ಸೋಮವಾರ, ಜೂನ್ 27, 2022
22 °C
ಶೀಘ್ರ ದಾಖಲೆ ಬಿಡುಗಡೆ ಮಾಡುವೆ: ಶಾಸಕ ಎಚ್‌.ಡಿ.ರೇವಣ್ಣ

ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ನೀರಾವರಿ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ’ ಎಂದು ಆರೋಪಿಸಿರುವ ಶಾಸಕ ಎಚ್.ಡಿ.ರೇವಣ್ಣ, ‘ಸಂಬಂಧಪಟ್ಟ ದಾಖಲೆಗಳನ್ನು ಶೀಘ್ರ ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದರು.

‘ಹಣಕಾಸು ಹಾಗೂ ನೀರಾವರಿ ಖಾತೆ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನೇ ಎ1 ಆರೋಪಿಯಾಗಿ ಮಾಡಿ ಕಾನೂನು ಹೋರಾಟ ನಡೆಸುತ್ತೇನೆ. ಈಗಾಗಲೇ ಹಲವು ದಾಖಲೆಗಳನ್ನು ಸಂಗ್ರಹಿಸಿದ್ದು, ಒಳ್ಳೆಯ ದಿನ ನೋಡಿ ಬಿಡುಗಡೆ ಮಾಡುತ್ತೇನೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಸಹ ನೀಡಿಲ್ಲ. ಕೋವಿಡ್‌ ನಿರ್ವಹಣೆಗೂ ಸರ್ಕಾರದ ಬಳಿ ಹಣ ಇಲ್ಲ. ಆದರೆ, ಕಾಮಗಾರಿ ಪೂರ್ಣಗೊಳಿಸದಿದ್ದರೂ ಗುತ್ತಿಗೆದಾರರ ಬಿಲ್‌ ಪಾಸ್‌ ಮಾಡಲಾಗುತ್ತಿದೆ. ಗುತ್ತಿಗೆದಾರರೊಬ್ಬರಿಗೆ ₹1,500 ಕೋಟಿ ಮೊತ್ತದ ಬಿಲ್‌ ಪಾಸ್‌ ಮಾಡಲಾಗಿದೆ. ಬಿಜೆಪಿ ಕಡೆಯ ಗುತ್ತಿಗೆದಾರರಿಗೆ ನೂರಾರು ಕೋಟಿ ರೂಪಾಯಿ ಕಾಮಗಾರಿ ನೀಡಲಾಗುತ್ತಿದೆ. ಇಷ್ಟೆಲ್ಲಾ ಅವ್ಯವಹಾರ ನಡೆಯುತ್ತಿದ್ದರೂ ವಿರೋಧ ಪಕ್ಷ ಕಾಂಗ್ರೆಸ್‌ ಏನೂ ಮಾತನಾಡುತ್ತಿಲ್ಲ’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ನೀಡುವಲ್ಲಿಯೂ ರಾಜಕೀಯ ಮಾಡಲಾಗುತ್ತಿದೆ. ಸರ್ಕಾರ ಜನರ ತೆರಿಗೆ ಹಣದಿಂದ ಲಸಿಕೆ ನೀಡುತ್ತಿದೆ. ಯಡಿಯೂರಪ್ಪ ಮನೆ ಹಣ ಅಲ್ಲ. ಆದರೆ, ಸ್ಥಳೀಯ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು  ಲಸಿಕಾ  ವಿತರಣೆ ಕಾರ್ಯಕ್ರಮದ ಜತೆ  ತಮ್ಮ ಭಾವಚಿತ್ರ ಪ್ರಕಟಿಸಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಶಿಷ್ಟಾಚಾರದ ಪ್ರಕಾರ
ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರ ಭಾವಚಿತ್ರವೂ ಇರಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 14 ಲಕ್ಷ ಜನರ ಪೈಕಿ 2.50 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಗ್ರಾಮೀಣ ಪ್ರದೇಶದ ಜನರನ್ನು ಕಡೆಗಣಿಸಲಾಗಿದೆ. ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಶಾಸಕರ ಕ್ಷೇತ್ರದ ಎಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಎಂಬುದನ್ನು ಸರ್ಕಾರ ಮಾಹಿತಿ ನೀಡಬೇಕು. ಹಿಮತ್‌ ಸಿಂಗ್ ಕಾ ಕಾರ್ಖಾನೆ ಕಾರ್ಮಿಕರಿಗೆ ಉಚಿತವಾಗಿ ಲಸಿಕೆ ನೀಡಬಾರದು. ಲಸಿಕಾ ವೆಚ್ಚವನ್ನು ಕಾರ್ಖಾನೆ ಮಾಲೀಕರಿಂದಲೇ ವಸೂಲಿ ಮಾಡಬೇಕು. ತರಬೇತಿ ಕಾರ್ಯಕ್ರಮಗಳಿಗಾಗಿ ಸರ್ಕಾರ ಕಾರ್ಖಾನೆಗೆ ₹500 ಕೋಟಿ ನೀಡಿದೆ’ ಎಂದರು.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇದೇ ರೀತಿ ನಡೆದುಕೊಂಡರೆ ಮುಂದೆ ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತದೆ. ಜಿಲ್ಲೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಕಾನೂನು ಮೀರಿ ಕೆಲಸ ಮಾಡುತ್ತಿರುವ ನಗರಸಭೆ ಆಯುಕ್ತರು, ಎಂಜಿನಿಯರ್‌ಗಳು, ಹಾಸನ ಸುತ್ತಮುತ್ತಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜೈಲಿಗೆ ಹೋಗುವ ಕಾಲ ಬರುತ್ತದೆ’ ಎಂದು ಎಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.