ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈತರನ್ನು ಒಕ್ಕಲೆಬ್ಬಿಸುತ್ತಿರುವ ಸರ್ಕಾರ: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ

ಜೆಡಿಎಸ್‌ ನಾಯಕರಿಂದ ಜಿಲ್ಲೆಯ ಬರ ವೀಕ್ಷಣೆ: ರೈತರಿಂದ ಮಾಹಿತಿ
Published 22 ನವೆಂಬರ್ 2023, 15:50 IST
Last Updated 22 ನವೆಂಬರ್ 2023, 15:50 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಜಿಲ್ಲೆಯ ಜೆಡಿಎಸ್ ಶಾಸಕರು ಬುಧವಾರ ತಾಲ್ಲೂಕಿನ ಗೌಡಗೆರೆ ಗ್ರಾಮದಲ್ಲಿ ಬರ ವೀಕ್ಷಣೆ ಮಾಡಿದರು. ಬರಗಾಲದಿಂದ ಹಾನಿಯಾಗಿರುವ ಬೆಳೆಯನ್ನು ವೀಕ್ಷಿಸಿ, ರೈತರಿಂದ ಮಾಹಿತಿ ಪಡೆದುಕೊಂಡರು.

ಗ್ರಾಮದ ಸರೋಜಮ್ಮ 1.13 ಎಕರೆಯಲ್ಲಿ ಬೆಳೆದಿದ್ದ ರಾಗಿ, ಮಳೆಯ ಅಭಾವದಿಂದ ನಷ್ಟ ಉಂಟಾಗಿದೆ. ಮಳೆ, ಬೆಳೆ ಇಲ್ಲದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು. ಒಣಗಿ ನಿಂತ ಮುಸುಕಿನ ಜೋಳ, ರಾಗಿ ಬೆಳೆಯನ್ನು ರೈತರು ತೋರಿಸಿದರು.

ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ರಾಜ್ಯದಲ್ಲಿ ಬರಗಾಲ ಆವರಿಸಿದೆ. ಇಂಥ ಸಂದರ್ಭದಲ್ಲಿ ಅಕ್ಟೋಬರ್ 22ರಿಂದ ಹೊಸ ಆದೇಶದ ಪ್ರಕಾರ ವಿದ್ಯುತ್ ಸಂಪರ್ಕ ಪಡೆಯಲು ಮತ್ತು ವಿದ್ಯುತ್ ಪರಿವರ್ತಕ ಅಳವಡಿಸಿಕೊಳ್ಳಲು ರೈತರು ಹಣ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರನ್ನು ಒಕ್ಕಲೆಬ್ಬಿಸಿದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ಜಿಲ್ಲೆಯಲ್ಲಿ 1,54,790 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ₹ 131 ಕೋಟಿ ನಷ್ಟ ಸಂಭವಿಸಿದೆ. ರಾಜ್ಯಸರ್ಕಾರ ಕೇಂದ್ರ ಸರ್ಕಾರವನ್ನು ದೂಷಣೆ ಮಾಡುವುದರಲ್ಲಿ ಕಾಲ ಕಳೆಯುತ್ತಿದೆ ಎಂದು ದೂರಿದರು.

ಕಾಂಗ್ರೆಸ್ ಶಾಸಕರು, ಸಚಿವರು ತಮ್ಮ ಪಾಡಿಗೆ ತಾವು ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ನೀವು ಏನಾದರೂ ಮಾಡಿಕೊಳ್ಳಿ. ಮೊದಲು ರಾಜ್ಯದ ರೈತರನ್ನು ಉಳಿಸಿ ಎಂದ ಅವರು, ರೈತರಿಗೆ ಪರಿಹಾರ ನೀಡಲು ಈ ಸರ್ಕಾರದಲ್ಲಿ ಹಣ ಇಲ್ಲದಂತಾಗಿದೆ ಎಂದು ಆಪಾದಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸನಕ್ಕೆ ಬಂದಿದ್ದಾಗ ₹ 12 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು. ಆದರೆ ಮಾರ್ಗಸೂಚಿಯಂತೆ ಇದುವರೆಗೆ ಬಿಡಿಗಾಸು ಖರ್ಚು ಮಾಡಿಲ್ಲ ಎಂದು ಹೇಳಿದರು. ಅರಕಲಗೂಡು ಶಾಸಕ ಎ. ಮಂಜು, ಹಾಸನ ಶಾಸಕ ಸ್ವರೂಪ್ ಪ್ರಕಾಶ್, ಅಧಿಕಾರಿಗಳು ಇದ್ದರು.

ಅರಸೀಕೆರೆ ವರದಿ:

ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ರೈತರ ಸಾಲಮನ್ನಾ ಹಾಗೂ ಬೆಳೆ ಪರಿಹಾರದ ಸ್ಪಷ್ಟ ನಿರ್ಣಯ ಕೈಗೊಳ್ಳುವವರೆಗೆ ಯಾವುದೇ ವಿಷಯವನ್ನು ಚರ್ಚೆ ಮಾಡಲು ಅವಕಾಶ ಕೊಡುವುದಿಲ್ಲ. ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ಇಲ್ಲದೇ ಹೋದರೆ ಜೆಡಿಎಸ್ ಶಾಸಕರು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಶಾಸಕ ಎಚ್.ಡಿ. ರೇವಣ್ಣ ತಿಳಿಸಿದರು.

ತಾಲ್ಲೂಕಿನ ಕಾಮಸಮುದ್ರ ಗ್ರಾಮದಲ್ಲಿ ಬರವೀಕ್ಷಣೆ ನಂತರ ಮಾತನಾಡಿದ ಅವರು, ಸರ್ಕಾರ ಪಡಿತರ ಸಾಮಗ್ರಿಗೆ ಸಂಬಂಧಿಸಿದಂತೆ 3 ಕೆ.ಜಿ. ಅಕ್ಕಿ ಒಂದೂವರೆ ಕೆ.ಜಿ. ರಾಗಿ ಹಾಗೂ ಅರ್ಧ ಕೆ.ಜಿ. ಮಣ್ಣು ನೀಡುತ್ತಿದ್ದು, ರಾಜ್ಯ ಸರ್ಕಾರದ ಲೋಪದೋಷಕ್ಕೆ ಸಾಕ್ಷಿಯಾಗಿದೆ ಎಂದರು.

ಸಾಲ ಸೋಲ ಅಷ್ಟೇ ಅಲ್ಲದೇ ಹೆಂಡತಿಯರ ಮಾಂಗಲ್ಯವನ್ನು ಮಾರಿ, ರೈತರು ಕೃಷಿ ಚಟುವಟಿಕೆಗೆ ಹಣ ತೊಡಗಿಸಿದ್ದಾರೆ. ಮಳೆ ಕೈಕೊಟ್ಟಿದ್ದರಿಂದ ಮಾಡಿದ ಸಾಲ ತೀರಿಸಲಾಗದೇ, ಸಾವಿನ ಕಡೆ ಮುಖ ಮಾಡುತ್ತಿದ್ದಾರೆ. ಇದರ ಬಗ್ಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚುನಾವಣೆಯ ಸಂದರ್ಭದಲ್ಲಿ ಕೊಬ್ಬರಿಗೆ ₹3ಸಾವಿರ ಪ್ರೋತ್ಸಾಹಧನ ನೀಡುವುದಾಗಿ ಹೇಳಿದ್ದರು. ಈಗ ಕೊಬ್ಬರಿ ಬೆಳೆಗಾರರ ಅಳಲು ಆಲಿಸುತ್ತಿಲ್ಲ. ನಾಫೆಡ್‌ ಮೂಲಕ ಕೊಬ್ಬರಿ ಖರೀದಿಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಬೊಟ್ಟು ತೋರದೇ ಸಂಕಷ್ಟದಲ್ಲಿರುವ ರೈತರಿಗೆ ₹ 3ಸಾವಿರ ಹಾಕಲಿ. ನುಡಿದಂತೆ ನಡೆಯಲಿ ಎಂದು ಹೇಳಿದರು.

ಶಾಸಕರಾದ ಸಿ.ಎನ್‌. ಬಾಲಕೃಷ್ಣ, ಸ್ವರೂಪ್ ಪ್ರಕಾಶ್‌, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್. ಚಂದ್ರಶೇಖರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗಂಗಾಧರ್, ಜೆಡಿಎಸ್ ಮುಖಂಡರಾದ ಬಣಾವಾರ ಅಶೋಕ್, ಬಸಲಿಂಗಪ್ಪ ಬಿ.ಜಿ., ನಿರಂಜನ ಕುಡುಕುಂದಿ, ಕುಮಾರ್, ಸಿಕಂದರ್ ಹರ್ಷವರ್ಧನ್, ರಮೇಶ್, ಶೇಖರ ನಾಯ್ಕ, ಮೇಳೆನಹಳ್ಳಿ ಮಲ್ಲಿಕಾರ್ಜುನ್ ಇದ್ದರು.

ತೆಲಂಗಾಣ ಚುನಾವಣೆಯಲ್ಲಿ ಸರ್ಕಾರ ನಿರತರವಾಗಿದ್ದು ರಾಜ್ಯದ ರೈತರ ಬಗ್ಗೆ ನಿರ್ಲಕ್ಷ್ಯ ಮನೋಭಾವ ಹೊಂದಿ ರಾಜ್ಯದ ಅಭಿವೃದ್ದಿಯನ್ನೇ ಮರೆತಿದೆ.
ಎಚ್.ಡಿ. ರೇವಣ್ಣ ಶಾಸಕ
ರೈತರ ಬದುಕು ಅತಂತ್ರವಾಗಿದೆ. ಬಿತ್ತನೆ ಮಾಡಿದ್ದ ಬೆಳೆಗಳೆಲ್ಲ ಹಾಳಾಗಿವೆ. ಆದರೆ ಇದುವರೆಗೆ ರಾಜ್ಯ ಸರ್ಕಾರದ ಸಚಿವರು ರೈತರ ಜಮೀನಿಗೆ ಭೇಟಿ ನೀಡಿಲ್ಲ.
ಸಿ.ಎನ್. ಬಾಲಕೃಷ್ಣ ಶಾಸಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT