ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರಿನಲ್ಲಿ ಕಾಂಗ್ರೆಸ್‌ ಜನಾಂದೋಲನ: ಹಾಸನದಿಂದ 10 ಸಾವಿರ ಮಂದಿ ಭಾಗಿ

ಮೈಸೂರಿನಲ್ಲಿ ಕಾಂಗ್ರೆಸ್‌ ಜನಾಂದೋಲನ: ತಾರಾ ಚಂದನ್
Published : 8 ಆಗಸ್ಟ್ 2024, 14:03 IST
Last Updated : 8 ಆಗಸ್ಟ್ 2024, 14:03 IST
ಫಾಲೋ ಮಾಡಿ
Comments

ಹಾಸನ: ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡಿರುವ ಪಾದಯಾತ್ರೆಗೆ ನಮ್ಮ ವಿರೋಧವಿದೆ. ಶುಕ್ರವಾರ ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ಡಿ. ತಾರಾ ಚಂದನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆಯಿಂದಲೂ ಹತ್ತು ಸಾವಿರ ಮಂದಿ ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿನಾಕಾರಣ ಸಿಲುಕಿಸಲಾಗಿದೆ. ಉತ್ತಮ ಆಡಳಿತ ನಡೆಸುತ್ತಿರುವ ಅವರ ತೇಜೋವಧೆ ಮಾಡಲು ವಿಪಕ್ಷಗಳು ಮುಂದಾಗಿವೆ ಎಂದು ಆರೋಪಿಸಿದರು.

ಮುಡಾ ಹಾಗೂ ಇತರೆ ಹಗರಣಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಪಾದಯಾತ್ರೆ ಹಮ್ಮಿಕೊಂಡಿರುವುದು ಹಾಸ್ಯಾಸ್ಪದ ಮತ್ತು ಅರ್ಥಹೀನ ಎಂದರು.

ರಾಜ್ಯಪಾಲರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ಕೊಟ್ಟಿರುವುದು ಸರಿಯಲ್ಲ. ರಾಜ್ಯಪಾಲರು ಕೂಡಲೇ ಸಿದ್ದರಾಮಯ್ಯ ಅವರ ಮೇಲಿನ ವಿಚಾರಣೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ವಿರುದ್ಧ ದೂರು ನೀಡಿರುವ ಅಬ್ರಾಹಂ ಎಂಬ ವ್ಯಕ್ತಿ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ₹25 ಲಕ್ಷ ದಂಡ ಹಾಕಲಾಗಿದೆ. ಅಂತಹ ವ್ಯಕ್ತಿ ಇದೀಗ ದೂರ ನೀಡಿದ್ದು, ಅದನ್ನು ವಿಚಾರಣೆ ಹಂತಕ್ಕೆ ತಂದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದ ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ವಿರುದ್ಧ ಲೋಕಾಯುಕ್ತದಲ್ಲಿ ದೂರು ನೀಡಿ ವರ್ಷಗಳೇ ಕಳೆದಿದೆ. ಆದರೂ ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಸಿದ್ದರಾಮಯ್ಯ ಅವರಿಗೆ ಅಬ್ರಾಹಂ ಎಂಬ ವ್ಯಕ್ತಿ ನೀಡಿದ ದೂರಿನ ಅನ್ವಯ ನೋಟಿಸ್‌ ಕೊಟ್ಟಿರುವುದರ ಹಿಂದಿನ ಅರ್ಥವೇನು ಎಂದು ಪ್ರಶ್ನಿಸಿದರು.

ಈ ಎಲ್ಲ ಬೆಳವಣಿಗೆ ನಡುವೆ ಮೈಸೂರಿನಲ್ಲಿ ಬೃಹತ್ ಜನಾಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ರಹಿಮಾ, ವಸಂತ ಕುಮಾರಿ, ಜಮೀಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT