ಮಂಗಳವಾರ, ಮಾರ್ಚ್ 21, 2023
23 °C

ಕಾಂಗ್ರೆಸ್‌ಗೆ ನಿಚ್ಚಳ ಬಹುಮತ: ಧ್ರುವನಾರಾಯಣ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಆರಂಭವಾಗಿರುವ ಪ್ರಜಾಧ್ವನಿ ಯಾತ್ರೆ ಜ.21 ರಂದು ಜಿಲ್ಲೆಗೆ ಬರಲಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಉಸ್ತುವಾರಿ ಆರ್‌. ಧ್ರುವನಾರಾಯಣ ತಿಳಿಸಿದರು. 

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾತ್ರೆಯು ಈಗಾಗಲೇ ಬೆಳಗಾವಿಯಿಂದ ಆರಂಭವಾಗಿದ್ದು, ನಿತ್ಯ ಎರಡು ಜಿಲ್ಲೆಗಳಲ್ಲಿ ಸಂಚರಿಸಲಿದೆ. 21 ರಂದು ಬೆಳಿಗ್ಗೆ ಹಾಸನ ಹಾಗೂ ಮಧ್ಯಾಹ್ನ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸ ನಡೆಯಲಿದೆ ಎಂದರು. 

ಪ್ರಜಾಧ್ವನಿ ಯಾತ್ರೆ ಪ್ರತಿ ಜಿಲ್ಲಾ ಕೇಂದ್ರಕ್ಕೆ ತೆರಳಲಿದೆ. ಈ ಯಾತ್ರೆ ಮುಗಿದ ನಂತರ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರು ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಿಗೆ ಭೇಟಿ ನೀಡುವ ಮೂಲಕ ಪಕ್ಷದ ಸಂಘಟನೆಗೆ ಬಲ ತುಂಬಲಿದ್ದಾರೆ. ಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ನಿಚ್ಚಳ ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜ.16 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾಂಗ್ರೆಸ್‌ ಮಹಿಳಾ ಸಮಾವೇಶದಲ್ಲಿ ಪ್ರಿಯಾಂಕಾ ವಾದ್ರಾ ಪಾಲ್ಗೊಳ್ಳಲಿದ್ದು, ಮಹಿಳಾ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ. ಈ ಸಮಾವೇಶದಲ್ಲಿ ರಾಜ್ಯದಿಂದ 50 ಸಾವಿರ ಮಹಿಳೆಯರು ಭಾಗವಹಿಸಲಿದ್ದು, ಹಾಸನ ಜಿಲ್ಲೆಯಿಂದ 5 ಸಾವಿರ ಮಹಿಳಾ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. 

ಬಿಜೆಪಿಯ ಬಿ ಟೀಂ: ಜೆಡಿಎಸ್, ಬಿಜೆಪಿಯ ಬಿ ಟೀಂ ಎನ್ನುವುದು ನಿಜ. ಅವರಿಬ್ಬರ ಆಂತರಿಕ ಒಪ್ಪಂದದ ಬಗ್ಗೆ ಜನರಿಗೆ ಗೊತ್ತಿದೆ. ಹಾಸನ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ಗಳ ವೈಫಲ್ಯವನ್ನು ಪ್ರಜಾಧ್ವನಿ ಯಾತ್ರೆಯ ಮೂಲಕ ಜನರಿಗೆ ತಿಳಿಸಲಾಗುವುದು ಎಂದರು. 

ಹಾಸನ ಕ್ಷೇತ್ರದಲ್ಲಿ ಶಾಸಕ ಪ್ರೀತಂ ಗೌಡ ಸವಾಲು ಹಾಕಿದ್ದು, ಅದನ್ನು ಸ್ವೀಕರಿಸುವುದಾಗಿ ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದ್ದಾರೆ. ಆದರೆ, ಕ್ಷೇತ್ರದಲ್ಲಿ ಎರಡೂ ಪಕ್ಷಗಳ ಸಾಧನೆ ಶೂನ್ಯ. ಇದರಿಂದ ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಸುಲಭವಾಗಲಿದೆ ಎಂದರು. 

‘ಹಾಸನ ಜಿಲ್ಲೆಗೆ ಸಂಬಂಧಿಸಿದಂತೆ ಈಗಾಗಲೇ ಅರ್ಜಿ ಹಾಕಿರುವ ಆಕಾಂಕ್ಷಿಗಳು, ಆಯಾ ಕ್ಷೇತ್ರದ ಮುಖಂಡರ ಅಭಿಪ್ರಾಯವನ್ನು ನಾನು ಮತ್ತು ಡಿ.ಕೆ. ಸುರೇಶ್ ಸಂಗ್ರಹಿಸಿದ್ದು, ಕೆಪಿಸಿಸಿಗೆ ವರದಿ ಸಲ್ಲಿಸಲಾಗಿದೆ. ಎಲ್ಲ ಗೊಂದಲಗಳನ್ನು ಪರಿಹರಿಸಲಾಗಿದೆ. ಯಾರಿಗೇ ಟಿಕೆಟ್ ನೀಡಿದರೂ, ಒಟ್ಟಾಗಿ ಶ್ರಮಿಸಲು ಎಲ್ಲರೂ ಒಪ್ಪಿಕೊಂಡಿದ್ದಾರೆ. ಏಳೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ತಿಳಿಸಿದರು. 

ಅಂತಿಮ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷರು ಹೈಕಮಾಂಡ್‌ಗೆ ರವಾನಿಸಲಿದ್ದಾರೆ. ಹೈಕಮಾಂಡ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ. ಜನವರಿ ಕೊನೆ ಅಥವಾ ಫೆಬ್ರುವರಿ ಮೊದಲ ವಾರದಲ್ಲಿ ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆ ಆಗಲಿದೆ ಎಂದು ತಿಳಿಸಿದರು. 

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ, ಮುಖಂಡರಾದ ಪುಟ್ಟೇಗೌಡ, ಗೋಪಾಲಸ್ವಾಮಿ, ಎಚ್‌.ಕೆ. ಮಹೇಶ್‌, ಬಿ.ಕೆ. ರಂಗಸ್ವಾಮಿ, ರಘು, ಡಿ.ಸಿ. ಸಣ್ಣಸ್ವಾಮಿ, ಮುರಳಿಮೋಹನ್‌, ವಿನಯ್‌ ಗಾಂಧಿ, ಅನಿಲ್‌, ಲಕ್ಷ್ಮಿಪತಿ, ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ತಾರಾ ಚಂದ ಇದ್ದರು. 

ಸ್ಯಾಂಟ್ರೋ ರವಿಯನ್ನು ಕೂಡಲೇ ಬಂಧಿಸಬೇಕು. ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಪಾರದರ್ಶಕ ತನಿಖೆ ಆಗಬೇಕು. ತಪ್ಪಿತಸ್ಥರು ಯಾರೇ ಇದ್ದರೂ ಕಾನೂನು ಕ್ರಮ ತೆಗೆದುಕೊಳ್ಳಬೇಕು.

‘ಕೆಲವು ವಿಶೇಷ ಪ್ರಕರಣ’
ಕೆಪಿಸಿಸಿಗೆ ಅರ್ಜಿ ಸಲ್ಲಿಸಿದವರನ್ನು ಮಾತ್ರ ಟಿಕೆಟ್‌ಗೆ ಪರಿಗಣಿಸಲಾಗುವುದು. ಆದರೆ, ಕೆಲ ಕ್ಷೇತ್ರಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಬೇಕಾಗುತ್ತದೆ ಎಂದು ಹೇಳಿದ ಧ್ರುವನಾರಾಯಣ್‌, ಅರಸೀಕೆರೆ ಹಾಗೂ ಅರಕಲಗೂಡು ಕ್ಷೇತ್ರಗಳಿಗೆ ಅಂತಿಮ ಹಂತದಲ್ಲಿ ಟಿಕೆಟ್‌ ಘೋಷಿಸುವ ಸುಳಿವು ನೀಡಿದರು. 

‘ನಮ್ಮ ನಿಯಮದ ಪ್ರಕಾರ ಅರ್ಜಿ ಸಲ್ಲಿಸಿದವರನ್ನು ಪರಿಗಣಿಸಲಾಗುವುದು. ಆದರೆ, ಬೇರೆ ಪಕ್ಷಗಳಿಂದ ಬರುವವರಿದ್ದರೆ, ಅಂತಹ ಪ್ರಕರಣಗಳನ್ನು ವಿಶೇಷ ಎಂದು ಪರಿಗಣಿಸಬೇಕಾಗುತ್ತದೆ’ ಎಂದ ಅವರು, ‘ಅರಸೀಕೆರೆಯ ಶಿವಲಿಂಗೇಗೌಡರು ಕಾಂಗ್ರೆಸ್‌ ವರಿಷ್ಠರ ಜೊತೆ ಚರ್ಚಿಸಿರುವುದು ನಿಜ. ಆದರೆ, ಅರಕಲಗೂಡು ಕ್ಷೇತ್ರದಲ್ಲಿ ಈ ರೀತಿಯ ಚರ್ಚೆ ಆಗಿರುವುದು ನನಗೆ ತಿಳಿದಿಲ್ಲ’ ಎಂದು ಸ್ಪಷ್ಟಪಡಿಸಿದರು. 

ಬೇರೆ ಪಕ್ಷಗಳ ಹಲವು ಮುಖಂಡರು ಕಾಂಗ್ರೆಸ್‌ನತ್ತ ಒಲವು ತೋರುತ್ತಿದ್ದಾರೆ. ಜ.21 ರಂದು ಪ್ರಜಾಧ್ವನಿ ಯಾತ್ರೆಯು ಜಿಲ್ಲೆಗೆ ಬಂದ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅಂತಹ ನಾಯಕರ ಹೆಸರು ಘೋಷಿಸಬಹುದು ಎನ್ನುವ ಮೂಲಕ ಶಿವಲಿಂಗೇಗೌಡರ ಸೇರ್ಪಡೆಯ ಸುಳಿವು ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು