ್ಟೇಷನ್‌ ಪರಿಚಾರಕ

Published:
Updated:

ಹಾಸನ: ಸಂತೆಪೇಟೆಯಲ್ಲಿರುವ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸ್ಟೇಷನ್‌ ಪರಿಚಾರಕ ಎಂ.ಎನ್‌.ಮಂಜುನಾಥ್‌ ಎಂಬಾತ ಸೆಸ್ಕ್‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸ್ವಾತಿ ದೀಕ್ಷಿತ್‌ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.

ಘಟನೆಯಲ್ಲಿ ಸ್ವಾತಿ ದೀಕ್ಷಿತ್ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ತಲೆ, ಮುಖಭಾಗ ಮತ್ತು ಕುತ್ತಿಗೆಗೆ ಪೆಟ್ಟು ತಿಂದಿರುವ ಅವರು ಹಾಸನದ ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ಬೆರಳು ಸಹ ತುಂಡಾಗಿದೆ.

ಮಂಜುನಾಥನ ಹುಚ್ಚಾಟದ ವೇಳೆ ಮಧ್ಯೆ ಪ್ರವೇಶಿಸಿ ಘಟನೆ ತಡೆಯಲು ಬಂದ ಸಹೋದ್ಯೋಗಿ ವೆಂಕಟೇಗೌಡ ಎಂಬುವರಿಗೂ ಪೆಟ್ಟು ಬಿದ್ದಿದೆ. 

ವಿದ್ಯುತ್ ವಿತರಣಾ ಕೇಂದ್ರದ ಗಾರ್ಡನ್‌ ಸ್ವಚ್ಚಗೊಳಿಸುವಂತೆ  ಸ್ವಾತಿ ಅವರು ಸೂಚಿಸಿದ ಕಾರಣಕ್ಕೇ ಮಂಜುನಾಥ್ ಕುಪಿತಗೊಂಡು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ನಗರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿ, ಮಂಜುನಾಥನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಪ್ರತಿಕ್ರಿಯಿಸಿ (+)