ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಮಮಾರ್ಗದ ಅಧಿಕಾರಕ್ಕೆ ಬಿಜೆಪಿ ಯತ್ನ: ಸಚಿವ ಶ್ರೀನಿವಾಸ್‌

ಕಾಂಗ್ರೆಸ್‌ ಶಾಸಕರ ಅಸಮಾಧಾನ ಸರಿಪಡಿಸಿದ ಸಿದ್ದರಾಮಯ್ಯ
Last Updated 6 ಫೆಬ್ರುವರಿ 2019, 14:21 IST
ಅಕ್ಷರ ಗಾತ್ರ

ಹಾಸನ: ರಾಜ್ಯ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಉತ್ತಮ ಬಜೆಟ್ ಮಂಡಿಸಲು ಒಂದು ತಿಂಗಳಿಂದ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾರೆ ಎಂದು ಸಣ್ಣ ಕೈಗಾರಿಕಾ ಸಚಿವ ಗುಬ್ಬಿ ಶ್ರೀನಿವಾಸ್ ಹೇಳಿದರು.

ಕಾಂಗ್ರೆಸ್ ಕೆಲ ಶಾಸಕರಲ್ಲಿದ್ದ ಸಣ್ಣಪುಟ್ಟ ಅಸಮಾಧಾನವನ್ನು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸರಿಪಡಿಸಿದ್ದಾರೆ. ಇನ್ನು ಜೆಡಿಎಸ್‌ನಲ್ಲಿ ಯಾವುದೇ ಗೊಂದಲ್ಲ ಇಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ಸ್ಪಷ್ಟಪಡಿಸಿದರು.

‘ಬಿಜೆಪಿಯವರು ಸರ್ಕಾರ ಬೀಳಿಸಲು ಏನೇ ತಂತ್ರ ಮಾಡಿದರೂ ಅದು ಫಲಿಸಲ್ಲ. ಸದನದಲ್ಲಿ ನಡೆದುಕೊಂಡಿರುವ ರೀತಿ ಸರಿಯಲ್ಲ. ಅವರಿಗೆ ನಾಚಿಕೆ, ಮಾನ ಮರ್ಯಾದೆ ಇಲ್ಲ. ಹಿಂದೆ ಆಪರೇಷನ್ ಕಮಲದಂಥ ನೀಚ ಕೆಲಸ ಮಾಡಿದ್ದರು. ಈಗಲೂ ಅದನ್ನೇ ಮಾಡಲು ಹೊರಟಿದ್ದು, ಅದರಲ್ಲಿ ಅವರು ಯಶಸ್ಸು ಕಾಣರು’ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಲಮನ್ನಾದಂಥ ಜನಪರ ಯೋಜನೆ ಜಾರಿ ಮಾಡಿ ಉತ್ತಮವಾಗಿ ನಡೆಯುತ್ತಿರುವ ಸರ್ಕಾರಕ್ಕೆ ಸಹಕಾರ ಕೊಡಬೇಕು. ತಪ್ಪು ಮಾಡಿದ್ದರೆ ತಿದ್ದಿ ಹೇಳಬೇಕು. ಅದನ್ನು ಬಿಟ್ಟು. ಇಂದೇ ಸರ್ಕಾರ ಬೀಳಿಸುತ್ತೇವೆ ಎಂದು ವಾಮಮಾರ್ಗದ ರಾಜಕೀಯ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಕಿಡಿ ಕಾರಿದರು.

ಬಜೆಟ್ ಮಂಡನೆಗೂ ಬಿಜೆಪಿ ಅಡ್ಡಿಪಡಿಸುವ ಸಾಧ್ಯತೆ ಇದೆ. ಪ್ರತಿಭಟನೆ ಎಲ್ಲರ ಹಕ್ಕು. ಆದರೆ, ಯಾವ ಸಂದರ್ಭದಲ್ಲಿ ಮಾಡಬೇಕು ಎಂಬ ಜ್ಞಾನ ಇರಬೇಕು ಎಂದು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ರಾಜ್ಯ ಸರ್ಕಾರ ಅಲ್ಪ ಮತಕ್ಕೆ ಕುಸಿಯುವ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಗೆ ಉತ್ತರಿಸಿದ ಅವರು, ಗೈರಾಗಿರುವ ಕೆಲವು ಶಾಸಕರು ಸಂಪೂರ್ಣವಾಗಿ ಬಜೆಟ್ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

‘ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಏರಿಸುವ ಪ್ರಸ್ತಾವಕ್ಕೆ ವೈಯಕ್ತಿಕವಾಗಿ ನನ್ನ ವಿರೋಧ ಇದೆ. ಯುವಕರಿಗೆ ಅವಕಾಶ ಕಲ್ಪಿಸುವ ಮೂಲಕ ನಿರುದ್ಯೋಗ ಸಮಸ್ಯೆ ದೂರ ಮಾಡಬಹುದು’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT