ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಣನೂರು | ನಿತ್ಯ ಮಳೆ: ಹೊಗೆಸೊಪ್ಪು ಬೆಳೆಗೆ ಬರೆ

ಗೊಬ್ಬರ ಹಾಕಲು, ಕಳೆ ತೆಗೆಯುವುದಕ್ಕೂ ಬೆಳೆಗಾರರಿಗೆ ತೊಂದರೆ
ಗಂಗೇಶ್‌ ಬಿ.ಪಿ.
Published 26 ಮೇ 2024, 5:04 IST
Last Updated 26 ಮೇ 2024, 5:04 IST
ಅಕ್ಷರ ಗಾತ್ರ

ಕೊಣನೂರು: ನಿತ್ಯ ಮಳೆ ಸುರಿಯುತ್ತಿರುವುದು ತಗ್ಗು ಪ್ರದೇಶದ ಜಮೀನಿನ ಹೊಗೆಸೊಪ್ಪು ಬೆಳೆಗಾರರಿಗೆ ತಲೆನೋವಾಗಿ ಪರಿಣಮಿಸಿದೆ. 15 ದಿನಗಳಿಂದ ನಿತ್ಯ ಸುರಿಯುತ್ತಿರುವ ಮಳೆ ಕೊಣನೂರು, ರಾಮನಾಥಪುರ ಹೋಬಳಿ ಮತ್ತು ಅರಕಲಗೂಡು ತಾಲ್ಲೂಕು ವ್ಯಾಪ್ತಿಯ ವಾಣಿಜ್ಯ ಬೆಳೆಗಾರರನ್ನು ಕಂಗಾಲಾಗಿಸಿದೆ.

ಏಪ್ರಿಲ್ ತಿಂಗಳಿನಲ್ಲಿ ಒಂದು ಬಾರಿಯೂ ಸುರಿಯದ ಮಳೆ, ಮೇನಲ್ಲಿ ಒಂದು ದಿನವೂ ಬಿಡದಂತೆ ಮಳೆ ಬೀಳುತ್ತಿರುವುದರಿಂದ ನಾಟಿ ಮಾಡಿರುವ ಸಸಿಗಳನ್ನು ಪೋಷಿಸಲು ಹೊಗೆಸೊಪ್ಪು ಬೆಳೆಗಾರರು ಹರಸಾಹಸ ಪಡಬೇಕಾಗಿದೆ. ತೇವಾಂಶ ಹೆಚ್ಚಾಗಿ ಸಸಿಗಳು ಬೇರು ಬಿಡಲು ಸಾಧ್ಯವಾಗುತ್ತಿಲ್ಲ. ನಾಟಿ ಮಾಡಿದ ಸಸಿಗಳು ಸ್ವಲ್ಪವೂ ಬೆಳವಣಿಗೆ ಆಗದೆ ನೆಲದಲ್ಲೇ ಇವೆ.

ತಗ್ಗು ಪ್ರದೇಶದ ಹೊಲ–ಗದ್ದೆಗಳಲ್ಲಂತೂ ಮಳೆಯಿಂದ ಸಂಗ್ರಹ ಆಗುತ್ತಿರುವ ಮಳೆ ನೀರಿನಿಂದಾಗಿ ಸಸಿಗಳು ಕೊಳೆತು ಹೋಗುತ್ತಿವೆ. ಮತ್ತೊಮ್ಮೆ ಸಸಿಗಳನ್ನು ನೆಡಲು ಮಡಿಗಳಲ್ಲಿದ್ದ ಸಸಿಗಳು ಮುಗಿದು ಹೋಗಿದ್ದು, ಹೊಗೆಸೊಪ್ಪು ನಾಟಿ ಮುಗಿಯುವ ಹಂತಕ್ಕೆ ತಲುಪಿದೆ. ಈ ದಿನಗಳಲ್ಲಿ ಬಹುತೇಕ ಬೆಳೆಗಾರರ ಬಳಿ ಸಸಿಗಳು ಇಲ್ಲದಿರುವುದು ದೊಡ್ಡ ತಲೆ ನೋವಾಗಿದೆ.

ನಾಟಿ ಮಾಡಿದ 10 ದಿನಗಳ ನಂತರ, ಮೊದಲ ಮೇಲು ಗೊಬ್ಬರವಾಗಿ ರಸಗೊಬ್ಬರ ನೀಡಬೇಕಿದ್ದು, ಮಳೆಯಿಂದಾಗಿ ಜಮೀನಿಗೆ ಇಳಿಯಲು ಆಗದೇ ಗೊಬ್ಬರ ಒದಗಿಸಲು ಆಗುತ್ತಿಲ್ಲ. ಮಳೆ ಬಂದು ಹಾಕಿದ ಗೊಬ್ಬರವು ಹಾಳಾಗಬಹುದು ಎಂಬ ಭಯದಿಂದ ಮನೆಯಲ್ಲಿ ಗೊಬ್ಬರ ಇಟ್ಟುಕೊಂಡು ಕುಳಿತುಕೊಳ್ಳುವಂತಾಗಿದೆ. ಸಕಾಲಕ್ಕೆ ಸರಿಯಾಗಿ ಗೊಬ್ಬರ ಹಾಕದೇ ಗಿಡಗಳು ನಿರೀಕ್ಷೆಯ ಮಟ್ಟಕ್ಕೆ ಬೆಳವಣಿಗೆಯೂ ಆಗುತ್ತಿಲ್ಲ ಎಂದು ಬೆಳೆಗಾರರು ಹೇಳುತ್ತಿದ್ದಾರೆ.

ಹೊಗೆಸೊಪ್ಪು ಸಸಿಗಳನ್ನು ನಾಟಿ ಮಾಡಿದ ಮೇಲೆ ಜಮೀನಿಗೆ ಇಳಿಯಲು ಆಗದ ಪರಿಸ್ಥಿತಿಯಲ್ಲಿ ಕಳೆಯೂ ವಿಪರೀತವಾಗಿ ಬೆಳೆದಿದ್ದು, ಅಲ್ಲಲ್ಲಿ ಬದುಕುಳಿದಿರುವ ಸಸಿಗಳನ್ನು ಪೋಷಿಸಲು ಅವಕಾಶವಾಗುತ್ತಿಲ್ಲ. ಕಳೆ ತೆಗೆದು ಸಸಿಗಳನ್ನು ಪೋಷಿಸಲು ನಿತ್ಯ ಸುರಿಯುವ ಮಳೆಯು ಅಡ್ಡಿಪಡಿಸುತ್ತಿದೆ. ಕಳೆ ಯಾವುದು ಸಸಿ ಯಾವುದು ಎಂದು ಕಾಣಿಸುತ್ತಿಲ್ಲ.

ಕೆಲವೆಡೆ ಮಳೆ ನೀರಿನ ರಭಸಕ್ಕೆ ಸಿಕ್ಕಿರುವ ಸಸಿಗಳು ಮಣ್ಣಿನಲ್ಲಿ ಮುಚ್ಚಿ ಹೋಗಿವೆ. ಬಹುತೇಕ ಅಧಿಕೃತ ತಂಬಾಕು ಬೆಳೆಗಾರರು ಈಗಾಗಲೇ ಹೊಗೆಸೊಪ್ಪಿಗೆ ಅವಶ್ಯವಿರುವ ಗೊಬ್ಬರ, ತಂಬಾಕು ಹದಗೊಳಿಸಲು ಸೌದೆ ಮತ್ತಿತರ ಪರಿಕರಗಳನ್ನು ತಂದಿಟ್ಟುಕೊಂಡಿದ್ದು, ಇದೀಗ ಮಳೆ ಬಿಡುವು ನೀಡಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಕೊಣನೂರು ಹೋಬಳಿಯ ಹೊಗೆಸೊಪ್ಪು ನಾಟಿ ಮಾಡಿರುವ ಜಮೀನಿನಲ್ಲಿ ನೀರು ಮತ್ತು ಕಳೆ ತುಂಬಿರುವುದು
ಕೊಣನೂರು ಹೋಬಳಿಯ ಹೊಗೆಸೊಪ್ಪು ನಾಟಿ ಮಾಡಿರುವ ಜಮೀನಿನಲ್ಲಿ ನೀರು ಮತ್ತು ಕಳೆ ತುಂಬಿರುವುದು
ತಡವಾಗಿಯಾದರೂ ಹೊಗೆಸೊಪ್ಪು ಸಸಿ ನಾಟಿ ಮಾಡಿದೆವು ಇದುವರೆಗೂ ನಿತ್ಯ ಮಳೆ ಬೀಳುತ್ತಿದ್ದು ಕಳೆ ಕೀಳಲು ಮಣ್ಣು ಕೊಡುವ ಗೊಬ್ಬರ ನೀಡಲು ಆಗುತ್ತಿಲ್ಲ.
ನಾಗೇಶ್ ಕಬ್ಬಳಿಗೆರೆ, ತಂಬಾಕು ಬೆಳೆಗಾರ

ಶೇ 85ರಷ್ಟು ನಾಟಿ ಪೂರ್ಣ

ಮಳೆಯ ಪ್ರಮಾಣ ಹೆಚ್ಚಿದ್ದು ಹೊಗೆಸೊಪ್ಪು ಬೆಳೆಯನ್ನು ಉಳಿಸಿಕೊಳ್ಳುವುದು ಮತ್ತು ಪೋಷಿಸುವುದು ಕಷ್ಟಕರವಾಗುತ್ತದೆ ಎಂದು ರಾಮನಾಥಪುರ ತಂಬಾಕು ಮಾರುಕಟ್ಟೆ ಅಧೀಕ್ಷಕಿ ಸವಿತಾ ಹೇಳಿದ್ದಾರೆ. ನಾಟಿ ಮಾಡಿದ 10 ರಿಂದ 15 ದಿನಗಳೊಳಗೆ ಗೊಬ್ಬರ ನೀಡಬೇಕಿದ್ದರೂ ಸತತ ಮಳೆಯಿಂದಾಗಿ ಬೆಳೆಗಾರರು ಗೊಬ್ಬರ ಹಾಕಬೇಕೋ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ. ಶೇ 85ರಷ್ಟು ಸಸಿ ನಾಟಿ ಮುಗಿದಿದೆ. ಸಸಿಗಳು ಸತ್ತಿರುವ ಸ್ಥಳಕ್ಕೆ ಹೊಸ ಸಸಿಗಳನ್ನು ನೆಡುವ ಕಡೆ ಗಮನಕೊಡಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT