ಬುಧವಾರ, ಮಾರ್ಚ್ 29, 2023
32 °C
ನೂಕುನುಗ್ಗಲು ನಿಯಂತ್ರಿಸಲು ಪೊಲೀಸರ ಹರಸಾಹಸ

ಶಕ್ತಿದೇವತೆ ದರ್ಶನಕ್ಕೆ ಭಕ್ತರ ಮಹಾಪೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಹಾಸನಾಂಬ ದರ್ಶನೋತ್ಸವದ ಏಳನೇ ದಿನವಾದ ಬುಧವಾರ ಭಕ್ತರ ಮಹಾಪೂರವೇ ಹರಿದು ಬಂತು. ಅಪಾರ ಸಂಖ್ಯೆಯ ಭಕ್ತರು ಸರದಿ ಸಾಲಿನಲ್ಲಿ ತಾಸುಗಟ್ಟಲೇ ನಿಂತು ದೇವಿ ದರ್ಶನ ಪಡೆದರು.

ಬೆಳಿಗ್ಗೆ 5 ಗಂಟೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ನರಕ ಚತುದರ್ಶಿ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆ ಇದ್ದ ಕಾರಣ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಸರದಿ ಸಾಲಿನಲ್ಲಿ ನೂಕು ನುಗ್ಗಲು ಉಂಟಾಗಿ, ಪೊಲೀಸರು ಭಕ್ತರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

ಅರಕಲಗೂಡು ತಾಲ್ಲೂಕು ಅರೇಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಪೀಠದ ಶಿವಸುಜ್ಞಾನತೀರ್ಥ
ಸ್ವಾಮೀಜಿ, ಹಿರಿಯೂರಿನ ವಿಶ್ವಕರ್ಮ ಪೀಠದ ಜ್ಞಾನಭಾಸ್ಕರ ಸ್ವಾಮೀಜಿ, ಹೈಕೋರ್ಟ್‌ ವಕೀಲ ಜಯಕುಮಾರ ಪಾಟೀಲ, ಶಾಸಕ ಎಚ್.ಡಿ.ರೇವಣ್ಣ, ಬಿಜೆಪಿ ರಾಜ್ಯ ಘಟಕ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಪ್ರೀತಂ ಗೌಡ, ನಟ ಶಶಿಕುಮಾರ್‌, ತಬಲಾ ನಾಣಿ, ತುಮಕೂರು ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪೂರವಾಡ್ ಹಾಗೂ ಇತರೆ ಗಣ್ಯರ ತಮ್ಮ ಕುಟುಂಬದವರ ಜತೆ ದೇವಿ ದರ್ಶನ ಪಡೆದರು.

ಗಣ್ಯರನ್ನು ಜಿಲ್ಲಾಧಿಕಾರಿ ಆರ್. ಗಿರೀಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ತಹಶೀಲ್ದಾರ್ ನಟೇಶ್ ಅವರು ಸನ್ಮಾನಿಸಿದರು.

ಹಾಸನಾಂಬೆ ದರ್ಶನಕ್ಕೆ ಮೂರು ದಿನಗಳಿಂದ ಭಕ್ತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಭಕ್ತ ಜನರನ್ನು ನಿಯಂತ್ರಿಸಲು ಹೊಸದಾಗಿ ಕಮಾಂಡೋ ಪಡೆ ನಿಯೋಜನೆ ಮಾಡಲಾಗಿದೆ.

ನೂಕು ನುಗ್ಗಲು ಉಂಟಾಗಿದ್ದರಿಂದ ವಾಗ್ವಾದಕ್ಕೂ ಎಡೆ ಮಾಡಿಕೊಟ್ಟಿತ್ತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ಕಮಾಂಡೋ ಪಡೆಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

ದೇವಾಲಯದ ಪ್ರವೇಶಕ್ಕೆ ಸರತಿ ಸಾಲಿನಲ್ಲಿ ಸಾಗುವ ಧರ್ಮದರ್ಶನ, ಹಿಂಬಾಗಿಲಿನ ಮೂಲಕ ಒಳ
ಪ್ರವೇಶಿಸುವ ₹ 300 ಮೊತ್ತದ ಟಿಕೆಟ್‌ ಪಡೆಯುವ ವಿಶೇಷ ದರ್ಶನ, ರಾಜಗೋಪುರದ ಪಕ್ಕದಲ್ಲಿ ಹೋಗುವ ₹ 1 ಸಾವಿರ ಮೊತ್ತದ ಟಿಕೆಟ್ ಪಡೆಯುವ ನೇರ ದರ್ಶನದ ವ್ಯವಸ್ಥೆಗಳಿದ್ದರೂ ಶಿಫಾರಸು ಮೂಲಕ ಒಳ ಪ್ರವೇಶಿಸಲು ಬಯಸುವವರ ಸಂಖ್ಯೆ ಹೆಚ್ಚಾಗಿತ್ತು.

ಹಾಸನಾಂಬೆ ದೇವಾಲಯದ ಕಾಣಿಕೆ ರೂಪದ ಆದಾಯ ಈ ಬಾರಿ ಹಿಗ್ಗುವ ಸಾಧ್ಯತೆ ಇದೆ. ಕಳೆದ ವರ್ಷ
ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕ ದರ್ಶನ ನಿಷೇಧ ಮಾಡಿದ್ದರಿಂದ ಆದಾಯವೂ ಗಣನೀಯವಾಗಿ
ಇಳಿಕೆಯಾಗಿ ಕೇವಲ ₹ 21.34 ಲಕ್ಷ ಸಂಗ್ರಹವಾಗಿತ್ತು. ಈ ಬಾರಿ ನಾಲ್ಕೈದು ದಿನದಲ್ಲೇ ವಿವಿಧ ರೂಪದ
ಆದಾಯ ಲಕ್ಷ ಲಕ್ಷ ಸಂಗ್ರಹವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.