ಹಿರೀಸಾವೆ: ಸಕಲೇಶಪುರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರೀಯ ಹೆದ್ದಾರಿ 75ರ ಮಾರ್ಗದಲ್ಲಿ ಶುಕ್ರವಾರ ಸಂಚಾರ ಮಾಡಿದ್ದರಿಂದ ಗೌರಿ, ಗಣೇಶ ಹಬ್ಬಕ್ಕೆ ತೆರಳುತ್ತಿದ್ದ ವಾಹನ ಸವಾರರು, ಸಾರ್ವಜನಿಕರು ಪರದಾಡಬೇಕಾಯಿತು.
ಎತ್ತಿನಹೊಳೆ ನೀರಾವರಿ ಯೋಜನೆಗೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಿಂದ ರಸ್ತೆ ಮೂಲಕ ತೆರಳುತ್ತಿದ್ದರು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಪೊಲೀಸರು ತಡೆದು ರಸ್ತೆ ಪಕ್ಕದ ಸರ್ವಿಸ್ ರಸ್ತೆಗಳಲ್ಲಿ 25-30 ನಿಮಿಷ ನಿಲ್ಲಿಸಿದರು.
ಹಾಸನ ಮಂಡ್ಯ ಗಡಿ ಭಾಗದಲ್ಲಿರುವ ಟೋಲ್ ಬಳಿ ಗಂಟೆಗಟ್ಟಲೇ ಕಾದ ವಾಹನ ಸವಾರರು ಪೊಲೀಸರೊಂದಿಗೆ ಜಗಳ ನಡೆಸಿದರು.
ನಾವು ಹಬ್ಬ ಮಾಡಲು ತೆರಳುತ್ತಿದ್ದೇವೆ. ಈ ರೀತಿ ತೊಂದರೆ ಕೊಡುವುದು ಸರಿಯಲ್ಲ. ಮುಖ್ಯಮಂತ್ರಿಗಳು ಬೇಕಾದರೆ ಹೆಲಿಕಾಪ್ಟರ್ ಮೂಲಕ ಹೋಗಬೇಕಿತ್ತು ಎಂದು ಮಂಗಳೂರು ಕಡೆ ಪ್ರಯಾಣ ಬೆಳೆಸಿದ್ದ ಪ್ರಯಾಣಿಕ ರವಿ ಬೇಸರ ವ್ಯಕ್ತಪಡಿಸಿದರು.