ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಆಗ್ರಹ

ವೈದ್ಯರ ಕೊರತೆ: ತಾಪಂ ಪಗ್ರತಿ ಪರಿಶೀಲನಾ ಸಭೆಯಲ್ಲಿ ಅಸಮಾಧಾನ
Last Updated 21 ಜನವರಿ 2021, 1:37 IST
ಅಕ್ಷರ ಗಾತ್ರ

ಅರಕಲಗೂಡು: ತಾಲ್ಲೂಕಿನ ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ರೋಗಿಗಳಿಗೆ ಚಿಕಿತ್ಸೆ ದೊರೆಯುತ್ತಿಲ್ಲ. ಜನರು ಚಿಕಿತ್ಸೆಗೆ ಬೇರೆ ತಾಲ್ಲೂಕಿಗೆ ಹೋಗುವ ಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ವೈದ್ಯರ ಕೊರತೆ ನೀಗಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು

ತಾ.ಪಂ ಅಧ್ಯಕ್ಷೆ ಪದ್ಮಾ ಮಹೇಶ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಲವು ಸದಸ್ಯರು ಸಮಸ್ಯೆ ಬಿಚ್ಚಿಟ್ಟರು.

ಕೊಣನೂರು ಕ್ಷೇತ್ರದ ಜಿ.ಪಂ ಸದಸ್ಯ ಶ್ರೀನಿವಾಸ್ ಮಾತನಾಡಿ, ‘ಕೊಣನೂರು ಆಸ್ಪತ್ರೆಯಲ್ಲಿ ಒಂದು ವರ್ಷದಿಂದ ವೈದ್ಯರಿಲ್ಲ, ಬಡಜನರು ತೀವ್ರ ತೊಂದರೆಗೊಳಗಾಗಿದ್ದಾರೆ. ಪಕ್ಕದ ಹೊಳೆನರಸೀಪುರ, ಚನ್ನರಾಯಪಟ್ಟಣ, ಹಾಸನ ತಾಲ್ಲೂಕುಗಳಲ್ಲಿ ವೈದ್ಯರ ಕೊರತೆ ಇಲ್ಲ ತಾಲ್ಲೂಕಿನಲ್ಲಿ ಮಾತ್ರ ಈ ದುಃಸ್ಥಿತಿ ಏಕೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ನಾಯಿ ಕಡಿತ ಪ್ರಕರಣ ಹೆಚ್ಚಿವೆ. ಡಿಸೆಂಬರ್‌ನಲ್ಲಿ 146 ಮಂದಿ ಹಾಗೂ ಕಳೆದ ಒಂದು ವರ್ಷದಲ್ಲಿ 1,376 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ವಹಿಸಬೇಕು’ ಎಂದು ಮಲ್ಲಿಪಟ್ಟಣ ಕ್ಷೇತ್ರದ ಜಿ.ಪಂ ಸದಸ್ಯ ರೇವಣ್ಣ ಒತ್ತಾಯಿಸಿದರು.

‘ತಾಲ್ಲೂಕಿನ ದುಮ್ಮಿ ಗ್ರಾಮ ಸೇರಿದಂತೆ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಡೆಂಗಿ ಜ್ವರ ಸಾಮಾನ್ಯವಾಗಿದೆ. ಇದರ ಕಾರಣ ಕುರಿತು ಪರಿಶೀಲಿಸಿ ಸ್ವಚ್ಛತೆಗೆ ಗಮನಹರಿಸುವಂತೆ’ ದೊಡ್ಡಮಗ್ಗೆ ಕ್ಷೇತ್ರದ ಜಿ.ಪಂ ಸದಸ್ಯ ಬಿ.ಎಂ.ರವಿ ಒತ್ತಾಯಿಸಿದರು.

‘ಪಟ್ಟಣದಲ್ಲಿ ನಿರ್ಮಿಸುತ್ತಿರುವ ಅಂಬೇಡ್ಕರ್ ಭವನ ಕಾಮಗಾರಿ ಕಳಪೆಯಾಗಿದೆ. ಈ ಕುರಿತು ತನಿಖೆಯ ವರದಿ ಬಂದಿದ್ದರೂ ಬೇರೆ ಇಲಾಖೆಗೆ ವಹಿಸಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಂಡಿಲ್ಲ, ಗ್ರಾಮೀಣ ಭಾಗಗಳಲ್ಲಿ ಬಹಳಷ್ಟು ಅಂಬೇಡ್ಕರ್ ಭವನಗಳ ಕಾಮಗಾರಿ ಸ್ಥಗಿತಗೊಂಡಿದ್ದು ಕ್ರಮ ಕೈಗೊಳ್ಳುವಂತೆ’ ಸದಸ್ಯ ರವಿ ಆಗ್ರಹಿಸಿದರು.

‘ಮಕ್ಕಳ ಶೂ ಖರೀದಿ ಪ್ರಕರಣದಲ್ಲಿ ಅಕ್ರಮ ನಡೆದಿರುವ ಕುರಿತು ಚರ್ಚೆ ನಡೆದು ಇಒ ನೇತೃತ್ವದಲ್ಲಿ 5 ಮಂದಿಯ ತನಿಖಾ ಸಮಿತಿ ರಚನೆಯಾಗಿತ್ತು. ಯಾರದೋ ಒತ್ತಡಕ್ಕೆ ಮಣಿದು ತಪ್ಪಿತಸ್ಥರನ್ನು ರಕ್ಷಣೆ ಮಾಡಿ, ಅಮಾಯಕರನ್ನು ಬಲಿಪಶು ಮಾಡುವಂತೆ ಸಮಿತಿ ವರದಿ ನೀಡಿದೆ. ತಂಡದೊಂದಿಗೆ ಜಿ.ಪಂ ಸದಸ್ಯರೂ ಹಲವು ಶಾಲೆಗಳಿಗೆ ಭೇಟಿ ನೀಡಿದ್ದೆವು. ಅಲ್ಲಿ ಶಿಕ್ಷಕರು ನೀಡಿದ್ದ ಹೇಳಿಕೆಗಳನ್ನು ವರದಿಯಲ್ಲಿ ತಿರುಚಲಾಗಿದೆ. ಸೂಕ್ತ ದಾಖಲೆಗಳೊಂದಿಗೆ ವರದಿಯನ್ನು ಅಧ್ಯಕ್ಷರಿಗೆ ನೀಡಲಿ. ನಾವೂ ಸಹ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ’ ಎಂದು ಸದಸ್ಯರಾದ ರೇವಣ್ಣ, ಶ್ರೀನಿವಾಸ್, ರವಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ವೀರಾಜ್ ಆಗ್ರಹಿಸಿದರು.

ಕಾನೂನು ಹೋರಾಟ– ಎಚ್ಚರಿಕೆ

‘ಎಂಎಸ್‌ಪಿಟಿಸಿ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಪೋಷಕಾಂಶಯುಕ್ತ ಆಹಾರ ಸರಬರಾಜಿನಲ್ಲಿ ಅಕ್ರಮ ನಡೆದು ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ. ಶಾಸಕರೂ ಸಹ ಅಕ್ರಮ ನಡೆದಿರುವ ಕುರಿತು ತನಿಖೆಗೆ ಆಗ್ರಹಿಸಿದ್ದರು. ಆದರೂ ಈ ಕುರಿತು ತಾ.ಪಂ ಇಒ ಗಮನಹರಿಸಿಲ್ಲ’ ಎಂದು ಸದಸ್ಯ ರೇವಣ್ಣ ಆರೋಪಿಸಿ ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಹೊನ್ನವಳ್ಳಿ ಕ್ಷೇತ್ರದ ಜಿಪಂ ಸದಸ್ಯೆ ರತ್ನಮ್ಮ ಲೋಕೇಶ್, ಇಒ ಎನ್.ರವಿಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT