ಬುಧವಾರ, ಏಪ್ರಿಲ್ 14, 2021
28 °C
ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್‌ ಸೂಚನೆ

ನೀರು, ಮೇವಿಗೆ ತೊಂದರೆಯಾಗದಿರಲಿ: ಹಾಸನ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆ.ಡಿ.ಪಿ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 15 ದಿನಗಳಲ್ಲಿ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗುವ ಸಾಧ್ಯತೆ ಇದೆ. ಅಧಿಕಾರಿಗಳು ಈಗಲೇ ಸಿದ್ಧತೆ ಕೈಗೊಳ್ಳಬೇಕು. ನೀರಿನ ಅಭಾವ ಇರುವ ಕಡೆ ಖಾಸಗಿ ಕೊಳವೆ ಬಾವಿಗಳನ್ನು ವಶಕ್ಕೆ ಪಡೆಯಬಹುದು. ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ ಜಾನುವಾರುಗಳಿಗೆ ಮೇವು ಕೊರತೆ ಉಂಟಾಗುವ ಸಾಧ್ಯತೆ ಇದ್ದು, ಅಲ್ಲಲ್ಲಿ ಮೇವು ಬ್ಯಾಂಕ್‌ ತೆರೆಯುವಂತೆ ಪಶುಪಾಲನೆ ಇಲಾಖೆ ಅಧಿಕಾರಿಗೆ ತಿಳಿಸಿದರು.

ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಔಷಧಿಗಳನ್ನು ಒದಗಿಸಬೇಕು. ಮುಂಗಾರು ಮಳೆಯಿಂದ ಕೆಲವು ಬೆಳೆಗಳು ನಾಶವಾಗಿದ್ದು, ಬೆಳೆ ವಿಮೆ ಪಡೆಯಲು ಸಹಕಾರಿಯಾಗುವಂತೆ ತಾಕುಗಳಿಗೆ ಖುದ್ದು ಭೇಟಿ ನೀಡಿ ಸಮೀಕ್ಷೆ ನಡೆಸಿ ನಿಖರವಾದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೃಷಿ ಉತ್ಪನ್ನ ಸಂಸ್ಕರಣೆಗೆ ಟಾರ್ಪಲ್‍ಗಳ ಬೇಡಿಕೆ ಹೆಚ್ಚಾಗುತ್ತಿದ್ದು, ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸಬೇಕು. ನೀರು ಮತ್ತು ಮೇವಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕು ಎಂದರು.

ಕೋವಿಡ್‌ ಎರಡನೇ ಅಲೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಹೊರ ರಾಜ್ಯದಿಂದ ಬರುವವರಿಗೆ ಕೋವಿಡ್‌ ತಪಾಸಣೆ ನಡೆಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ಸತೀಶ್‍ಕುಮಾರ್ ಮಾತನಾಡಿ, ಈವರೆಗೆ 17 ಸಾವಿರ ಜನರಿಗೆ ಕೋವಿಡ್‌ ಲಸಿಕೆ ಹಾಕಲಾಗಿದ್ದು, ಯಾವುದೇ ಅಡ್ಡಪರಿಣಾಮ ಕಂಡು ಬಂದಿಲ್ಲ. ಕೋವಿಡ್ 2ನೇ ಅಲೆ ತಡೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಹಾರಾಷ್ಟ್ರದಿಂದ ಚನ್ನರಾಯಪಟ್ಟಣಕ್ಕೆ ನಿತ್ಯ 5 ಬಸ್‍ಗಳು
ಬರುತ್ತಿದ್ದು, ಕೋವಿಡ್‌ ಪರೀಕ್ಷಾ ನೆಗೆಟಿವ್ ವರದಿ ಇಲ್ಲದವರನ್ನು ಆಸ್ಪತ್ರೆಗೆ ಕರೆದೊಯ್ದು ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ವಿವರಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಸ್. ಪ್ರಕಾಶ್ ಮಾತನಾಡಿ, 2020-21ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದಿದ್ದ 84 ಮಕ್ಕಳ ಪೈಕಿ 11 ಮಕ್ಕಳು ಶಾಲೆಗೆ ಬರುತ್ತಿದ್ದಾರೆ. 73 ವಿದ್ಯಾರ್ಥಿಗಳಲ್ಲಿ 64 ಮಕ್ಕಳು ವಲಸೆ ಹೋಗಿದ್ದು, 6 ಮಂದಿ ವ್ಯಾಸಂಗಕ್ಕೆ ನಿರಾಸಕ್ತಿ ತೋರಿದ್ದಾರೆ. ಅನಾರೋಗ್ಯ ಕಾರಣದಿಂದ 2 ಹಾಗೂ 1 ವಿದ್ಯಾರ್ಥಿ ಕೌಟುಂಬಿಕ ಸಮಸ್ಯೆಯಿಂದ ಶಾಲೆಗೆ ಬರುತ್ತಿಲ್ಲ ಎಂದು ಮಾಹಿತಿ ನೀಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಜೂನ್ 14 ರಿಂದ ಪ್ರಾರಂಭವಾಗಲಿದ್ದು, ಏಪ್ರಿಲ್ ಅಂತ್ಯಕ್ಕೆ ಪಾಠ ಬೋಧನೆ ಮುಗಿಸಲು ಗುರಿ ನೀಡಲಾಗಿದೆ. ಸ್ಥಳೀಯವಾಗಿ 3 ಹಾಗೂ ಶಿಕ್ಷಣ ಇಲಾಖೆಯಿಂದ 2 ಪೂರಕ ಪರೀಕ್ಷೆ ನಡೆಸಲು ನಿರ್ಧರಿಸಲಾಗುವುದು. ಕಳೆದ ಸಾಲಿನಲ್ಲಿ ಕಡಿಮೆ ಫಲಿತಾಂಶ ಗಳಿಸಿದ ಶಾಲೆಯನ್ನು ಅಧಿಕಾರಿಗಳು ದತ್ತು ಪಡೆದಿದ್ದಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಕ್ರಮ ವಹಿಸಲಾಗಿದ್ದು, ತಾಯಂದಿರು ಹಾಗೂ ಪೊಷಕರ ಸಭೆ ನಡೆಸಲಾಗುತ್ತಿದೆ ಎಂದರು.

ಕೃಷಿ ಇಲಾಖೆ ಅಧಿಕಾರಿ ಸುಷ್ಮಾ ಮಾತನಾಡಿ, ಕೆಲ ದಿನಗಳ ಹಿಂದೆ ಸುರಿದ ಆಲಿಕಲ್ಲು ಸಹಿತ ಅಕಾಲಿಕ ಮಳೆಗೆ ಅರಕಲಗೂಡು ತಾಲ್ಲೂಕಿನ 17 ಹೆಕ್ಟೇರ್ ಬೆಳೆ ನಾಶವಾಗಿದ್ದು, ತಹಶೀಲ್ದಾರ್ ನೇತೃತ್ವದಲ್ಲಿ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಜಿಲ್ಲೆಯ ಐದು ಕಡೆ ಮಣ್ಣು ಪರೀಕ್ಷಾ ಪ್ರಯೋಗಾಲಯ ತೆರೆದಿದ್ದು, ವ್ಯವಸ್ಥಿತ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಚ್. ಮಂಜುನಾಥ್ ಮಾತನಾಡಿ, ಲಾಕ್ ಡೌನ್ ಸಮಯದಲ್ಲಿ ಕೋವಿಡ್ ಕೇಂದ್ರಗಳಾಗಿ ಬದಲಾಗಿದ್ದ ವಸತಿ ನಿಲಯಗಳನ್ನು ವಾಪಸ್ ಪಡೆದಿದ್ದು, ಪ್ರತಿ ಎರಡು ದಿನಕ್ಕೊಮ್ಮೆ ಸ್ಯಾನಿಟೈಸ್ ಮಾಡಲಾಗುತ್ತಿದೆ. ಕೊರೊನಾ ಸೋಂಕಿತರು ಬಳಸುತ್ತಿದ್ದ ಹಾಸಿಗೆಯನ್ನು ಮಕ್ಕಳಿಗೆ ನೀಡಿಲ್ಲ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ನಾಗರಾಜ್, ಉಪ ಕಾರ್ಯದರ್ಶಿ ಚಂದ್ರಶೇಖರ್, ಪೊಲೀಸ್ ಉಪ ಅಧೀಕ್ಷಕ ಪುಟ್ಟಸ್ವಾಮಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.