ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಂಡೆ ಕೊಬ್ಬರಿ ಬೆಲೆ ಕುಸಿತ: ಸಂಕಷ್ಟದಲ್ಲಿ ತೆಂಗು ಬೆಳೆಗಾರರು

ಕೊಬ್ಬರಿ ಬೆಲೆ ಇಳಿಕೆ, ಶುರುವಾಗದ ಖರೀದಿ ಕೇಂದ್ರ
Last Updated 16 ಫೆಬ್ರುವರಿ 2023, 4:17 IST
ಅಕ್ಷರ ಗಾತ್ರ

ಹಿರೀಸಾವೆ (ಹಾಸನ ಜಿಲ್ಲೆ): ಉಂಡೆ ಕೊಬ್ಬರಿ ಬೆಲೆ ಕುಸಿತದಿಂದ ತೆಂಗು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಎರಡು ತಿಂಗಳ ಹಿಂದೆ ಉಂಡೆ ಕೊಬ್ಬರಿ ಬೆಲೆ ಕ್ವಿಂಟಲ್‌ಗೆ ₹ 12,500 ಇತ್ತು. ಫೆಬ್ರುವರಿಯಲ್ಲಿ ₹ 10,500ಕ್ಕೆ ಇಳಿದಿದ್ದು, ರೈತರಿಗೆ ₹ 2,000 ನಷ್ಟವಾಗುತ್ತಿದೆ. ಅರಸೀಕೆರೆ ಮತ್ತು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ರೈತರು ಬೆಲೆ ಇಳಿಕೆಯ ಬಗ್ಗೆ ಪ್ರತಿಭಟನೆ ಸಹ ನಡೆಸಿದ್ದರು. ಆದರೂ ಸರ್ಕಾರ ಗಮನಹರಿಸಿಲ್ಲ ಎಂದು ರೈತರು ದೂರುತ್ತಿದ್ದಾರೆ.

ಕೇಂದ್ರ ಸರ್ಕಾರ ಕಳೆದ ತಿಂಗಳು ಕ್ವಿಂಟಲ್‌ ಕೊಬ್ಬರಿಗೆ ಬೆಂಬಲ ಬೆಲೆ ₹ 11,750 ಘೋಷಿಸಿದ್ದು, ‘ನೆಪೆಡ್’ ಮೂಲಕ ಖರೀದಿಸುವುದಾಗಿ ತಿಳಿಸಿತ್ತು. ಆದರೆ ಇದುವರೆಗೆ ಖರೀದಿ ಕೇಂದ್ರ ತೆರೆದಿಲ್ಲ ಎನ್ನುತ್ತಾರೆ ರೈತರು.

ಹಾಸನ ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್ ಮತ್ತು ತುಮಕೂರು ಜಿಲ್ಲೆಯಲ್ಲಿ 1.90 ಲಕ್ಷ ಹೆಕ್ಟೇರ್‌ನಲ್ಲಿ ತೆಂಗು ಬೆಳೆಯುತ್ತಾರೆ. ತಿಪಟೂರು ಮತ್ತು ಅರಸೀಕೆರೆ ಕೊಬ್ಬರಿ ಪ್ರಮಖ ಮಾರುಕಟ್ಟೆಗಳಾಗಿದ್ದು, ಇಲ್ಲಿಯೇ ಬೆಲೆ ನಿಗದಿಯಾಗುತ್ತದೆ.

ಚಿಪ್ಪು, ನಾರಿನ ದರವೂ ಕುಸಿತ:

ತಮಿಳುನಾಡು ಸೇರಿದಂತೆ ರಾಜ್ಯದಲ್ಲಿನ ತೆಂಗು ನಾರು ತಯಾರಿಕಾ ಘಟಕಗಳು ಬಹುತೇಕ ಮುಚ್ಚಿವೆ. ಹೀಗಾಗಿ ₹ 600ರಿಂದ ₹ 700 ಇದ್ದ ಕೊಬ್ಬರಿ ಸಿಪ್ಪೆ ದರ, ಈ ವರ್ಷ ₹ 50ರಿಂದ ₹ 60ಕ್ಕೆ ಇಳಿಕೆಯಾಗಿದೆ. ಕಳೆದ ವರ್ಷ ₹ 1,700 ಇದ್ದ ತೆಂಗಿನ ಚಿಪ್ಪಿನ ದರ ಈಗ ₹ 700ಕ್ಕೆ ಕುಸಿದಿದೆ. ಕೊಬ್ಬರಿ ಬೆಲೆ ಇಳಿಕೆಯಿಂದ ಹಾಸನ ಹಾಗೂ ತುಮಕೂರು ಜಿಲ್ಲೆಗಳ ತೆಂಗು ಬೆಳೆಗಾರರಿಗೆ ಹೆಚ್ಚು ನಷ್ಟವಾಗುತ್ತಿದೆ.

‘ಕಳೆದ ವರ್ಷ ಈ ಭಾಗದಲ್ಲಿ ಉತ್ತಮ ಮಳೆಯಾಗಿ, ತೆಂಗಿನ ತೋಟದಲ್ಲಿ ತೇವಾಂಶ ಹೆಚ್ಚಾಗಿದೆ. ಇದರಿಂದ ತೆಂಗಿನ ಮರದಲ್ಲಿ ಕಪ್ಪು ತಲೆ ಹುಳು, ರಸ ಸೋರುವಿಕೆ, ತೆಂಗಿನ ಹಳಿ ಉದುರುವುದು ಸೇರಿದಂತೆ ಹಲವು ರೋಗಗಳು ಕಾಣಿಸಿಕೊಂಡಿವೆ. ಮುಂದಿನ ದಿನಗಳಲ್ಲಿ ಫಸಲು ಕಡಿಮೆಯಾಗುತ್ತದೆ’ ಎನ್ನುತ್ತಾರೆ ರೈತ ಮಹೇಶ್.

ಕಳ್ಳರ ಕಾಟ:

ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಕಳ್ಳರಿಂದ ತೆಂಗಿನ ಕಾಯಿ ರಕ್ಷಣೆ ಮಾಡುವುದು ದೊಡ್ಡ ಕೆಲಸವಾಗಿದೆ. ಸಿಪ್ಪೆ ಸುಲಿದ ಮತ್ತು ಉಂಡೆ ಕೊಬ್ಬರಿಗಳ ಕಳ್ಳತನ ಹಳ್ಳಿಗಳಲ್ಲಿ ಹೆಚ್ಚಾಗಿವೆ. ಎರಡು ತಿಂಗಳ ಹಿಂದೆ ಕಬ್ಬಳಿ, ಚನ್ನಹಳ್ಳಿ, ಹಿರೀಸಾವೆ, ಜಿನ್ನೇನಹಳ್ಳಿಗಳಲ್ಲಿ ಹಲವಾರು ಕೊಬ್ಬರಿ ಕಳ್ಳತನ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಬಾಯಿ ಬಿಡದ ಸಂಸದರು:

‘ರೈತರ ಪರ ಎನ್ನುವ ಜಿಲ್ಲೆಯ ಸಂಸದ ಪ್ರಜ್ವಲ್ ರೇವಣ್ಣ ಇದುವರೆಗೆ ಸಂಸತ್ತಿನಲ್ಲಿ ಕೊಬ್ಬರಿ ಬೆಲೆ ಇಳಿಕೆಯ ಬಗ್ಗೆ ಮಾತನಾಡಿ ಸರ್ಕಾರದ ಗಮನಸೆಳೆದಿಲ್ಲ. ತೆಂಗು ಬೆಳೆಗಾರರ ಕಷ್ಟಕ್ಕೂ ಸ್ಪಂದಿಸುತ್ತಿಲ್ಲ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ರಘು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT