ಸೋಮವಾರ, ಸೆಪ್ಟೆಂಬರ್ 20, 2021
21 °C

ಚಿರತೆ ಸಾವಿಗೆ ಗುಂಡೇಟು ಕಾರಣ: ಮರಣೋತ್ತರ ಪರೀಕ್ಷಾ ವರದಿಯಲ್ಲಿ ಮಾಹಿತಿ ಬಹಿರಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ತಾಲ್ಲೂಕಿನ ಶಂಖ ಗ್ರಾಮದಲ್ಲಿ ಗುರುವಾರ ಅನುಮಾನಸ್ಪದವಾಗಿ ಮೃತಪಟ್ಟಿದ್ದ ಚಿರತೆಯನ್ನು ‘ಜೋಡಿ ನಳಿಕೆ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ’ ಎಂಬುದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ದೃಢಪಟ್ಟಿದೆ.

ಗ್ರಾಮದ ಸ್ವಾಮಿಗೌಡ ಅವರ ಜಮೀನಿನಲ್ಲಿ ಎರಡು ವರ್ಷದ ಚಿರತೆಯ ಕಳೇಬರಹ ಪತ್ತೆಯಾಗಿತ್ತು. ಕುತ್ತಿಗೆ, ಕಣ್ಣಿನ ಬಳಿ ಸಣ್ಣ ಪುಟ್ಟ ಗಾಯದ ಗುರುತು ಹಾಗೂ ಮೂಗಿನಿಂದ ರಕ್ತಸ್ರಾವ ಉಂಟಾಗಿದ್ದರಿಂದ ಸಾವಿನ ಬಗ್ಗೆ ಸಂಶಯ ಮೂಡಿತ್ತು.

ಯಾರಾದರೂ ವಿಷ ಹಾಕಿ ಕೊಂದಿರಬಹುದು ಅಥವಾ ಇಲ್ಲವೇ ಕಾಯಿಲೆಯಿಂದ ಮೃತಪಟ್ಟಿರಬಹುದು ಎಂದು ಅನುಮಾನ ವ್ಯಕ್ತವಾಗಿತ್ತು.

‘ಶವ ಪರೀಕ್ಷೆಯಲ್ಲಿ ಗುಂಡು ತಗುಲಿ ಚಿರತೆ ಮೃತಪಟ್ಟಿರುವುದು ಗೊತ್ತಾಗಿದೆ. ಪೊಲೀಸರ ಪ್ರಕಾರ ಗ್ರಾಮದಲ್ಲಿ ಬಂದೂಕು ಪರವಾನಗಿ ಹೊಂದಿರುವವರು ಯಾರು ಇಲ್ಲ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಸುತ್ತಮುತ್ತಲ ಗ್ರಾಮದವರು ಸಹ ಬಂದೂಕನ್ನು ಪೊಲೀಸ್‌ಗೆ ಠಾಣೆಗೆ ಒಪ್ಪಿಸಿದ್ದಾರೆ. ಹಂದಿ ಬೇಟೆಯಾಡುವವರು ಹತ್ಯೆ ಮಾಡಿರಬಹುದು ಅಥವಾ ಬೇರೆ ಕಡೆ ಹತ್ಯೆ ಮಾಡಿ, ಇಲ್ಲಿ ತಂದು ಹಾಕಿರುವ ಸಾಧ್ಯತೆ ಇರಬಹುದು’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್‌ ತಿಳಿಸಿದರು.

‘ಕರಡಿ ಹೊರತು ಪಡಿಸಿ ಚಿರತೆ ಕಾಣಿಸಿಕೊಂಡಿಲ್ಲ ಎಂದು ಗ್ರಾಮಸ್ಥರೇ ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಈ ಭಾಗದಲ್ಲಿ ಗುಂಡು ಹಾರಿಸಿ ಚಿರತೆ ಹತ್ಯೆ ಮಾಡಿರುವ ಪ್ರಕರಣ ವರದಿಯಾಗಿಲ್ಲ. ಪೊಲೀಸ್‌ ಮತ್ತು ಅರಣ್ಯ ಇಲಾಖೆ ಜಂಟಿ ತನಿಖೆ ನಡೆಸಲಿದೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು