ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಅಂಕೆಗೆ ಸಿಗದ ಅಭ್ಯರ್ಥಿಗಳ ನಡೆ

ಯಾವ ಪಕ್ಷದಿಂದ ಯಾರು ಎನ್ನುವ ಕುತೂಹಲ: ಬದಲಾಗುತ್ತಿರುವ ಚಿತ್ರಣ
Last Updated 17 ಫೆಬ್ರವರಿ 2023, 6:29 IST
ಅಕ್ಷರ ಗಾತ್ರ

ಹಾಸನ: ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಇದುವರೆಗೆ ಸ್ಪಷ್ಟ ಚಿತ್ರಣ ಮಾತ್ರ ಸಿಗುತ್ತಿಲ್ಲ. ಯಾರು, ಯಾವ ಕ್ಷೇತ್ರದಿಂದ, ಯಾವ ಪಕ್ಷದ ಅಭ್ಯರ್ಥಿ ಆಗಲಿದ್ದಾರೆ ಎನ್ನುವುದು ಊಹೆಗೂ ನಿಲುಕದಂತ ವಾತಾವರಣ ಸೃಷ್ಟಿಯಾಗಿದೆ.

ಸದ್ಯದ ಮಟ್ಟಿಗೆ ಸಕಲೇಶಪುರ, ಹೊಳೆನರಸೀಪುರ, ಶ್ರವಣಬೆಳಗೊಳ, ಬೇಲೂರು, ಹಾಸನ ಕ್ಷೇತ್ರಗಳಲ್ಲಿ ಹಾಲಿ ಶಾಸಕರೇ ಮತ್ತೊಮ್ಮೆ ಸ್ಪರ್ಧೆಗೆ ಇಳಿಯುವುದು ಖಚಿತವಾಗಿದೆ. ಆದರೆ, ಅರಕಲಗೂಡು, ಅರಸೀಕೆರೆ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿಗಳು, ಯಾವ ಪಕ್ಷಗಳಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಅರಸೀಕೆರೆ ಕ್ಷೇತ್ರದಲ್ಲಿ ಈಗಾಗಲೇ ಹಾಲಿ ಶಾಸಕ ಕೆ.ಎಂ. ಶಿವಲಿಂಗೇಗೌಡರು ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಇಳಿಯುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್‌ನಿಂದ ಬಾಣಾವರ ಅಶೋಕ್‌ ಅವರನ್ನು ಕಣಕ್ಕೆ ಇಳಿಸುವುದಾಗಿ ಎಚ್.ಡಿ. ಕುಮಾರಸ್ವಾಮಿ ಪರೋಕ್ಷವಾಗಿ ಘೋಷಿಸಿದ್ದಾರೆ.

ಆದರೆ, ಬೇಲೂರು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಗಂಡಸಿ ಶಿವರಾಂ, ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಎನ್‌.ಆರ್. ಸಂತೋಷ್‌ ಕೂಡ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ. ಆಯಾ ಪಕ್ಷಗಳಿಂದ ಟಿಕೆಟ್‌ ಸಿಗದೇ ಇದ್ದಲ್ಲಿ, ಅನ್ಯ ಪಕ್ಷಗಳಿಂದ ಸ್ಪರ್ಧೆ ಮಾಡುವ ನಿರ್ಧಾರ ಮಾಡಿದ್ದಾರೆ ಎಂದು ಕ್ಷೇತ್ರದ ಮತದಾರರು ಹೇಳುತ್ತಿದ್ದಾರೆ.

ಇನ್ನು ಅರಕಲಗೂಡಿನಲ್ಲಿ ಹಾಲಿ ಶಾಸಕ ಎ.ಟಿ. ರಾಮಸ್ವಾಮಿ ಅವರು ಜೆಡಿಎಸ್‌ನಿಂದ ಹೊರನಡೆದಿದ್ದು, ಕಾಂಗ್ರೆಸ್‌ ಅಭ್ಯರ್ಥಿಯಾಗಲಿದ್ದಾರೋ, ಬಿಜೆಪಿ ಅಭ್ಯರ್ಥಿಯಾಗಲಿದ್ದಾರೋ ಎನ್ನುವ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಬಿಜೆಪಿ ಮುಖಂಡರ ಜೊತೆಗೆ ರಾಮಸ್ವಾಮಿ ಅವರ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಆ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಯೋಗಾ ರಮೇಶ್‌ ಅವರಿಗೆ ಹಿನ್ನಡೆ ಆಗಲಿದೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್ ಟಿಕೆಟ್‌ ಬಹುತೇಕ ಅಂತಿಮವಾಗಿರುವ ಎ.ಮಂಜು, ಈಗಾಗಲೇ ಭರ್ಜರಿ ಸಿದ್ಧತೆ ಆರಂಭಿಸಿದ್ದಾರೆ. ಪಂಚರತ್ನ ಯಾತ್ರೆ ಜಿಲ್ಲೆಗೆ ಬಂದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಅಪಾರ ಸಂಖ್ಯೆಯ ಜನರನ್ನು ಸೇರಿಸುವ ಯೋಜನೆ ರೂಪಿಸಿದ್ದಾರೆ ಎಂದು ಅವರ ನಿಕಟವರ್ತಿಗಳು ಹೇಳುತ್ತಿದ್ದಾರೆ.

ಅರಸೀಕೆರೆ ಹಾಗೂ ಅರಕಲಗೂಡು ಕ್ಷೇತ್ರಗಳಲ್ಲಿ ಪಕ್ಷಗಳು ಅಂತಿಮವಾಗದೇ ಇದ್ದರೂ, ಅಭ್ಯರ್ಥಿಗಳ ಪ್ರಚಾರ ಮಾತ್ರ ಬಿರುಸಿನಿಂದ ಸಾಗಿದೆ. ವೈಯಕ್ತಿಕವಾಗಿ ಮತಯಾಚನೆ ಮಾಡುತ್ತಿರುವ ಅಭ್ಯರ್ಥಿಗಳು, ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ಬೇಲೂರು ಕ್ಷೇತ್ರದಿಂದ ಹಾಲಿ ಶಾಸಕ ಕೆ.ಎಸ್‌. ಲಿಂಗೇಶ್‌ ಜೆಡಿಎಸ್‌ ಅಭ್ಯರ್ಥಿಯಾಗಲಿದ್ದು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ಸುರೇಶ್‌ ಬಿಜೆಪಿ ಅಭ್ಯರ್ಥಿ ಆಗುವುದು ಬಹುತೇಕ ನಿಶ್ಚಿತ. ಆದರೆ, ಕಾಂಗ್ರೆಸ್‌ನಲ್ಲಿ ಗ್ರಾನೈಟ್‌ ರಾಜಶೇಖರ್‌, ಬಿ. ಶಿವರಾಂ, ಜಿಲ್ಲಾ ಘಟಕದ ಅಧ್ಯಕ್ಷ ಇ.ಎಚ್‌. ಲಕ್ಷ್ಮಣ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಸಕಲೇಶಪುರ, ಚನ್ನರಾಯಪಟ್ಟಣದಲ್ಲಿ ಜೆಡಿಎಸ್‌ನ ಹಾಲಿ ಶಾಸಕರೇ ಅಭ್ಯರ್ಥಿಗಳು. ಆದರೆ, ಇಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ತಿಳಿಯುತ್ತಿಲ್ಲ. ಎಚ್‌.ಡಿ. ರೇವಣ್ಣ ಪ್ರತಿನಿಧಿಸುವ ಹೊಳೆನರಸೀಪುರ ಕ್ಷೇತ್ರದಲ್ಲಿ ಶ್ರೇಯಸ್‌ ಪಟೇಲ್‌ ಕಾಂಗ್ರೆಸ್‌ ಅಭ್ಯರ್ಥಿಯಾಗುವುದು ನಿಶ್ಚಿತ ಎನ್ನಲಾಗುತ್ತಿದೆ.

ರೇವಣ್ಣ ಕುಟುಂಬ ಸಕ್ರಿಯ

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕೆಲಕಾಲ ಮೌನಕ್ಕೆ ಶರಣಾಗಿದ್ದ ಎಚ್‌.ಡಿ. ರೇವಣ್ಣ ಕುಟುಂಬ ಇದೀಗ ಸಕ್ರಿಯವಾಗಿದೆ. ನಗರಸಭೆ ಮಾಜಿ ಸದಸ್ಯ ಬಂಗಾರಿ ಮಂಜು ಅವರನ್ನು ಬಿಜೆಪಿಯಿಂದ ಮರಳಿ ಜೆಡಿಎಸ್‌ಗೆ ಕರೆತರುವಲ್ಲಿ ಯಶಸ್ವಿಯಾಗಿದೆ.

ಭವಾನಿ ರೇವಣ್ಣ ಅವರು ನಗರದಲ್ಲಿರುವ ಸಂಸದರ ಕಚೇರಿಯಲ್ಲಿ ಪಕ್ಷದ ಕೆಲ ಮುಖಂಡರ ಜೊತೆಗೆ ಚರ್ಚಿಸಿದ್ದಾರೆ. ಇನ್ನೊಂದೆಡೆ ರೇವಣ್ಣ ಅವರು ಹಾಸನ ನಗರಸಭೆಯ ಜೆಡಿಎಸ್‌ ಸದಸ್ಯರ ಜೊತೆಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಭವಾನಿ ರೇವಣ್ಣ ಅವರು ತಾಲ್ಲೂಕಿನಲ್ಲಿ ಸಂಚಾರ ಆರಂಭಿಸಿದ್ದು, ನಿಡೂಡಿ ಗ್ರಾಮದಲ್ಲಿ ಜೆಡಿಎಸ್‌ ಕಾರ್ಯಕರ್ತರ ಸಭೆಯನ್ನು ನಡೆಸಿದ್ದಾರೆ. ಇನ್ನೊಂದೆಡೆ ಜೆಡಿಎಸ್‌ ಪ್ರಬಲ ಆಕಾಂಕ್ಷಿ ಎಚ್.ಪಿ. ಸ್ವರೂಪ್‌ ಕೂಡ, ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ.

ಕಾಂಗ್ರೆಸ್‌ನಲ್ಲಿ ಶುರುವಾಗದ ಚಟುವಟಿಕೆ

ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿಯಿಂದ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದರೂ, ಚಟುವಟಿಕೆ ಆರಂಭವಾಗಿಲ್ಲ. ಜಿಲ್ಲೆಯ ಎಲ್ಲಿಯೂ ಸಂಭವನೀಯ ಅಭ್ಯರ್ಥಿಗಳ ಓಡಾಟವಿಲ್ಲ.

ಅರಸೀಕೆರೆ, ಅರಕಲಗೂಡಿನಲ್ಲಿ ಜೆಡಿಎಸ್‌ನಿಂದ ಹೊರನಡೆದಿರುವ ಶಾಸಕರಿಗೆ ಕಾಂಗ್ರೆಸ್‌ ಟಿಕೆಟ್ ಸಿಗಬಹುದೆಂಬ ಅಂದಾಜು ಮಾಡಲಾಗುತ್ತಿದೆ. ಶ್ರವಣಬೆಳಗೊಳ, ಬೇಲೂರು, ಹಾಸನ, ಸಕಲೇಶಪುರದಲ್ಲಿ ಕಾರ್ಯಕರ್ತರಿಗೆ ಅಭ್ಯರ್ಥಿ ಯಾರೆಂಬ ಸಣ್ಣ ಸುಳಿವೂ ಇಲ್ಲ.

‘ಪಕ್ಷದಿಂದ ಹೊರನಡೆದಿರುವ ಕೆಲ ಹಾಲಿ ಶಾಸಕರು ಬಜೆಟ್‌ ಅಧಿವೇಶನ ಮುಗಿಯುತ್ತಿದ್ದಂತೆಯೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿದ್ದು, ನಂತರವಷ್ಟೇ ಯಾವ ಪಕ್ಷ ಸೇರುತ್ತಾರೆಂಬುದು ಸ್ಪಷ್ಟವಾಗಲಿದೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT