ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಚುನಾವಣೆ ನ್ಯಾಯಯುತವಾಗಿ ನಡೆಸಿ

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ದೇಣಿಗೆ ನೀಡಲು ಆದೇಶ; ರೇವಣ್ಣ ಆರೋಪ
Last Updated 3 ಡಿಸೆಂಬರ್ 2020, 13:21 IST
ಅಕ್ಷರ ಗಾತ್ರ

ಹಾಸನ: ‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ತಲಾ ₹ 10 ಸಾವಿರ ದೇಣಿಗೆ
ನೀಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ ಹಾಗೂ ತಾಲ್ಲೂಕು ಮಟ್ಟದ ಕಾರ್ಯನಿರ್ವಾಹಕ
ಅಧಿಕಾರಿಗಳಿಗೆ ದೊಡ್ಡ ಮಟ್ಟದ ಬಿಜೆಪಿ ನಾಯಕರು ಸೂಚನೆ ನೀಡಿದ್ದಾರೆ’ ಎಂದು ಆರೋಪಿಸಿರುವ ಶಾಸಕ
ಎಚ್‌.ಡಿ.ರೇವಣ್ಣ, ‘ಈ ಚುನಾವಣೆಯನ್ನು ನ್ಯಾಯಯುತವಾಗಿ ನಡೆಸಬೇಕು’ ಎಂದು ರಾಜ್ಯ ಚುನಾವಣಾ ಆಯೋಗವನ್ನು
ಆಗ್ರಹಿಸಿದರು.

‘ಬಿಜೆಪಿ ನಾಯಕರು ಸೂಚನೆ ನೀಡಿರುವ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ನನ್ನ ಬಳಿ ಬಂದು
ಹೇಳಿಕೊಂಡಿದ್ದಾರೆ. ಹಾಗಾಗಿ ಪಿಡಿಒಗಳು ಹೆದರಬೇಕಿಲ್ಲ. ಆ ರೀತಿ ಒತ್ತಡ ತಂದರೆ ನನ್ನ ಗಮನಕ್ಕೆ ತರಬೇಕು. ಈ ಸಂಬಂಧ ರಾಜ್ಯ ಚುನಾವಣಾ ಆಯುಕ್ತ, ಜಿಲ್ಲಾ ಚುನಾವಣಾಧಿಕಾರಿಗೂ ಪತ್ರ ಬರೆಯಲಾಗುವುದು’ ಎಂದು ಗುರುವಾರ
ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಗ್ರಾಮ ಪಂಚಾಯಿತಿ ಚುನಾವಣೆಗೆ ವಂತಿಗೆ ನೀಡುವಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೂ ದೊಡ್ಡ
ನಾಯಕರು ನಿರ್ದೇಶನ ನೀಡಿದ್ದಾರೆ ಎಂಬ ಮಾಹಿತಿ ಇದೆ. ಈ ರೀತಿಯಾದರೆ ನ್ಯಾಯಯುತ ಚುನಾವಣೆ ನಡೆಯಲು
ಸಾಧ್ಯವಿಲ್ಲ’ ಎಂದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಮಂಜೂರಾಗಿದ್ದ ಅನೇಕ ಅಭಿವೃದ್ಧಿಕಾಮಗಾರಿಗಳು ನಿಂತು ಹೋಗಿವೆ. ಹಾಸನದಲ್ಲಿ ವಿಮಾನ ನಿಲ್ದಾಣ ಆಗಬೇಕೆಂಬುದು ಜನರ ದಶಕಗಳ ಬೇಡಿಕೆ. ಆದರೆ ದ್ವೇಷ ರಾಜಕಾರಣ ಮುಂದುವರಿಸಿರುವ ಸಿ.ಎಂ. ಯಡಿಯೂರಪ್ಪ, ವಿಮಾನ ನಿಲ್ದಾಣ ಕಾಮಗಾರಿಗೆ ಬೇಕಾದ ಅನುದಾನವನ್ನು ಶಿವಮೊಗ್ಗಕ್ಕೆ ವರ್ಗಾಯಿಸಿದ್ದಾರೆ’ ಎಂದರು.

‘ಅಲ್ಲದೇ ₹1250 ಕೋಟಿ ವೆಚ್ಚದ ಹಾಸನ- ಬೇಲೂರು- ಬಿಳಿಕೆರೆ ಮಾರ್ಗದ ಹೆದ್ದಾರಿ ಕಾಮಗಾರಿ ಅನುದಾನವನ್ನು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಹಾಗೂ ಸಿ.ಎಂ ಕ್ಷೇತ್ರಗಳಿಗೆ ಹಂಚಿಕೆ ಮಾಡಿಕೊಂಡಿದ್ದಾರೆ. ಬಿಜೆಪಿ ನಾಯಕರು ಕ್ಷೇತ್ರದ ಜನರ ಬಳಿ ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾರೆ. ಮತ ನೀಡುವುದಿಲ್ಲ ಎಂಬ ಕಾರಣಕ್ಕೆ ಅಲ್ಪಸಂಖ್ಯಾತರಿಗೂ ತೊಂದರೆ ಕೊಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಸರ್ಮಿಶ್ರ ಸರ್ಕಾರವನ್ನು ಪರ್ಸಂಟೇಜ್‌ ಸರ್ಕಾರ ಎಂದು ಟೀಕಿಸಿದ್ದರು. ಈಗ ರಾಜ್ಯದಲ್ಲಿ ಹಣ ವಸೂಲಿಗೆ ಒಬ್ಬನನ್ನು ನೇಮಕ ಮಾಡಲಾಗಿದೆ. ಕಾಣಿಕೆ ಬಿದ್ದರೆ ಕಾಮಗಾರಿಗಳ ಬಿಲ್‌ ಪಾಸ್‌ ಆಗುತ್ತವೆ. ಜೆಡಿಎಸ್‌ ಪಕ್ಷ ತೊರೆಯುವವರು ಯಾರೂ ಇಲ್ಲ. ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್ ಸೇರಲು ಹಲವರು ಸಿದ್ಧ ಇದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಾತಿ ಆಧಾರಿತ ಅಭಿವೃದ್ಧಿ ನಿಗಮಗಳನ್ನು ಸ್ಥಾಪನೆ ಮಾಡುವ ಮೂಲಕ ರಾಜ್ಯದ ಐಕ್ಯತೆಗೆ ಧಕ್ಕೆ ತರುವುದು ಬೇಡ. ಕೇವಲ ಚುನಾವಣೆಗಾಗಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳಿದರು.

‘ಹುಣಸೂರು ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ನೀಡಿದ ಹಣವನ್ನು ಸಿ.ಪಿ.ಯೋಗೇಶ್ವರ್‌ ಲಪಟಾಯಿಸಿದರು’ ಎಂಬ ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಹೇಳಿಕೆಯನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT