ಹಾಸನ: ‘ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಆಸ್ತಿ ವಿವರ ಬಚ್ಚಿಟ್ಟು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿರುವ
ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿ, ವಾರದಲ್ಲಿ ವರದಿ
ನೀಡುವಂತೆ ರಾಜ್ಯ ಚುನಾವಣಾ ಆಯೋಗವು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಆರ್.ಗಿರೀಶ್‌ಗೆ ಪತ್ರ
ಬರೆದಿದೆ’ ಎಂದು ಬಿಜೆಪಿ ಮುಖಂಡ ಎ.ಮಂಜು ಹೇಳಿದರು.
‘ಪ್ರಜ್ವಲ್ ಪ್ರಮಾಣ ಪತ್ರದಲ್ಲಿ ಸಾಕಷ್ಟು ವ್ಯವಹಾರ, ಆಸ್ತಿಯ ವಿವರವನ್ನು ಮರೆ ಮಾಚಿ, ತಪ್ಪು ಮಾಹಿತಿಯನ್ನು ನೀಡಿದ್ದರು. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಭೇಟಿ ನೀಡಿ, ದೂರು ಸಲ್ಲಿಸಿದ್ದೆ. ದಾಖಲಾತಿಯಲ್ಲಿ ನೀಡಿರುವ ಬ್ಯಾಂಕ್‌ನ ಹಣದ ಮಾಹಿತಿಯಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಚುನಾವಣಾ ಆಯೋಗದ ನಿಯಮದ ಪ್ರಕಾರ ಐದು ವರ್ಷಗಳ ಆದಾಯ ತೆರಿಗೆ ಘೋಷಣೆ ವಿವರ ದಾಖಲಿಸುವುದು ಕಡ್ಡಾಯ. ಪ್ರಜ್ವಲ್‌ಗೆ 2018ರಿಂದ ಆದಾಯವಿದ್ದರೂ 2018–19ನೇ ಸಾಲಿನ ಆದಾಯ ತೆರಿಗೆ ವಿವರವನ್ನಷ್ಟೇ ನೀಡಿದ್ದಾರೆ. ಆ ವರ್ಷದಲ್ಲಿ ಕೇವಲ ₹ 16.59 ಲಕ್ಷ ಆದಾಯ ಪಡೆದಿರುವುದಾಗಿ ಘೋಷಿಸಿಕೊಂಡಿದ್ದಾರೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಆಸ್ತಿ ವಿವರ ನೀಡುವಾಗ ಅಂದಿನ ಮಾರುಕಟ್ಟೆ ಮೌಲ್ಯವನ್ನು ತೋರಿಸಬೇಕು. ಆದರೆ, ಮಾರ್ಗಸೂಚಿಗಿಂತಲೂ ಕಡಿಮೆ
ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದಾರೆ. ಚುನಾವಣಾ ಆಯೋಗ, ಆದಾಯ ತೆರಿಗೆ ಇಲಾಖೆಗೆ ಸತ್ಯಾಂಶವನ್ನು ಮರೆಮಾಚಿ, ಅಕ್ರಮ ನಡೆಸಿರುವ ಬಗ್ಗೆ ಹೈಕೋರ್ಟ್‌ನಲ್ಲಿಯೂ ದೂರು ದಾಖಲಿಸಲಾಗಿತ್ತು. ಆದರೆ, ಕೋರ್ಟ್ ನಿರ್ದೇಶನದಂತೆ ಚುನಾವಣಾ ಆಯೋಗವೂ ಜಿಲ್ಲಾ ಚುನಾವಣಾಧಿಕಾರಿಗೆ ಪತ್ರ ಬರೆದಿದೆ’ಎಂದರು.
‘ಮಹಾರಾಷ್ಟದಲ್ಲಿ ಇದೇ ರೀತಿ ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದರಿಂದ ಅಲ್ಲಿನ ಶಾಸಕರೊಬ್ಬರ ಆಯ್ಕೆಯನ್ನು ಅಮಾನ್ಯ ಮಾಡಲಾಗಿದೆ. ಕಾನೂನು ಪ್ರಕಾರ ನನಗೆ ನ್ಯಾಯ ಸಿಗಲಿದೆ ಎಂಬ ಭರವಸೆ ಇದೆ. ನಾಮಪತ್ರ ಸಲ್ಲಿಕೆ ವೇಳೆ ದಾಖಲಾತಿಗಳಲ್ಲಿನ ತಪ್ಪು, ಸರಿ ಪರಿಶೀಲಿಸುವ ಅಧಿಕಾರ ಜಿಲ್ಲಾ ಚುನಾವಣಾಧಿಕಾರಿಗೆ ಇರುವುದಿಲ್ಲ. ಕಲಂಗಳನ್ನುತುಂಬಿದ್ದಾರೋ? ಇಲ್ಲವೋ? ಎಂಬುದನ್ನು ನೋಡುವುದಷ್ಟೇ ಅವರ ಕೆಲಸ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.