ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆಗೆ ಸಹಕಾರ ನೀಡುವೆ

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶ್ವೇತಾ ದೇವರಾಜ್‌ ಸ್ಪಷ್ಟನೆ
Last Updated 5 ಸೆಪ್ಟೆಂಬರ್ 2020, 14:17 IST
ಅಕ್ಷರ ಗಾತ್ರ

ಹಾಸನ: "ನನ್ನ ಅಧಿಕಾರ ಅವಧಿಯಲ್ಲಿ ಅಕ್ರಮ ನಡೆದಿದೆ ಎಂಬ ಜೆಡಿಎಸ್‌ ಆರೋಪಕ್ಕೆ ಸಂಬಂಧಿಸಿದಂತೆ
ಯಾವುದೇ ತನಿಖೆ ನಡೆಸಿದರೂ ಸಂಪೂರ್ಣ ಸಹಕಾರ ನೀಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ
ದೇವರಾಜ್‌ ಹೇಳಿದರು.

‘ಲಿಫ್ಟ್‌ ಅಳವಡಿಕೆ, ಪ್ರವಾಸ ಭತ್ಯೆ ಅವ್ಯವಹಾರ ಕುರಿತು ನನ್ನ ವಿರುದ್ಧ ಸಲ್ಲಿಸಿರುವ ದೂರಿನಲ್ಲಿ ಜಿಲ್ಲಾ ಪಂಚಾಯಿತಿ
ಸದಸ್ಯರಲ್ಲದವರ ಸಹಿ ಇದೆ. ಈ ಬಗ್ಗೆ ತನಿಖೆಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಸತ್ಯಾಂಶ ಗೊತ್ತಾಗಲಿದೆ.
ಬಹುತೇಕ ಅಧಿಕಾರಿಗಳು ಹಾಗೂ ನೌಕರರಿಗೆ ಕೋವಿಡ್‌ ದೃಢಪಟ್ಟಿದ್ದರೂ ಯೋಜನೆ ಅನುಷ್ಠಾನ ಹಾಗೂ ಕಾರ್ಯಕ್ರಮಗಳ ರೂಪುರೇಷೆಗಳು ನಿಗದಿತ ಸಮಯದಲ್ಲಿ ಪೂರ್ಣಗೊಂಡಿದೆ. ಆದರೂ ಸದಸ್ಯರು ಇಲ್ಲಸಲ್ಲದ
ಆರೋಪ ಮಾಡುತ್ತಿರುವುದು ಸರಿಯಲ್ಲ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.


22 ಜನ ಸದಸ್ಯರು ಜಿಲ್ಲಾ ಪಂಚಾಯಿತಿ ಸಭೆ ಕರೆಯುವಂತೆ ಪತ್ರ ಬರೆದಿದ್ದರು. ಆದರೆ ಜೆಡಿಎಸ್‌ ಸದಸ್ಯರೂ ಸಭೆಗೆ
ಹಾಜರಾಗಿಲ್ಲ. ಕೋರಂ ಕೊರತೆಯಿಂದ ಸಭೆ ಮುಂದೂಡಲಾಯಿತು. ವಿಶೇಷ ಸಭೆ ಮತ್ತು ಸಾಮಾನ್ಯ ಸಭೆಯ ನಡುವೆ ಏನು ವ್ಯತ್ಯಾಸ ಇಲ್ಲ. ಕೋವಿಡ್‌ ಇರುವ ಕಾರಣ ಬಹುತೇಕ ಶಾಸಕರು ಮತ್ತು ಸದಸ್ಯರು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ಜೊತೆಗೆ ಸದಸ್ಯರು ಪತ್ರ ಬರೆದ 15 ದಿನದ ಒಳಗೆ ಸಭೆ ನಿಗದಿ ಮಾಡಬೇಕು. ಇಲ್ಲದಿದ್ದರೆ ಸಭೆ ಕರೆಯುವ ಅಧಿಕಾರ ಉಪಾಧ್ಯಕ್ಷರಿಗೆ ಬರುತ್ತದೆ. ಹಾಗಾಗಿ ಸಭೆ ನಿಗದಿ ಮಾಡಲಾಗಿದೆ ಎಂದು ವಿವರಿಸಿದರು.

‘ಸಭೆ ಕರೆಯುವಂತೆ ಪತ್ರ ಬರೆಯುವವರು ಜೆಡಿಎಸ್‌ ಸದಸ್ಯರೇ, ಸಭೆಗೆ ಗೈರಾಗುವವರೂ ಅವರೇ. ಅಧ್ಯಕ್ಷರ ವಿವೇಚನಾ ಕೋಟಾ ಅಡಿ ₹1 ಕೋಟಿ ಅನುದಾನ ಬಂದಿದೆ. ಅದನ್ನು ಖರ್ಚು ಮಾಡುವುದು ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು. ಆದರೂ 8 ತಾಲ್ಲೂಕುಗಳಿಗೂ ಸಮಾನವಾಗಿ ಹಂಚಿಕೆ ಮಾಡಲಾಗಿದೆ’ ಎಂದು ಹೇಳಿದರು.


‘ಅನುದಾನ ಹಂಚಿಕೆ ಕುರಿತು ಶಾಸಕರು ನನ್ನನ್ನು ಬಿಟ್ಟು ಸಭೆ ನಡೆಸಿದ್ದಾರೆ. ಶಾಸಕರಿಗೆ ತಲಾ ₹10 ಲಕ್ಷ
ನೀಡಬೇಕೆಂಬ ನಿರ್ಣಯ ಕೈಗೊಳ್ಳಲಾಗಿದೆ. ಆದರೆ, ನಿಯಮ ಪ್ರಕಾರ ಆ ರೀತಿ ಮಾಡಲು ಬರುವುದಿಲ್ಲ. ಸಿಇಒ ಅವರಿಗೆ ಮೇಲಧಿಕಾರಿಗಳು ಸೂಚಿಸಿದ ಬಳಿಕ ಆ ನಿರ್ಣಯ ಹಿಂಪಡೆಯಲಾಗಿದೆ’ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರ ಅವಧಿ ಮುಗಿದಿದ್ದು, ಈ ಸಂಬಂಧ ಸಭೆ ಕರೆಯುವಂತೆ ಅಂದೇ ಸಹಿ ಮಾಡಿ
ಕೊಟ್ಟಿದ್ದೇನೆ. ಹಿಂದಿನಿಂದಲೂ ಬುಹುತೇಕ ಸಭೆಗಳಿಗೆ ಜೆಡಿಎಸ್‌ ಸದಸ್ಯರು ಹಾಜರಾಗಿಲ್ಲ. ಮುಂದಿನ ಬಾರಿ ಅವರು ಹೇಳಿದ ದಿನವೇ ಸಭೆ ಕರೆಯಲಾಗುವುದು. ಹಾಜರಾಗುತ್ತಾರೋ? ಇಲ್ಲವೋ? ನೋಡೋಣ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT